)
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದ ಕಬ್ಬು ಬೆಳೆಗಾರರ ಸಂಕಷ್ಟ ಪರಿಹಾರಕ್ಕೆ ಆಗಾಗ್ಗೆ ಪ್ರತಿಭಟನೆಗಳು, ಅರ್ಜಿಗಳನ್ನು ಹಿಡಿದು ಅಲೆಯುವುದನ್ನು ತಪ್ಪಿಸಬೇಕು ಹಾಗೂ ಸಮಗ್ರ ಬದಲಾವಣೆಗಳನ್ನು ತರಬೇಕು ಎಂದು ಕರ್ನಾಟಕದ ರೈತ ಮುಖಂಡರು, ಕೃಷಿ ತಜ್ಞರು ಒತ್ತಾಯಪೂರ್ವಕ ಬೇಡಿಕೆಗಳನ್ನು ಮಂಡಿಸಿದರು.
ಕುಮಾರಕೃಪಾ ಅತಿಥಿಗೃಹದಲ್ಲಿ ಗುರುವಾರ ದಿನಪೂರ್ತಿ ನಡೆದ ಸಭೆಯಲ್ಲಿ ಮೊದಲಿಗೆ ರಾಜ್ಯದ ವಿವಿಧೆಡೆಗಳ ರೈತ ಮುಖಂಡರು, ರೈತ ಸಂಘಟನೆಗಳಿಂದ ಅಭಿಪ್ರಾಯ ಸಂಗ್ರಹಿಸಲಾಯಿತು. ಸಂಜೆಯ ನಂತರ ಕೃಷಿ ತಜ್ಞರ ಜೊತೆಯಲ್ಲಿ ಸಂವಾದ ನಡೆಸಲಾಯಿತು.ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದ ನಿಯೋಗವು, ಕಬ್ಬಿನ ಎಫ್‌ಆರ್‌ಪಿ ದರವನ್ನು ಪ್ರತಿ ಟನ್‌ಗೆ ಕನಿಷ್ಠ 4,500 ರು.ನಿಂದ 5,500 ರು.ಗೆ ಹೆಚ್ಚಿಸುವಂತೆ ಆಗ್ರಹಿಸಿತು. ಜೊತೆಗೆ ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು (ಎಂಎಸ್‌ಪಿ) ಪ್ರಸ್ತುತ ಇರುವ 31 ರು.ನಿಂದ 60 ರು.ಗೆ ಏರಿಸಬೇಕು. ರೈತರಿಗೆ ಹೊಲದ ಬಳಿಯೇ ಪೂರ್ಣ ಪ್ರಮಾಣದ ಎಫ್‌ಆರ್‌ಪಿ ದರ ಸಿಗುವಂತೆ ‘ಎಕ್ಸ್-ಫೀಲ್ಡ್’ ಬೆಲೆ ನಿಗದಿ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎನ್ನುವುದೂ ಸೇರಿ ಅನೇಕ ಅಂಶಗಳನ್ನು ಮಂಡಿಸಿದರು.
ಕೃಷಿ ತಂತ್ರಜ್ಞಾನ ತಜ್ಞ ಡಾ. ರವಿಶಂಕರ್, ಸರ್ಕಾರವು ಕೇವಲ ಎಫ್‌ಆರ್‌ಪಿ ಮತ್ತು ಎಂಎಸ್‌ಪಿ ಹೆಚ್ಚಿಸುತ್ತಾ ಹೋದರೆ ಸಮಸ್ಯೆ ಬಗೆಹರಿಯುವುದಿಲ್ಲ. ವ್ಯವಸ್ಥೆಯಲ್ಲಿನ ದಕ್ಷತೆ ಮತ್ತು ನಂಬಿಕೆಯನ್ನು ಹೆಚ್ಚಿಸಬೇಕು. ಗೃಹಬಳಕೆಯ ಸಕ್ಕರೆಗೆ ಪ್ರತ್ಯೇಕ ದರ ಹಾಗೂ ವಾಣಿಜ್ಯ ಬಳಕೆಯ ಸಕ್ಕರೆಗೆ ಹೆಚ್ಚಿನ ದರ ವಿಧಿಸುವ ದ್ವಿಮುಖ ಬೆಲೆ ನೀತಿಯನ್ನು ಜಾರಿಗೆ ತರಬೇಕು. ಕೋಲ್ಡ್ ಡ್ರಿಂಕ್ಸ್ ಸೇರಿ ಅನೇಕ ಕಂಪನಿಗಳು ಇದೇ ದರದಲ್ಲಿ ಸಕ್ಕರೆ ಖರೀದಿಸಿ ಶೇ.200-300 ಲಾಭ ಮಾಡುತ್ತವೆ. ಹಾಗಾಗಿ ಅವರಿಗೆ ಪ್ರತ್ಯೇಕ ದರ ವಿಧಿಸಿದರೆ ಸಕ್ಕರೆ ಕಂಪನಿಗಳಿಗೂ ಲಾಭವಾಗುತ್ತದೆ, ರೈತರಿಗೂ ಅನುಕೂಲವಾಗುತ್ತದೆ ಎಂದರು.
