ಕಾಡುಹಂದಿಯ ಉಪಟಳಕ್ಕೆ ರೈತರು ಕಂಗಾಲು

KannadaprabhaNewsNetwork |  
Published : Apr 29, 2026, 03:45 AM IST
ಕಾಡು ಹಂದಿಯ ದಾಳಿಗೆ ನೆಲಸಮವಾದ ಅಡಿಕೆ ಗಿಡಗಳು | Kannada Prabha

ಸಾರಾಂಶ

ರೈತರು ತಮ್ಮ ಭೂಮಿಯಲ್ಲಿ ಬೆಳೆ ಬೆಳೆದು ಅದರಿಂದ ಜೀವನ ಸಾಗಿಸಬೇಕು ಎನ್ನುವುದು ಇದೀಗ ತೀರಾ ಕಷ್ಟ ಸಾಧ್ಯ ಎನ್ನುವಂತಹ ಪರಿಸ್ಥಿತಿ ಇದೆ. ಇದಕ್ಕೆ ಕಾರಣ ಕೂಲಿ ಕಾರ್ಮಿಕರ ಸಮಸ್ಯೆಯಾದರೆ, ಇನ್ನೊಂದೆಡೆ ಕಾಡುಪ್ರಾಣಿಗಳ ಉಪಟಳ.

ತಾಲೂಕಿನ ಬಹುತೇಕ ಕಡೆಗಳಲ್ಲಿ ಕಾಡುಪ್ರಾಣಿಗಳ ಉಪಟಳ ಜೋರುಪ್ರಸಾದ್ ನಗರೆ

ಕನ್ನಡಪ್ರಭ ವಾರ್ತೆ ಹೊನ್ನಾವರ

ರೈತರು ತಮ್ಮ ಭೂಮಿಯಲ್ಲಿ ಬೆಳೆ ಬೆಳೆದು ಅದರಿಂದ ಜೀವನ ಸಾಗಿಸಬೇಕು ಎನ್ನುವುದು ಇದೀಗ ತೀರಾ ಕಷ್ಟ ಸಾಧ್ಯ ಎನ್ನುವಂತಹ ಪರಿಸ್ಥಿತಿ ಇದೆ. ಇದಕ್ಕೆ ಕಾರಣ ಕೂಲಿ ಕಾರ್ಮಿಕರ ಸಮಸ್ಯೆಯಾದರೆ, ಇನ್ನೊಂದೆಡೆ ಕಾಡುಪ್ರಾಣಿಗಳ ಉಪಟಳ.ಇತ್ತೀಚಿನ ಕೆಲವು ವರ್ಷಗಳಿಂದ ತಾಲೂಕಿನ ಬಹುತೇಕ ಕಡೆಗಳಲ್ಲಿ ಕಾಡುಪ್ರಾಣಿಗಳ ಉಪಟಳ ಜೋರಾಗಿರುವುದು, ರೈತರಲ್ಲಿ ಆತಂಕವನ್ನುಂಟು ಮಾಡಿದೆ. ಅದರಲ್ಲೂ ಕಾಡುಹಂದಿಯ ಕಾಟ ತೀರಾ ಜೋರಾಗಿದೆ. ಹಂದಿ ಬರುವುದು ತಡೆಯಲು ವಿವಿಧ ಬಗೆಯ ಪ್ರಯೋಗ ಮಾಡಿದರು ಪ್ರಯೋಜನಕ್ಕೆ ಬರುತ್ತಿಲ್ಲ. ಜನರ ಭಯವು ಇಲ್ಲದೆ ಮನೆಯ ಸಮೀಪವೇ ಬಂದು ಬೆಳೆ ನಾಶ ಮಾಡಿ ಹೋಗುತ್ತಿವೆ.ಮುಖ್ಯವಾಗಿ ತಾಲೂಕಿನ ಗ್ರಾಮೀಣ ಭಾಗಗಳಾದ ನಗರೆ, ತೋಟಿಮನೆ, ಹೊಸಿತ್ಲು, ಬೆಣ್ಣೆಮನೆ ಇವೇ ಮೊದಲಾದ ಕಡೆಯಲ್ಲಿ ಅಡಕೆ ತೋಟಗಳಿಗೆ ಕಾಡುಹಂದಿಗಳು ನುಗ್ಗಿ ಅಡಕೆ ಸಸಿಗಳನ್ನು ಕಿತ್ತು ಅದನ್ನು ನಾಶಪಡಿಸುತ್ತಿವೆ. ಅಲ್ಲದೆ ತೆಂಗು ಹಾಗೂ ಬಾಳೆ ಗಿಡಗಳನ್ನು ನಾಶ ಮಾಡುತ್ತಿವೆ.ರೈತರ ತೋಟದಲ್ಲಿ ಎಲ್ಲೆಂದರಲ್ಲಿ ಅಗೆದು ಹಿಪ್ಪೆ ಮಾಡಿದೆ. ಅಡಕೆ ಮರಗಳಿಗೆ ಹಾಕಲಾದ ಸಾವಯವ ಗೊಬ್ಬರಗಳನ್ನು ಅಗೆದು ಮರ-ಗಿಡಗಳಿಗೆ ಗೊಬ್ಬರದ ಪೋಷಕಾಂಶ ಕಡಿಮೆಯಾಗುವಂತೆ ಮಾಡಿದೆ. ರೈತರು ವರ್ಷಕ್ಕೊಮ್ಮೆ ಅಡಕೆ ಮರಕ್ಕೆ ಬುಡ ಮಾಡುವ ಪದ್ದತಿಯಿತ್ತು. ಆದರೆ ಈಗ ಕಾಡು ಹಂದಿ ಹಾವಳಿಯ ಕಾರಣದಿಂದ ಅದನ್ನು ಮಾಡುವುದು ಸಹ ಕಡಿಮೆಯಾಗಿದೆ.ಅಡಕೆ ಬೆಳೆಯ ಜೊತೆಗೆ ಭತ್ತದ ಗದ್ದೆ ಹಾಗೂ ಅಡಕೆ ತೋಟಗಳಿಗೆ ಕಾಡು ಹಂದಿ ಹಾಗೂ ಮುಳ್ಳಕ್ಕಿ ಇನ್ನಿತರ ಪ್ರಾಣಿಗಳ ಕಾಟ ವಿಪರೀತವಾಗಿದ್ದು, ರೈತರ ಅಡಕೆ, ತೆಂಗು, ಬಾಳೆ ಸೇರಿದಂತೆ ಅನೇಕ ಬೆಳೆಗಳನ್ನು ಹಾನಿ ಮಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.ವಾಹನ ಸವಾರರಿಗೂ ಭಯ:

