ಮೈಲುತುತ್ತಕ್ಕೆ ಸಹಾಯಧನ ಲಭ್ಯವಿದ್ದರೂ ರೈತರ ನಿರಾಸಕ್ತಿ

KannadaprabhaNewsNetwork |  
Published : Jun 19, 2025, 11:50 PM IST
ಅಸ | Kannada Prabha

ಸಾರಾಂಶ

ಕಳೆದ ವರ್ಷ ಅತಿವೃಷ್ಟಿಯಿಂದ ಬಹುತೇಕ ಅಡಕೆ ತೋಟಕ್ಕೆ ಕೊಳೆ ರೋಗ ಆವರಿಸಿತ್ತು.

ಪ್ರವೀಣ ಹೆಗಡೆ ಕರ್ಜಗಿ

ಶಿರಸಿ: ಕಳೆದ ವರ್ಷ ಅತಿವೃಷ್ಟಿಯಿಂದ ಬಹುತೇಕ ಅಡಕೆ ತೋಟಕ್ಕೆ ಕೊಳೆ ರೋಗ ಆವರಿಸಿತ್ತು. ಈ ವರ್ಷ ಕೊಳೆ ನಿಯಂತ್ರಣಕ್ಕಾಗಿ ಬೋರ್ಡೊ ದ್ರಾವಣ ಸಿಂಪಡಣೆ ಕಾರ್ಯ ತಾಲೂಕಿನಲ್ಲಿ ಚುರುಕುಗೊಂಡಿದ್ದು, ಮೈಲು ತುತ್ತ ಖರೀದಿಗೆ ಸರ್ಕಾರದಿಂದ ಸಹಾಯಧನ ಸೌಲಭ್ಯವಿದ್ದರೂ ಇದನ್ನು ಪಡೆದುಕೊಳ್ಳಲು ರೈತರೇ ಆಸಕ್ತಿ ತೋರುತ್ತಿಲ್ಲ. ಕೇವಲ ೧೨ ಅರ್ಜಿಗಳು ಮಾತ್ರ ಸಲ್ಲಿಕೆಯಾಗಿವೆ ಎಂಬ ಮಾಹಿತಿ ಲಭಿಸಿದೆ.

ಬೋರ್ಡೋ ತಯಾರಿಕೆಗೆ ಬೇಕಾಗುವ ಮೈಲು ತುತ್ತ ಪ್ರತಿ ಕೆಜಿಗೆ ₹೩೩೦ ದರವಿದೆ. ಒಂದು ಎಕರೆ ಅಡಕೆ ತೋಟಕ್ಕೆ ನಾಲ್ಕು ಅಥವಾ ಐದು ಕೆಜಿಯಷ್ಟು ಮೈಲು ತುತ್ತ ಬೇಕಾಗುತ್ತದೆ. ಪ್ರತಿ ೪೫ ದಿನಗಳಿಗೆ ಒಮ್ಮೆ ಬೋರ್ಡೋ ಸಿಂಪಡಣೆ ಮಾಡಬೇಕಿರುವುದರಿಂದ ಮೈಲು ತುತ್ತ ಖರೀದಿಯೇ ರೈತರಿಗೆ ದುಬಾರಿಯಾಗುತ್ತಿದೆ. ರೈತರಿಗೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಮೈಲು ತುತ್ತ ಖರೀದಿಗೆ ಸಹಾಯಧನ ಬಿಡುಗಡೆಗೊಳಿಸುತ್ತಿವೆ.

೨೦೧೦ರಿಂದ ೨೦೧೯ರವರೆಗೆ ರೈತರು ಮೈಲು ತುತ್ತದ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದರು. ತಾಲೂಕಿನಲ್ಲಿ ಪ್ರತಿ ವರ್ಷ ಸರಾಸರಿ ೨ ಸಾವಿರ ರೈತರು ಸಹಾಯಧನದ ಪ್ರಯೋಜನ ಪಡೆದುಕೊಳ್ಳುತ್ತಿದ್ದರು. ಆದರೆ, ೨೦೨೦ರ ಬಳಿಕ ಮೈಲು ತುತ್ತಕ್ಕೆ ಸಹಾಯಧನ ಸೌಲಭ್ಯ ಇದ್ದರೂ ಅನುದಾನವೇ ಬಿಡುಗಡೆ ಆಗುತ್ತಿರಲಿಲ್ಲ. ರೈತರು ಆಸಕ್ತಿಯಿಂದ ಅರ್ಜಿ ಸಲ್ಲಿಸುತ್ತಿದ್ದರೂ ಸಹಾಯಧನ ಬಿಡುಗಡೆ ಆಗದೇ ಅರ್ಜಿಗಳೆಲ್ಲ ತೋಟಗಾರಿಕೆ ಇಲಾಖೆಯ ಕಚೇರಿಯಲ್ಲಿಯೇ ಕೊಳೆಯುವಂತಾಯಿತು.

