ವೀರೇಶ ಪ್ರಳಯಕಲ್ಮಠ
ಹೌದು..! ಕುಂದಗೋಳ ತಾಲೂಕಿನ ದೇವನೂರ ಕಡ್ಡಿ ಮೆಣಸಿನಕಾಯಿಗೆ ಬ್ಯಾಡಗಿ ಮಾರುಕಟ್ಟೆಯಲ್ಲಿ ಎಲ್ಲಿಲ್ಲದ ಬೇಡಿಕೆ ಇತ್ತು. ಕೂಬಿಹಾಳ, ಇಂಗಳಗಿ, ಕಮಡೊಳ್ಳಿ, ಹಂಚಿನಾಳ, ಯಲಿವಾಳ, ತರ್ಲಘಟ್ಟ ಸಹಿತ ತಾಲೂಕಿನ 52,550 ಹೆಕ್ಟೇರ್ ಪ್ರದೇಶದ ಪೈಕಿ, ಸರಿ ಸುಮಾರು 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯಲಾಗುತ್ತಿತ್ತು. 80ರ ದಶಕದಲ್ಲಿ ಕೆಂಪು ಮೆಣಸಿನಕಾಯಿ ವಿದೇಶದಲ್ಲಿ ಬಹು ಪ್ರಸಿದ್ಧ ಹೆಸರು ಮಾಡಿತ್ತು. ಬೆಲೆಯ ಸಾಕಷ್ಟು ಏರಿಳಿತ, ಹವಾಮಾನ ವೈಪರಿತ್ಯ, ಬೆಳೆಗೆ ಅಕಾಲಿಕವಾಗಿ ತಗಲುವ ರೋಗ ಇದಕ್ಕಿಂತಲೂ ಹೆಚ್ಚಾಗಿ ದಿಢೀರ್ ಪಾತಾಳಕ್ಕೆ ಕುಸಿದ ಬೆಲೆಯಿಂದಾಗಿ ಸದ್ಯ ರೈತರು ಇದನ್ನು ಅತ್ಯಂತ ಕನಿಷ್ಠ ಮಟ್ಟದ ಪ್ರದೇಶಕ್ಕೆ ಸೀಮಿತಗೊಳಿಸಿದ್ದಾರೆ.
ಈ ಬಾರಿ ತಾಲೂಕಿನ 52 ಸಾವಿರ ಹೆಕ್ಟೇರ್ ಒಟ್ಟು ಪ್ರದೇಶದಲ್ಲಿ ಸದ್ಯದ ಮುಂಗಾರು ಮಳೆ ಆರಂಭದ ನಂತರದ ಒಂದು ವಾರದಲ್ಲಿ 6,750 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಅದರಲ್ಲಿ ಹೆಸರು, ಸೋಯಾಬಿನ್, ಗೋವಿನ ಜೋಳ ಮಾತ್ರ ಬಿತ್ತಲಾಗಿದೆ. ಬಹುಶಃ ಅರ್ಧಕ್ಕಿಂತಲೂ ಅಧಿಕ ರೈತರು ಶೇಂಗಾ ಬೆಳೆ ಕಡಿಮೆ ಮಾಡಿದ್ದಾರೆ. ಮೆಣಸಿನ ಮಡಿಯಂತೂ ಶೇ. 2ರಷ್ಟು ರೈತರಿಗೆ ಸೀಮಿತವಾದಂತಿದೆ. ಈ ಬಾರಿ ಮೆಣಸಿನಕಾಯಿ ಬೆಳೆಗೆ ಬಹುತೇಕರು ಮನಸ್ಸು ಮಾಡಿಲ್ಲ ಎಂದು ತಾಲೂಕು ಕೃಷಿ ಇಲಾಖೆಯ ಸಹಾಯಕ ಜಂಟಿ ನಿರ್ದೇಶಕಿ ಭಾರತಿ ಮೆಣಸಿನಕಾಯಿ ''''ಕನ್ನಡಪ್ರಭ''''ಕ್ಕೆ ತಿಳಿಸಿದರು.ವಾಣಿಜ್ಯ ಬೆಳೆಯಾಗಿದ್ದ ಮೆಣಸಿನಕಾಯಿ ಬೆಳೆ ರೈತನಿಗೆ ಆರ್ಥಿಕ ಸಂಕಷ್ಟ ನೀಡಿದೆ. ಹೀಗಾಗಿ ಅನ್ನದಾತರು ಮುಂಗಾರು ಬೆಳೆಯಾದ ಹೆಸರು, ಸೋಯಾಬಿನ್, ಗೋವಿನಜೋಳ, ಶೇಂಗಾ ಮಾತ್ರ ನಂಬಿಕೊಂಡಿದ್ದು, ಹಿಂಗಾರು ಬೆಳೆಗಾಗಿ ಕಡಲೆ, ಗೋದಿ, ಜೋಳ, ಕುಸುಬೆ ನಂಬಿಕೊಂಡಿದ್ದಾರೆ.
ಕುಂದಗೋಳ ತಾಲೂಕಿನ ಬಹುತೇಕ ರೈತರು ಮೆಣಸಿನಕಾಯಿ ಬೆಳೆಯ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಕೃಷಿ ಇಲಾಖೆಯಲ್ಲಿ ಹೆಸರು, ಸೋಯಾಬಿನ್, ಗೋವಿನ ಜೋಳ, ಅಲ್ಪಮಟ್ಟದಲ್ಲಿ ಶೇಂಗಾ ಬೀಜಗಳಿಗೆ ಬೇಡಿಕೆ ಇದೆ. ಇಲಾಖೆ ಸಾಕಷ್ಟು ಬಿತ್ತನೆ ಬೀಜ ಸಂಗ್ರಹಿಸಿಟ್ಟಿದೆ. ಮೆಣಸಿನಕಾಯಿ ಬೆಳೆ ಬೆಳೆಯಲು ರೈತರು ಹಿಂಜರಿಯುತ್ತಿದ್ದಾರೆ. ಕುಂದಗೋಳ ಕೃಷಿ ಇಲಾಖೆಯ ಸಹಾಯಕ ಜಂಟಿ ನಿರ್ದೇಶಕಿ ಭಾರತಿ ಮೆಣಸಿನಕಾಯಿ ಹೇಳಿದರು.