ಹನುಮಸಾಗರ: ಪಟ್ಟಣದ ಎಫ್–7 ಮನ್ನೆರಾಳ–ಮುದುಟಗಿ ಸೀಮೆಗೆ ಸಂಬಂಧಿಸಿದ ರೈತರು ಸೋಮವಾರ ಜೆಸ್ಕಾಂ ಕಚೇರಿಗೆ ಭೇಟಿ ನೀಡಿ, ತೋಟದ ವಿದ್ಯುತ್ ಲೈನ್ ಓವರ್‌ಲೋಡ್‌ನಿಂದ ಪದೇ ಪದೇ ಟ್ರಿಪ್ ಆಗುತ್ತಿರುವುದರಿಂದ ಕೃಷಿ ಚಟುವಟಿಕೆಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈಗಾಗಲೇ ಮಳೆ ಅಭಾವದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ವಿದ್ಯುತ್ ಪೂರೈಕೆಯಲ್ಲೂ ವ್ಯತ್ಯಯ ಉಂಟಾದರೆ ಕೃಷಿ ಸಂಪೂರ್ಣ ಹಾನಿಯಾಗುವ ಅಪಾಯವಿದೆ. ಆದ್ದರಿಂದ ಮನ್ನೆರಾಳ–ಮುದುಟಗಿ ಭಾಗದ ರೈತರಿಗೆ ಪ್ರತ್ಯೇಕ ಡಿಸ್ಟ್ರಿಬ್ಯೂಷನ್ ಟ್ರಾನ್ಸ್‌ಫಾರ್ಮರ್ (ಡಿಸಿ/ಟಿಸಿ) ಅಳವಡಿಸಿ, ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಒದಗಿಸಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜೆಸ್ಕಾಂ ಶಾಖಾಧಿಕಾರಿ ಮೌಲಾಸಾಬ, ರೈತರ ಎಲ್ಲಾ ಆರ್‌ಆರ್ ಸಂಖ್ಯೆಗಳ ವಿವರ ಲಭ್ಯವಾದರೆ ಸಮಸ್ಯೆಯನ್ನು ಶೀಘ್ರ ಪರಿಹರಿಸಲು ಅನುಕೂಲವಾಗುತ್ತದೆ. ಈ ಭಾಗದಲ್ಲಿ ಕೃಷಿ ಪಂಪ್‌ಸೆಟ್‌ಗಳ ಸಂಖ್ಯೆ ಹೆಚ್ಚಿರುವುದರಿಂದ ಒಂದೇ ಲೈನ್ ಮೇಲೆ ಹೆಚ್ಚಿನ ಹೊರೆ ಬಿದ್ದಿದ್ದು, ಅದರಿಂದ ಓವರ್‌ಲೋಡ್ ಉಂಟಾಗಿ ಟ್ರಿಪ್ಪಿಂಗ್ ಹಾಗೂ ವೋಲ್ಟೇಜ್ ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತಿವೆ ಎಂದು ಹೇಳಿದರು.ಬಂಡರಗಲ್ಲ ಭಾಗದಲ್ಲಿರುವ ವಿದ್ಯುತ್ ಉಪಕರಣಗಳಲ್ಲಿ ಅಗತ್ಯ ಬದಲಾವಣೆ ಕೈಗೊಳ್ಳಲಾಗುವುದು. ಟ್ರಾನ್ಸ್‌ಫಾರ್ಮರ್ ಬದಲಾವಣೆಗೂ ಕ್ರಮ ಕೈಗೊಳ್ಳಲಾಗುತ್ತದೆ. ಹನುಮಸಾಗರ, ಹನುಮನಾಳ ಹಾಗೂ ಗೊಣ್ಣಾಗರ ಭಾಗಗಳಿಗೆ ತಲಾ ಸುಮಾರು ಎರಡು ಕೋಟಿ ರು. ವೆಚ್ಚದ ವಿದ್ಯುತ್ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರ ಈಗಾಗಲೇ ಅನುಮೋದನೆ ನೀಡಿದೆ. ಆದರೆ ಕಾಮಗಾರಿಗಳ ಟೆಂಡರ್ ಅನ್ನು ನಾಲ್ಕು ಬಾರಿ ಕರೆದರೂ ಯಾವುದೇ ಗುತ್ತಿಗೆದಾರರು ಮುಂದೆ ಬಂದಿಲ್ಲ. ಈ ಕುರಿತು ಸ್ಥಳೀಯ ಶಾಸಕರ ಗಮನಕ್ಕೂ ತರಲಾಗಿದ್ದು, ಮೇಲಧಿಕಾರಿಗಳಿಗೂ ವರದಿ ಸಲ್ಲಿಸಲಾಗಿದೆ. ಸರ್ಕಾರದಿಂದ ಹೊಸ ಟ್ರಾನ್ಸ್‌ಫಾರ್ಮರ್ ಹಾಗೂ ಅಗತ್ಯ ಸೌಲಭ್ಯಗಳು ದೊರೆತರೆ ಈ ಭಾಗದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸಾಧ್ಯವಾದಷ್ಟು ಬೇಗ ಪರಿಹಾರ ಕಲ್ಪಿಸಲಾಗುವುದು ಎಂದು ಅವರು ಭರವಸೆ ನೀಡಿದರು.