ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಿಜೆಪಿ ಶ್ರೀಮಂತರ ಪರವಾಗಿರುವ ಪಕ್ಷ. ರೈತರು, ಬಡವರ ಬಗ್ಗೆ ಬಿಜೆಪಿ ನಾಯಕರು ಏನೇ ಹೇಳಿದರೂ ಅವರ ನಡೆ ಗಮನಿಸಿದರೆ ಶ್ರೀಮಂತರ ಪರವಾದ ನಿಲುವು ಇರುವುದು ಸ್ಪಷ್ಟವಾಗುತ್ತದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಹೇಳಿದರು.ಬೇನಾಳ ಗ್ರಾಮದಲ್ಲಿ ಸೋಮವಾರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರೈತರು ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಪಡಿಸಿ ಸುದೀರ್ಘ ಹೋರಾಟ ಮಾಡಿದರೂ ಪ್ರಧಾನಿ ಕರುಳು ಚುರ್ ಅನ್ನಲಿಲ್ಲ. ರೈತರ ಕಷ್ಟಗಳಿಗೆ ಸ್ಪಂದಿಸಲಿಲ್ಲ. ಆದರೆ, ಶ್ರೀಮಂತ ಉದ್ಯಮಿಗಳ ಸಾಲ ಮನ್ನಾ ಮಾಡಿ ತಾವು ಯಾರ ಪರ ಎನ್ನುವುದನ್ನು ಸ್ಪಷ್ಟವಾಗಿ ತೋರಿಸಿದ್ದಾರೆ ಎಂದರು.ಶ್ರೀಮಂತ ಉದ್ಯಮಿಗಳ ಸಾಲ ಮನ್ನಾ ಮಾಡಿದ ಬಿಜೆಪಿ ಸರ್ಕಾರಕ್ಕೆ ರೈತರ ಸಾಲ ಮನ್ನಾ ಮಾಡುವುದು ದೊಡ್ಡ ವಿಷಯವೇ ಅಲ್ಲ. ಆದರೆ ಅವರಿಗೆ ರೈತರು ಬೇಕಾಗಿಲ್ಲ. ಹೀಗಾಗಿ ರೈತರ ಸಾಲ ಮನ್ನಾ ಮಾಡಲಿಲ್ಲ. ಅವರ ಅಳಲು ಕೇಳಲಿಲ್ಲ ಎಂದು ದೂರಿದರು.
ಕರ್ನಾಟಕ ಸತತ ಎರಡು ಬರಗಾಲಕ್ಕೆ ತುತ್ತಾಗಿದೆ. ಹಿಂದೆ ಅತಿವೃಷ್ಟಿಯಾಗಿ ಬೆಳೆ ಕೊಚ್ಚಿಕೊಂಡು ಹೋಗಿತ್ತು. ಬರ ಮತ್ತು ನೆರೆ ಬಂದಾಗ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದತ್ತ ಸುಳಿಯಲಿಲ್ಲ. ಆದರೆ, ಚುನಾವಣೆ ಬಂದಾಗಲೆಲ್ಲಾ ಅವರಿಗೆ ಬೇಕಾದಷ್ಟು ಸಮಯ ಸಿಗುತ್ತದೆ. ಮೇಲಿಂದ ಮೇಲೆ ಕರ್ನಾಟಕಕ್ಕೆ ಬರುತ್ತಾರೆ ಎಂದು ವ್ಯಂಗ್ಯವಾಡಿದರು.ಕಾಂಗ್ರೆಸ್ ಪಕ್ಷ ಬಡವರು, ದೀನದಲಿತರು, ಹಿಂದುಳಿದವರ ಪರವಾಗಿರುವ ಪಕ್ಷ. ಮನಮೋಹನ್ ಸಿಂಗ್ ಅವರನ್ನು ಬಿಜೆಪಿಯವರು ಮೌನಿಬಾಬಾ ಎಂದು ಟೀಕೆ ಮಾಡುತ್ತಾರೆ. ಈ ಮೌನಿಬಾಬಾ ಅವರು ರೈತರ ಸಾಲ ಮನ್ನಾ ಮಾಡಿ ಅನ್ನದಾತರ ಕಷ್ಟಕ್ಕೆ ಸ್ಪಂದಿಸಿದರು. ಸಿದ್ದರಾಮಯ್ಯ ಅವರು ಹಿಂದಿನ ಅವಧಿಯಲ್ಲಿ ಸಿಎಂ ಆಗಿದ್ದಾಗ ಸಹಕಾರ ಸಂಘಗಳಲ್ಲಿನ ರೈತರ ಸಾಲ ಮನ್ನಾ ಮಾಡಿದರು. ಮನ್ ಕಿ ಬಾತನಲ್ಲಿ ಉಪದೇಶ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರು ಯಾಕೆ ರೈತರ ಕಷ್ಟಕ್ಕೆ ಸ್ಪಂದಿಸಲಿಲ್ಲ ಎಂದು ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು, ರೈತರ ಆದಾಯ ದ್ವಿಗುಣ ಮಾಡುವೆ ಎಂದರು, ನಿರುದ್ಯೋಗಿಗಳಿಗೆ ಪ್ರತಿವರ್ಷ ಒಂದು ಕೋಟಿ ಉದ್ಯೋಗ ಕೊಡುತ್ತೇನೆ ಎಂದರು, ಭೇಟಿ ಬಚಾವೊ ಭೇಟಿ ಪಡಾವೋ ಎಂದರು, ಆದರೆ, ಅವರ ಮಾತಿಗೂ ಕೃತಿಗೂ ಸಾಮ್ಯತೆಯೇ ಇಲ್ಲ. ರೈತರ ಆದಾಯ ದ್ವಿಗುಣ ಬದಲಿಗೆ ಅವರ ಕೃಷಿ ವೆಚ್ಚ ದ್ವಿಗುಣವಾಯಿತು. ನಿರುದ್ಯೋಗಿ ಪದವಿಧರರಿಗೆ ಪಕೋಡಾ ಮಾರಾಟ ಮಾಡಿ ಎಂದರು. ಮಹಿಳಾ ಕುಸ್ತಿಪಟುಗಳು ಮತ್ತು ಮಣಿಪುರದಲ್ಲಿ ನಡೆದ ಮಹಿಳೆಯರ ಮೇಲಿನ ದೌರ್ಜನ್ಯಗಳ ಬಗ್ಗೆ ತುಟಿ ಬಿಚ್ಚಲಿಲ್ಲ ಎಂದು ವಾಗ್ದಾಳಿ ನಡೆಸಿದರು.ಈ ವಿಷಯಗಳನ್ನು ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲೇ ಪ್ರಕಟಿಸಿದ್ದು, ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಂತೆ ಕೇಂದ್ರದಲ್ಲೂ ಜಾರಿಗೆ ತರಲಾಗುವುದು ಎಂದು ಹೇಳಿದರು.
ಜಿಪಂ ಮಾಜಿ ಅಧ್ಯಕ್ಷೆ ಬಾಯಕ್ಕ ಮೇಟಿ ಮಾತನಾಡಿ, 20 ವರ್ಷಗಳಿಂದ ಲೋಕಸಭೆಗೆ ಆಯ್ಕೆಯಾಗುತ್ತಿರುವ ಗದ್ದಿಗೌಡರ ಬೇನಾಳ ಗ್ರಾಮಕ್ಕೆ ಒಮ್ಮೆಯೂ ಬಂದಿಲ್ಲ. ಸಂಸದರ ಅನುದಾನದಲ್ಲಿ ಒಂದೇ ಒಂದು ಕೆಲಸ ಮಾಡಿಕೊಟ್ಟಿಲ್ಲ ಎಂದು ಟೀಕಿಸಿದರು. ಸಂಯುಕ್ತಾ ಪಾಟೀಲ ಚುನಾವಣೆಯಲ್ಲಿ ಗೆದ್ದ ನಂತರ ಎಲ್ಲ ಹಳ್ಳಿಗಳಿಗೂ ಭೇಟಿ ನೀಡಲಿದ್ದಾರೆ. ಬೇನಾಳ ಗ್ರಾಮಕ್ಕೆ ಸಂಸದರ ನಿಧಿ ಮಂಜೂರು ಮಾಡಿಸುತ್ತೇವೆ ಎಂದು ಭರವಸೆ ನೀಡಿದ ಅವರು, ಸಂಯುಕ್ತಾ ಪಾಟೀಲರಿಗೆ ಬಡವರ ಬಗ್ಗೆ ಕಳಕಳಿ ಇದೆ. ಸಮಾಜ ಸೇವೆಯ ಗುಣ ಅವರಲ್ಲಿದೆ. ಸ್ಪರ್ಶ ಫೌಂಡೇಶನ್ ಮೂಲಕ ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು. ಇಮಾಮ್ಸಾಬ್ ಮುಜಾವರ್ ಮಾತನಾಡಿದರು.ಬೇನಾಳ ಸಭೆಯ ನಂತರ ಹಿರೇಮಾಗಿ ಹುಲಿಗೆಮ್ಮ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ಕಮತಗಿ ಗ್ರಾಮಕ್ಕೆ ತೆರಳಿ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದರು.ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾದರೆ ರೈತರ ಸಾಲ ಮನ್ನಾ ಮಾಡಲಾಗುವುದು. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿ ಮಾಡಲಾಗುವುದು. ಬಡಕುಟುಂಬಗಳ ಮಹಿಳೆಯರಿಗೆ ಪ್ರತಿ ವರ್ಷ ಒಂದು ಲಕ್ಷ ರೂ. ನೀಡಲಾಗುವುದು. ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಸಲಾಗುವುದು . ₹ 25 ಲಕ್ಷ ವರೆಗೆ ಆರೋಗ್ಯ ವಿಮೆ ನೀಡಲಾಗುವುದು.
-ಸಂಯುಕ್ತಾ ಪಾಟೀಲ ಕಾಂಗ್ರೆಸ್ ಅಭ್ಯರ್ಥಿ