ರೈತರು ಕಾಗದಪತ್ರಗಳಿಗಾಗಿ ಓಡಾಡಿದ, ಝರಾಕ್ಸ್ ಮಾಡಿಸಿದ ಖರ್ಚೂ ಸಿಗದಂತಾಗಿತ್ತು. ಕಳೆದ ವರ್ಷ ಸಹಾಯಧನಕ್ಕಾಗಿ ₹೩ ಲಕ್ಷ ಅನುದಾನ ತೋಟಗಾರಿಕೆ ಇಲಾಖೆಗೆ ಬಂದಿದ್ದರೂ ಅರ್ಜಿ ಸಲ್ಲಿಸಿದವರ ಸಂಖ್ಯೆ ಕೇವಲ ೧೫೦ ಇದ್ದುದರಿಂದ ಅವರಿಗೆ ಸಹಾಯಧನ ನೀಡಿದ್ದಾರೆ. ಉಳಿದ ಹಣದಲ್ಲಿ ಎಲೆಚುಕ್ಕಿ ರೋಗದ ಔಷಧವನ್ನು ವಿತರಿಸಿದ್ದಾರೆ. ಈ ವರ್ಷ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಮೂಲಕ ೭೮ ಲಕ್ಷ ರೂ. ಸಹಾಯಧನಕ್ಕಾಗಿ ಹಣ ಬಿಡುಗಡೆ ಆಗಿದ್ದರೂ, ರೈತರು ಮಾತ್ರ ಸಹಾಯಧನಕ್ಕಾಗಿ ತೋಟಗಾರಿಕೆ ಇಲಾಖೆ ಕಡೆ ಮುಖ ಮಾಡುತ್ತಿಲ್ಲ ಎಂದು ಹೇಳಲಾಗಿದೆ.

ಪ್ರಚಾರ ಅವಶ್ಯಕ:

ಕೆಲ ವರ್ಷ ಮೈಲು ತುತ್ತ ಸಹಾಯಧನಕ್ಕೆ ರೈತರು ಅರ್ಜಿ ಸಲ್ಲಿಸಿದರೂ ಅನುದಾನದ ಕೊರತೆಯಿಂದ ಸಹಾಯಧನ ಬಿಡುಗಡೆಗೊಂಡಿರಲಿಲ್ಲ. ಅರ್ಜಿ ಹಾಕಿದರೂ ವ್ಯರ್ಥ ಎಂದು ಕೆಲ ವರ್ಷಗಳಿಂದ ರೈತರು ಅರ್ಜಿ ಸಲ್ಲಿಸಲು ಹಿಂದೇಟು ಹಾಕುತ್ತಿದ್ದರು. ಈ ವರ್ಷ ಅನುದಾನ ಲಭ್ಯವಿದ್ದರೂ ಕೇವಲ ೧೨ ರೈತರು ಮಾತ್ರ ಅರ್ಜಿ ಸಲ್ಲಿಕೆ ಮಾಡಿದ್ದಾರೆ ಎಂತಾದರೆ ಸಹಾಯಧನಕ್ಕೆ ರೈತರು ಅರ್ಜಿಸಲ್ಲಿಸಲು ತೋಟಗಾರಿಕಾ ಇಲಾಖೆಯು ಇನ್ನಷ್ಟು ಪ್ರಚಾರ ಮಾಡಬೇಕಿದೆ .

ತಾಲೂಕಿನಿಂದ ಕೇವಲ ೧೨ ರೈತರಿಂದ ಮೈಲು ತುತ್ತಕ್ಕೆ ಸಹಾಯಧನಕ್ಕೆ ಅರ್ಜಿ ಸಲ್ಲಿಕೆಯಾಗಿದೆ. ತುತ್ತ ಖರೀದಿಸಿದ ಬಿಲ್, ರೈತರ ಎಫ್‌ಐಡಿ ನಂಬರ್ ಇದ್ದರೆ ಸಾಕು. ಎಫ್‌ಐಡಿ ಇಲ್ಲದಿದ್ದರೆ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಮತ್ತು ಆರ್‌ಟಿಸಿ ನಕಲು ಸಲ್ಲಿಕೆ ಮಾಡಬೇಕು. ಸೂಕ್ತ ಅನುದಾನ ಈ ವರ್ಷ ಲಭ್ಯವಿದ್ದು, ರೈತರು ಸಹಾಯಧನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಎನ್ನುತ್ತಾರೆ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಸತೀಶ ಹೆಗಡೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!