ಬೆಳೆ ಪರಿಹಾರ ಬಿಡುಗಡೆ ವಿಳಂಬಕ್ಕೆ ಆಕ್ರೋಶ

KannadaprabhaNewsNetwork |  
Published : Apr 02, 2024, 01:03 AM IST
ಚಿತ್ರದುರ್ಗ ಎರಡನೇ ಪುಟದ ಮಿಡ್ಲ್  | Kannada Prabha

ಸಾರಾಂಶ

ಬೆಳೆವಿಮೆ ಬೆಳೆ ಪರಿಹಾರ ನೀಡುವಂತೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಸೋಮವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ರೈತರಿಗೆ ಬೆಳೆವಿಮೆ ಬೆಳೆ ಪರಿಹಾರ ನೀಡದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಆರೋಪಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಸೋಮವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಗಳ ವಿರುದ್ದ ಧಿಕ್ಕಾರ ಕೂಗಿದರು. ಲೋಕಸಭಾ ಚುನಾವಣೆ ನಾಮಪತ್ರ ಸಲ್ಲಿಕೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟಿಸಲು ಅವಕಾಶ ನೀಡದ ಕಾರಣ ರೋಟರಿ ಬಾಲಭವನದ ಸಮೀಪ ರಸ್ತೆಯಲ್ಲಿ ಕುಳಿತು ಧರಣಿ ನಡೆಸಿದ ರೈತರು ಕೂಡಲೆ ಬೆಳೆವಿಮೆ ಪರಿಹಾರ ನೀಡುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‍ಬಾಬು ಮಾತನಾಡಿ, ಮಧ್ಯ ಕರ್ನಾಟಕದ ಬಯಲುಸೀಮೆ ಚಿತ್ರದುರ್ಗ ಜಿಲ್ಲೆ ಮಳೆಯಾಶ್ರಿತ ಪ್ರದೇಶ. ಇಲ್ಲಿನ ರೈತರು ಮಳೆಯನ್ನೇ ನಂಬಿಕೊಂಡು ಒಕ್ಕಲುತನ ಮಾಡಬೇಕಿದೆ. ಹಿಂಗಾರು-ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಬೆಳೆ ನಷ್ಟವಾಗಿ ರೈತರ ಬದುಕು ಮೂರಾ ಬಟ್ಟೆಯಾಗಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಳೆವಿಮೆ, ಬೆಳೆ ಪರಿಹಾರ ನೀಡದೆ ಸತಾಯಿಸುವುದರ ಬದಲಿಗೆ ಕೂಡಲೇ ರೈತರ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡಲಿ ಎಂದು ಆಗ್ರಹಿಸಿದರು.

ಸಂಘದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ, ಹತ್ತು ದಿನದೊಳಗೆ ಬೆಳೆವಿಮೆ ಬೆಳೆ ಪರಿಹಾರ ನೀಡುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದಂತೆ ಕೂಡಲೆ ಪರಿಹಾರ ಕೊಡಬೇಕೆಂದು ಪಟ್ಟು ಹಿಡಿದರು. ಬೇಸಿಗೆ ಆರಂಭವಾಗಿರುವುದರಿಂದ ಜಾನುವಾರುಗಳಿಗೆ ಮೇವು ತರಲು ರೈತರಲ್ಲಿ ಶಕ್ತಿಯಿಲ್ಲದಂತಾಗಿದೆ. ಯುಗಾದಿ ಹಬ್ಬ ಹತ್ತಿರದಲ್ಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜೀವಂತವಾಗಿದ್ದರೆ ತಕ್ಷಣವೆ ರೈತರಿಗೆ ಬೆಳೆವಿಮೆ, ಬೆಳೆ ಪರಿಹಾರ ತಲುಪಿಸಬೇಕೆಂದರು. ರೈತ ಮುಖಂಡರುಗಳಾದ ಧನಂಜಯ, ಹೊರಕೇರಪ್ಪ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ತಿಪ್ಪೇಸ್ವಾಮಿ, ಲಕ್ಷ್ಮಕ್ಕ, ನಿತ್ಯಶ್ರಿ, ಲಕ್ಷ್ಮಮ್ಮ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು : ನಗರದ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯ-ಎಲ್ಲೆಲ್ಲಿ ?
ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