ಹಳ್ಳಿಗಳಲ್ಲಿ ರಾತ್ರಿ ವೇಳೆ ವಾಹನದಲ್ಲಿ ಓಡಾಡಲು ಭಯ ಪಡುವಂತಾಗಿದೆ. ರಸ್ತೆಯ ಮೇಲೆ ಕಾಡು ಹಂದಿ ಗುಂಪು ಗುಂಪಾಗಿ ಒಂದೇ ಸಮನೆ ರಸ್ತೆ ಡಾಟಲು ಓಡಿಬಂದು ವಾಹನ ಸವಾರರಿಗೆ ಅಡ್ಡ ಬಂದು ಅಪಘಾತವಾದ ಘಟನೆಯು ನಡೆದಿದೆ. ತೋಟಕ್ಕೆ ವಿದ್ಯುತ್ ದೀಪ:

ಇನ್ನು ಹಂದಿಗಳ ಕಾಟ ತಪ್ಪಿಸಲು ರೈತರು ವಿವಿಧ ಭಂಗಿಯ ಗೊಂಬೆಗಳು, ಹಾಳೆ ಕೊಟ್ಟೆ, ತಂತಿ ಅಳವಡಿಕೆ ಸೇರಿದಂತೆ ತಮ್ಮ ಅಡಕೆ ತೋಟದಲ್ಲಿ ಜಗಮಗಿಸುವ ಚಿತ್ತಾಕರ್ಷಕ ವಿದ್ಯುತ್ ದೀಪಾಲಂಕಾರ ಮಾಡುವ ಮೂಲಕ ಇನ್ನಿಲ್ಲದ ಹರಸಾಹಸಪಡುತ್ತಿದ್ದಾರೆ. ಆದರೂ ಹಂದಿಗಳ ಉಪಟಳ ಮಾತ್ರ ಇನ್ನೂ ನಿಂತಿಲ್ಲ.ಇಷ್ಟೆಲ್ಲ ಅವಾಂತರ ಉಂಟು ಮಾಡುತ್ತಿರುವ ಕಾಡು ಹಂದಿ ಕಾಟಕ್ಕೆ ತಡೆ ಒಡ್ಡಲು ಸರಕಾರ ಮುಂದಾಗಬೇಕಿದೆ. ಅರಣ್ಯ ಇಲಾಖೆಯ ಮೂಲಕ ಕಾಡು ಹಂದಿ ನಾಡಿಗೆ ಬರದ ಹಾಗೆ ಏನಾದರು ಕ್ರಮ ತೆಗೆದುಕೊಳ್ಳಬೇಕಾಗಿದೆ. ಇಲ್ಲ ಅದನ್ನು ಓಡಿಸಲು, ಹಿಡಿಯಲು ರೈತರಿಗೆ ಕಾನೂನು ಬದ್ಧವಾಗಿ ಅವಕಾಶ ಮಾಡಿಕೊಡಬೇಕಿದೆ.ನಾವು ತೋಟದಲ್ಲಿ ಅಡಕೆ ಸಸಿ ಹಾಗೂ ಬಾಳೆಗಿಡಗಳನ್ನು ಬೆಳೆಸುವುದು ತೀರಾ ಕಷ್ಟವಾಗಿದೆ. ಹಂದಿ, ಮುಳ್ಳಕ್ಕಿ, ಕಾಟ ತೀರಾ ಹೆಚ್ಚಾಗಿದೆ. ನಾವು ಅಡಕೆ ತೋಟವನ್ನು ಸಣ್ಣ ಪ್ರಮಾಣದಲ್ಲಿ ಹೊಂದಿದ್ದೇವೆ. ಅದರಲ್ಲಿಯೂ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗಿರುವುದರಿಂದ ಬೆಳೆ ಬೆಳೆಯುವುದೇ ಕಷ್ಟವಾಗಿದೆ ಎನ್ನುತ್ತಾರೆ ರೈತ ಕೃಷ್ಣ ಗೌಡ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾವೇರಿ ನೀರು ವಾಸ್ತವಾಂಶ ಸಂಂಗ್ರಹಿಸಿ ಸುಪ್ರೀಂ ಕೋರ್ಟ್‌ಗೆ ರಿಟ್‌: ಎಚ್‌.ಕೆ.ರಾಮು
ವಿಕಸಿತ ಭಾರತ ಭವಿಷ್ಯ ರೂಪಿಸುವ ದೃಢ ಸಂಕಲ್ಪ: ನಿರ್ಮಲಾ ಸೀತಾರಾಮನ್