ಮೀನು ಸಾಗಾಟದ ಸಂದರ್ಭದಲ್ಲಿ ಲಾರಿಗಳಿಂದ ಹೊರಬಿಡಲಾಗುವ ಕೊಳಚೆ ನೀರು ರಸ್ತೆ ಬದಿಯಲ್ಲಿ ಸಂಗ್ರಹವಾಗುವುದರಿಂದ ಪರಿಸರ ಅಸ್ವಚ್ಛವಾಗುವುದರ ಜತೆಗೆ ದುರ್ವಾಸನೆ ಹರಡುತ್ತಿದೆ. ಇದರಿಂದ ಆ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು, ಪಾದಚಾರಿಗಳು ಹಾಗೂ ಸ್ಥಳೀಯ ನಿವಾಸಿಗಳಿಗೆ ಸಾಕಷ್ಟು ಕಿರಿಕಿರಿ ಉಂಟಾಗುತ್ತಿದೆ.

ಹೊನ್ನಾವರ: ತಾಲೂಕಿನ ಕಾಸರಕೋಡ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಮೀನು ಸಾಗಿಸುವ ಲಾರಿಗಳಿಂದ ತ್ಯಾಜ್ಯಮಿಶ್ರಿತ ನೀರನ್ನು ರಸ್ತೆಯ ಬದಿಯಲ್ಲಿ ಬಿಡುತ್ತಿರುವುದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ತೀವ್ರ ದುರ್ವಾಸನೆ ಹರಡುತ್ತಿದೆ. ಇದರಿಂದ ಸ್ಥಳೀಯ ನಿವಾಸಿಗಳು ಹಾಗೂ ರಸ್ತೆ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.ಮೀನು ಸಾಗಾಟದ ಸಂದರ್ಭದಲ್ಲಿ ಲಾರಿಗಳಿಂದ ಹೊರಬಿಡಲಾಗುವ ಕೊಳಚೆ ನೀರು ರಸ್ತೆ ಬದಿಯಲ್ಲಿ ಸಂಗ್ರಹವಾಗುವುದರಿಂದ ಪರಿಸರ ಅಸ್ವಚ್ಛವಾಗುವುದರ ಜತೆಗೆ ದುರ್ವಾಸನೆ ಹರಡುತ್ತಿದೆ. ಇದರಿಂದ ಆ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು, ಪಾದಚಾರಿಗಳು ಹಾಗೂ ಸ್ಥಳೀಯ ನಿವಾಸಿಗಳಿಗೆ ಸಾಕಷ್ಟು ಕಿರಿಕಿರಿ ಉಂಟಾಗುತ್ತಿದೆ.

ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಕೆಳಗಿನೂರಿನ ಸುಪ್ರೀತ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು ಸಾರ್ವಜನಿಕರ ಹಿತದೃಷ್ಟಿಯಿಂದ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದ್ದಾರೆ.ಸಂಘದ ವತಿಯಿಂದ ಟಿಪ್ಪರ್ ಮೂಲಕ ಮಣ್ಣು ತಂದು ರಸ್ತೆಯ ಪಕ್ಕದಲ್ಲಿ ಸುರಿಸಿ, ಜೆಸಿಬಿ ಯಂತ್ರದ ಸಹಾಯದಿಂದ ಮಣ್ಣನ್ನು ಹರಡುವ ಕಾರ್ಯ ಕೈಗೊಳ್ಳಲಾಗಿದೆ. ಈ ಮೂಲಕ ಕೊಳಚೆ ನೀರು ಸಂಗ್ರಹವಾಗುತ್ತಿದ್ದ ಸ್ಥಳವನ್ನು ಸ್ವಚ್ಛಗೊಳಿಸಲು ಪ್ರಯತ್ನಿಸಲಾಗಿದೆ.ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಸ್ಥಳದಲ್ಲಿ ಸಾರ್ವಜನಿಕ ಎಚ್ಚರಿಕೆಯ ಬ್ಯಾನರ್ ಅಳವಡಿಸಲಾಗಿದೆ. ಬ್ಯಾನರ್‌ನಲ್ಲಿ ಮೀನು ತ್ಯಾಜ್ಯ ಹಾಗೂ ಕೊಳಚೆ ನೀರನ್ನು ರಸ್ತೆಯ ಬದಿಯಲ್ಲಿ ಬಿಡದಂತೆ ಸೂಚಿಸಲಾಗಿದ್ದು, ಈ ಸ್ಥಳದಲ್ಲಿ 24 ಗಂಟೆಗಳ ಸಿಸಿಟಿವಿ ಕಣ್ಗಾವಲು ಇರುವುದಾಗಿಯೂ ಎಚ್ಚರಿಕೆ ನೀಡಲಾಗಿದೆ.ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ ಸ್ವಯಂಪ್ರೇರಿತವಾಗಿ ಸ್ವಚ್ಛತಾ ಕಾರ್ಯ ಕೈಗೊಂಡಿರುವ ಸುಪ್ರೀತ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ಸದಸ್ಯರ ಸಾಮಾಜಿಕ ಕಳಕಳಿಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಈ ಸಂದರ್ಭದಲ್ಲಿ ಸುಪ್ರೀತ್ ಸೌಹಾರ್ದ ಸಹಕಾರಿ ಸಂಘದ ಜನರಲ್ ಮ್ಯಾನೇಜರ್ ಸುಹಾನ್ ಹೊರಟಾ ಸೇರಿದಂತೆ ಸದಸ್ಯರು ಮುಂತಾದವರು ಇದ್ದರು.