ಅಜೀಜಅಹ್ಮದ ಬಳಗಾನೂರ
ಧಾರವಾಡ: ರಾಜ್ಯ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ(ವಾಲ್ಮಿ)ಯಿಂದ ಕೃಷಿಮೇಳದಲ್ಲಿ ಸಿದ್ಧಪಡಿಸಲಾದ "ಸ್ವಯಂಚಾಲಿತ ಸೂಕ್ಷ್ಮ ನೀರಾವರಿ ಘಟಕದ ಮಾದರಿ " ರೈತರ ಮೆಚ್ಚುಗೆಗೆ ಕಾರಣವಾಗಿದೆ. ಈ ಮೂಲಕ ಹನಿ ನೀರಾವರಿ ಬಳಕೆ ಕುರಿತು ಜಾಗೃತಿ ಮೂಡಿಸುತ್ತಿದೆ.ಅಗತ್ಯವಿದ್ದಷ್ಟು ಮಾತ್ರ ನೀರನ್ನು ಬಳಸಿ, ನಷ್ಟವಿಲ್ಲದೇ ಪೂರೈಕೆಯಿಂದ ನೀರು ಉಳಿಸಿ ಎಂಬ ತತ್ವದಡಿ ಹನಿ ನೀರಾವರಿ ಪದ್ಧತಿ ಅಳವಡಿಕೆ ಮಾಡಿಕೊಳ್ಳುವುದರಿಂದ ಆಗುವ ಪ್ರಯೋಜನ, ಭೂಮಿಯ ಸತ್ವಯುತವಾದ ಭೂಮಿ ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಕುರಿತು ರೈತರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ.
ಹನಿ ನೀರಾವರಿ ವ್ಯವಸ್ಥೆಯನ್ನು ಟ್ರಿಕಲ್ ನೀರಾವರಿ ವ್ಯವಸ್ಥೆ ಎಂದೂ ಕರೆಯಲಾಗುತ್ತದೆ. ಈ ವಿಧಾನದಲ್ಲಿ ನೀರನ್ನು ಸಸ್ಯಗಳ ಬೇರು ವಲಯಗಳಿಗೆ ನೇರವಾಗಿ ಡ್ರಿಪ್ಪರ್‌ಗಳು ಅಥವಾ ಹೊರಸೂಸುವ ಉಪಕರಣಗಳ ಮೂಲಕ ಮಧ್ಯಂತರಗಳಲ್ಲಿ ಮತ್ತು ನಿಯಂತ್ರಿತ ಪ್ರಮಾಣದಲ್ಲಿ ಪೂರೈಸಲಾಗುತ್ತದೆ. ಈ ಪದ್ಧತಿಯಲ್ಲಿ ನೀರು ಹನಿ ಹನಿಯಾಗಿ ಮಣ್ಣಿನ ಮೇಲ್ಮೈ ಅಥವಾ ಅಡಿಯಲ್ಲಿ ಅನ್ವಯಿಸಲಾಗುತ್ತದೆ. ಇದರಿಂದ ಸಸ್ಯದ ಬೇರು ವಲಯವು ಸಮರ್ಪಕವಾಗಿ ತೇವಗೊಳ್ಳುತ್ತದೆ. ನೀರು ಹೊರಸೂಸುವ ಉಪಕರಣಗಳು (Emitter) ಪೈಪ್‌ಗಳಿಂದ ರಂಧ್ರಗಳು, ಸುಳಿಗಳು ಅಥವಾ ದೀರ್ಘ ತಿರುವು ಮಾರ್ಗಗಳ ಮೂಲಕ ನೀರು ಹರಿಸಲಾಗುತ್ತದೆ. ಇದರಿಂದಾಗಿ ಕಡಿಮೆ ನೀರು ಬಳಸಿ ಹೆಚ್ಚಿನ ಬೆಳೆ ತೆಗೆಯಲು ಹಾಗೂ ನೀರಿನ ನಷ್ಟ ಕಡಿಮೆ ಮಾಡಲು ಸಹಕಾರಿಯಾಗಲಿದೆ. ಹಾಗಾಗಿ ಕೃಷಿಮೇಳದಲ್ಲಿ ಸೂಕ್ಷ್ಮ ನೀರಾವರಿ ಪದ್ಧತಿಗೆ ರೈತರು ಒತ್ತು ನೀಡುವಂತೆ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ.