ಕಲಿಕೆ ಬದುಕಿಗೆ ಬುನಾದಿಯಾಗಲಿ: ಶಾಸಕ ಕೃಷ್ಣನಾಯ್ಕ

KannadaprabhaNewsNetwork |  
Published : Apr 29, 2026, 03:30 AM IST
ಹೂವಿನಹಡಗಲಿಯ ಸರ್ಕಾರಿ ನೌಕರರ ಸಂಘದ ವತಿಯಿಂದ ಎಸ್ಸೆಸ್ಸೆಎಲ್ಸಿ ಪರೀಕ್ಷೆಯಲ್ಲಿ ಟಾಪರ್‌ ಆಗಿ ಹೊರ ಹೊಮ್ಮಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.  | Kannada Prabha

ಸಾರಾಂಶ

ವಿದ್ಯಾರ್ಥಿಗಳಿಗೆ ಶಿಕ್ಷಕರು ಕಲಿಸುವ ಅಕ್ಷರ ಕೇವಲ ಪರೀಕ್ಷೆಗೆ ಮಾತ್ರ ಸೀಮಿತವಾಗದೆ ಅದು ಅವರ ಬದುಕಿಗೆ ಬುನಾದಿಯಾಗಬೇಕು ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.

ಹೂವಿನಹಡಗಲಿ: ವಿದ್ಯಾರ್ಥಿಗಳಿಗೆ ಶಿಕ್ಷಕರು ಕಲಿಸುವ ಅಕ್ಷರ ಕೇವಲ ಪರೀಕ್ಷೆಗೆ ಮಾತ್ರ ಸೀಮಿತವಾಗದೆ ಅದು ಅವರ ಬದುಕಿಗೆ ಬುನಾದಿಯಾಗಬೇಕು ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.

ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ನೌಕರರ ಸಂಘ ಸೇರಿದಂತೆ ಇತರೆ ಸಂಘ ಸಂಸ್ಥೆಗಳು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಟಾಪರ್‌ ಆಗಿದ್ದ ವಿದ್ಯಾರ್ಥಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಅಭಿನಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನಾನು ಶಾಸಕನಾಗಿ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದೇನೆ. ಹಂತ ಹಂತವಾಗಿ ಗ್ರಾಮೀಣ ಹಾಗೂ ನಗರ ಪ್ರದೇಶದ ಸರ್ಕಾರಿ ಶಾಲೆಗಳಿಗೆ ಸೌಲಭ್ಯಗಳನ್ನು ಕಲ್ಪಿಸಿದ್ದೇನೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದೇನೆ. ಶಿಕ್ಷಣದಲ್ಲಿ ಕ್ರಾಂತಿ ಮಾಡಲು ಹಲವಾರು ಯೋಜನೆಗಳನ್ನು ರೂಪಿಸಿ, ಅವುಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿದ್ದರ ಫಲವಾಗಿ ಇಂದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೂವಿನಹಡಗಲಿ ತಾಲೂಕು ಟಾಪರ್‌ ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದರು.

ವಿದ್ಯಾರ್ಥಿಗಳಿಗೆ ಶಿಕ್ಷಕರು ಹಾಕಿದ ಶ್ರಮ ಎಂದಿಗೂ ವ್ಯರ್ಥವಾಗುವುದಿಲ್ಲ, ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳ ಜತೆಗೆ ಪೈಪೋಟಿ ಮಾಡಿ ಅಭೂತ ಪೂರ್ವ ಸಾಧನೆ ಮಾಡಿ ರಾಜ್ಯ ಮಟ್ಟದಲ್ಲಿ ತಾಲೂಕಿನ ಹೆಸರು ಉಳಿಸಿದ್ದೀರಿ ಎಂದು ಶಿಕ್ಷಕರ ಶ್ರಮವನ್ನು ಸ್ಮರಿಸಿದರು.

ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಿಗೆ ಹೈಟೆಕ್‌ ಟಚ್‌ ನೀಡಲಾಗುತ್ತಿದೆ. ಪ್ರತಿಯೊಂದು ಕ್ಲಾಸ್‌ನಲ್ಲಿ ಪಠ್ಯಕ್ರಮವನ್ನು ಡಿಜಿಟಲೀಕರಣ ಮಾಡಿ, ವೀಡಿಯೋ ಮೂಲಕ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಆಸಕ್ತಿ ಬೆಳೆಸುವ ಪ್ರಯತ್ನ ನಡೆದಿದೆ. ಇದಕ್ಕೆ ಶಿಕ್ಷಕರ ಸಹಕಾರ ಬೇಕಿದೆ. ಶಿಕ್ಷಕರಲ್ಲಿ ಆಸಕ್ತಿ ಇಲ್ಲದೇ ಹೋದರೇ ಎಷ್ಟೇ ಪ್ರಯತ್ನ ಮಾಡಿದರೂ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ, ರಸ್ತೆ, ಚರಂಡಿ ಕಾಮಗಾರಿಗಳು 5 ವರ್ಷಕ್ಕೆ ಹಾಳಾಗಿ ಹೋಗುತ್ತವೆ. ಆದರೆ ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ವಿದ್ಯಾರ್ಥಿಗಳ ಬದುಕಿಗೆ ಹಾದಿಯಾಗುತ್ತದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ ವಿ. ಪೂಜಾರ ಮಾತನಾಡಿ, ಎಸ್ಸೆಸ್ಸೆಲ್ಸಿ ಉತ್ತಮ ಫಲಿತಾಂಶಕ್ಕೆ ಸರ್ಕಾರ ಮತ್ತು ಇಲಾಖೆ ನೀಡಿರುವ ಯೋಜನೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಜತೆಗೆ, ಶಾಸಕರು ಶಿಕ್ಷಣಕ್ಕೆ ಒತ್ತು ನೀಡಿದ್ದರಿಂದ ಸಾಧನೆ ಮಾಡಲು ಸಾಧ್ಯವಾಗಿದೆ. ಇಲಾಖೆಯ 29 ಅಂಶಗಳ ಕಾರ್ಯಕ್ರಮ ಜಾರಿ, ವಿದ್ಯಾರ್ಥಿಗಳೊಂದಿಗೆ ಸಂವಾದ ಹಾಗೂ ಫಲಿತಾಂಶ ಹೆಚ್ಚಳಕ್ಕೆ ಶಿಕ್ಷಕರ ಶ್ರಮ ಹೆಚ್ಚಿದೆ ಎಂದರು.

ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಮಾತನಾಡಿದರು. ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ. ಕೊಟ್ರಗೌಡ ಪ್ರಾಸ್ತಾವಿಕ ಮಾತನಾಡಿದರು. ಎಂ.ಪಿ.ಎಂ. ಅಶೋಕ, ಎ. ಕೋಟೆಪ್ಪ, ಚಂದ್ರಪ್ಪ, ರಾಮನಗೌಡ, ನಂಜುಂಡಪ್ಪ, ವಾರದ ಗೌಸ್‌ ಮೋಹಿದ್ದೀನ್‌, ವಿ.ಬಿ. ಜಗದೀಶ, ದೈಹಿಕ ಅಧೀಕ್ಷಕ ಮಹಮ್ಮದ್‌ ರಫಿ ಸೇರಿದಂತೆ ಇತರರಿದ್ದರು. ಇದೇ ವೇಳೆ ಬಡ್ತಿ ಪಡೆದು ವಿವಿಧ ಇಲಾಖೆಗಳಲ್ಲಿ ಕರ್ತವ್ಯದಲ್ಲಿರುವ, ಸರ್ಕಾರಿ ನೌಕರರಿಗೆ ಬೀಳ್ಕೋಡುಗೆ ಸಮಾರಂಭ ಆಯೋಜಿಸಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೋಹತ್ಯೆ ಸಂಪೂರ್ಣ ನಿಷೇಧಕ್ಕೆ ಆಗ್ರಹ
ಗ್ರಾಮಗಳಲ್ಲಿ ನೀರಿನ ಸಮಸ್ಯೆಯಾಗದಿರಲಿ: ತಹಸೀಲ್ದಾರ