ಇನ್ನು, ಸಾಮಾನ್ಯ ದಿನಬಳಕೆಗೆ ಸಕ್ಕರೆ ಬಳಸುವವರಿಗೂ ಕೋಲ್ಡ್ ಡ್ರಿಂಕ್ಸ್ ಸೇರಿದಂತೆ ಉತ್ಪನ್ನಗಳಿಗೆ ಸಕ್ಕರೆ ಬಳಸುವವರಿಗೂ ಏಕರೂಪ ದರ ನಿಗದಿಪಡಿಸುವುದರಿಂದಲೇ ಸಮಸ್ಯೆ ಬಿಗಡಾಯಿಸಿದೆ ಎಂದು ಕೃಷಿ ಹಾಗೂ ಮಾರುಕಟ್ಟೆ ತಜ್ಞರ ಜೊತೆಗೆ ನಡೆದ ಸಂವಾದದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಬೆಲೆ ನಿಯಂತ್ರಣ ಮಾತ್ರವಲ್ಲದೆ ಒಟ್ಟು ಸಕ್ಕರೆ ಆರ್ಥಿಕತೆಯನ್ನು ಹೇಗೆ ಮರುವಿನ್ಯಾಸ ಮಾಡಬೇಕು ಎಂದು ಸಮಿತಿಗೆ ತಿಳಿಸಿದ್ದು, ಬ್ರೆಜಿಲ್ ಮಾದರಿಯನ್ನು ಅಧ್ಯಯನ ಮಾಡಲು ಮನವಿ ಮಾಡಿದ್ದೇವೆ. ರೈತರು ಪ್ರತಿ ವರ್ಷ ಪ್ರತಿಭಟನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗದಂತೆ ಸಮಗ್ರ ಶಿಫಾರಸುಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವಂತೆ ಕೋರಿದ್ದೇವೆ.
ಈ ಸಮಿತಿ ನಮ್ಮ ಅಹವಾಲನ್ನು ಆಲಿಸಿದ್ದು, ಅಂತಿಮ ನಿರ್ಧಾರ ಕೇಂದ್ರ ಸರ್ಕಾರದ್ದು. ಇದರ ಅನುಷ್ಠಾನವು ಸಚಿವ ಪ್ರಲ್ಹಾದ ಜೋಶಿ ಅವರ ಮೇಲೆ ಅವಲಂಬಿತವಾಗಿದೆ. ಕೇವಲ ಕೇಂದ್ರದ ಕಡೆಗೆ ಬೊಟ್ಟುಮಾಡಿ ರಾಜ್ಯ ಸರ್ಕಾರ ಸುಮ್ಮನೆ ಇರಲು ಸಾಧ್ಯವಿಲ್ಲ. ತಮಿಳುನಾಡಿನ ಮಾದರಿ ಅನುಷ್ಠಾನ ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಹೇಳಲಾಗುವುದಿಲ್ಲ. ದೆಹಲಿ ಸರ್ಕಾರವನ್ನು ನೋಡಿ ಗ್ಯಾರಂಟಿಗೆ 50 ಸಾವಿರ ಕೋಟಿ ರು. ನೀಡಲು ಸಾಧ್ಯವಾದರೆ ತಮಿಳುನಾಡನ್ನು ನೋಡಿ ಕಬ್ಬು ಬೆಳೆಗಾರರಿಗೆ ಪರಿಹಾರ ಏಕೆ ನೀಡಲಾಗುವುದಿಲ್ಲ?-ಕುರುಬೂರು ಶಾಂತಕುಮಾರ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