ಏನಿದು ಸ್ವಯಂಚಾಲಿತ ಘಟಕದ ವಿಶೇಷತೆ?: ಹೊಲದಲ್ಲಿ ಸ್ವಯಂಚಾಲಿತ ಸೂಕ್ಷ್ಮ ನೀರಾವರಿ ಘಟಕ ಅಳವಡಿಸಿದರೆ ಸಾಕು ನೀರು ಹಾಯಿಸುವುದು, ಬಂದ್ ಮಾಡುವುದೆಲ್ಲವೂ ಈ ಯಂತ್ರದ ಮೂಲಕವೇ. ಈ ಘಟಕವು ಸಂಪೂರ್ಣವಾಗಿ ಸೋಲಾರ್‌ನಿಂದಲೇ ಕಾರ್ಯನಿರ್ವಹಿಸುವುದು ವಿಶೇಷ. ಒಂದು ಬಾರಿ ಚಾರ್ಚ್ ಮಾಡಿದರೆ 8ರಿಂದ 10 ದಿನಗಳ ಕಾಲ ಬರಲಿದೆ. ಇದರಲ್ಲಿ ಮೇನ್ ಕಂಟ್ರೋಲ್ ಯುನಿಟ್, ರಿಮೋಟ್ ಟರ್ಮಿನಲ್ ಯುನಿಟ್, ಸೋಲನೈಡ್ ವಾಲ್ವ್, ಫಿಲ್ಟರೇಶನ್ ಯುನಿಟ್, ವಾಟರ್ ಮೀಟರ್, ಏರ್ ರಿಲೀಸ್ ವಾಲ್ವ್, ಪ್ರಷರ್ ರಿಲೀಸ್ ವಾಲ್ವ್, ಮ್ಯಾನುವಲ್ ವಾಲ್ವ್, ಫರ್ಟಿಲೈಜರ್ ಟ್ಯಾಂಕ್, ಡ್ರಿಪ್ ಲ್ಯಾಟ್ರಲ್, ಫ್ಲಶ್ ವಾಲ್ವ್, ಪ್ರಥಮ- ದ್ವಿತೀಯ ಶುದ್ಧೀಕರಣ ಘಟಕ ಅಳವಡಿಸಲಾಗಿರುತ್ತದೆ. ರೈತರು ಒಂದು ಬಾರಿ ಇದನ್ನು ಹೊಲದಲ್ಲಿ ಅಳವಡಿಸಿದರೆ ಎಲ್ಲಿಯೇ ಇರಲಿ ಅಲ್ಲಿಂದಲೇ ಮೊಬೈಲ್ ಮೂಲಕ ನಿರ್ವಹಣೆ ಮಾಡಬಹುದಾಗಿದೆ.
ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ(ವಾಲ್ಮಿ) ವತಿಯಿಂದ ಕೃಷಿಮೇಳದಲ್ಲಿ ರೈತರಿಗೆ ಮನದಟ್ಟಾಗುವ ರೀತಿಯಲ್ಲಿ ಸ್ವಯಂಚಾಲಿತ ಸೂಕ್ಷ್ಮ ನೀರಾವರಿ ಘಟಕದ ಮಾದರಿ ನಿರ್ಮಿಸಿದ್ದಾರೆ. ಇದೇ ಮಾದರಿಯಲ್ಲಿ ನಾನು ನನ್ನ ಹೊಲದಲ್ಲಿ ಹನಿ ನೀರಾವರಿ ಯೋಜನೆ ಅಳವಡಿಸಿಕೊಳ್ಳಲು ಇಚ್ಛಿಸಿರುವೆ ಎಂದು ವಿಜಯಪುರದ ರೈತ ಮನೋಹರ ಎಂ ಹೇಳಿದರು.ವಾಲ್ಮಿಯಿಂದ ಕೃಷಿಮೇಳದಲ್ಲಿ ರೈತರ ಅನಕೂಲಕ್ಕಾಗಿ ಪ್ರತಿವರ್ಷವೂ ಒಂದೊಂದು ಮಾದರಿ ಸಿದ್ಧಪಡಿಸಲಾಗುತ್ತಿದೆ. ಈ ಬಾರಿ ಸ್ವಯಂಚಾಲಿತ ಸೂಕ್ಷ್ಮ ನೀರಾವರಿ ಘಟಕ ಕುರಿತು ಕೃಷಿಮೇಳದಲ್ಲಿ ಮಾದರಿ ಸಿದ್ಧಪಡಿಸಲಾಗಿದೆ. ರೈತರು ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದು ವಾಲ್ಮಿಯ ಸಹ ಪ್ರಾಧ್ಯಾಪಕ ಪ್ರದೀಪ ದೇವರಮನಿ ಹೇಳಿದರು.