ಬಿಜೆಪಿ ಸರ್ಕಾರದಲ್ಲಿ ರೈತರಿಗೆ ಭಯೋತ್ಪಾದಕರ ಪಟ್ಟ: ಜಗಜಿತ್ ಸಿಂಗ್ ದಲೈವಾಲಾ

KannadaprabhaNewsNetwork |  
Published : Jun 25, 2024, 12:30 AM IST
ಪೊಟೊ: 24ಎಸ್ಎಂಜಿಕೆಪಿ05ಶಿವಮೊಗ್ಗದ ಸರ್ಕಾರಿ ನೌಕರರ ಭವನದಲ್ಲಿ ಸೋಮವಾರ ಸಂಯುಕ್ತ ಕಿಸಾನ್ ಮೋರ್ಚಾ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ರಾಷ್ಟ್ರೀಯ ಹಾಗೂ ರಾಜ್ಯ ರೈತ ಮುಖಂಡರ ಸಮಾವೇಶ ನಡೆಯಿತು. | Kannada Prabha

ಸಾರಾಂಶ

ಶಿವಮೊಗ್ಗದ ಸರ್ಕಾರಿ ನೌಕರರ ಭವನದಲ್ಲಿ ಸೋಮವಾರ ಸಂಯುಕ್ತ ಕಿಸಾನ್ ಮೋರ್ಚಾ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ರಾಷ್ಟ್ರೀಯ ಹಾಗೂ ರಾಜ್ಯ ರೈತ ಮುಖಂಡರ ಸಮಾವೇಶ ನಡೆಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸರ್ಕಾರ ಯಾವುದೇ ಇರಲಿ, ಇದೇ ರಾಜಕಾರಣ ಮುಂದುವರೆದರೆ ದೇಶದಲ್ಲಿ ರೈತರಿಗೆ ಉಳಿಗಾಲವಿಲ್ಲ. ಹೋರಾಟ ಮಾಡುವ ರೈತರನ್ನು ಖಲಿಸ್ತಾನಿ, ಉಗ್ರವಾದಿ ಪಟ್ಟ ಕಟ್ಟುತ್ತಿದ್ದಾರೆ ಎಂದು ಎಸ್.ಕೆ.ಎಂ. ಅಖಿಲ ಭಾರತ ರೈತ ನಾಯಕ ಜಗಜಿತ್ ಸಿಂಗ್ ದಲೈವಾಲಾ ಹೇಳಿದರು.

ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಸೋಮವಾರ ಸಂಯುಕ್ತ ಕಿಸಾನ್ ಮೋರ್ಚಾ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹಾಗೂ ರಾಜ್ಯ ರೈತ ಮುಖಂಡರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರದ ವಿರುದ್ಧ ಧ್ವನಿ ಎತ್ತಿದರೆ, ತಮ್ಮ ಹಕ್ಕಿಗಾಗಿ ಹೋರಾಡಿದರೆ ಅವರ ಮೇಲೆ ದಮನಕಾರಿ ನೀತಿಯನ್ನು ಸರ್ಕಾರ ಅನುಸರಿಸುತ್ತಿದೆ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಬೇಕೆಂದು ಆಗ್ರಹಿಸಿ ಶಾಂತಿಯುತ ಹೋರಾಟ ಮಾಡುತ್ತಿದ್ದ ರೈತರ ಮೇಲೆ ಭಯೋತ್ಪಾದಕರು ಎಂಬ ಆರೋಪ ಹೊರಿಸಿ ಅವರ ಮೇಲೆ ಪ್ರಯೋಗಿಸುವ ಅಸ್ತ್ರಗಳನ್ನು ರೈತರ ಮೇಲೆ ಪ್ರಯೋಗಿಸಿದ್ದೇ ಬಿಜೆಪಿಯ ಹೀನಾಯ ಸೋಲಿಗೆ ಕಾರಣ ಎಂದು ಕಿಡಿಕಾರಿದರು.

ರೈತರು ಯಾವುದೇ ಸರ್ಕಾರದ ವಿರೋಧಿಯಲ್ಲ. ರೈತರ ಮೇಲೆ ಪ್ರಯೋಗಿಸಿದ ಅಸ್ತ್ರಗಳೇ ಬಿಜೆಪಿ ಸರ್ಕಾರಕ್ಕೆ ಮುಳುವಾಯಿತು. ಜನ ಸೂಕ್ಷ್ಮವಾಗಿ ಗಮನಿಸಿ ಸೂಕ್ತ ಸಮಯ ದಲ್ಲಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಿದರು. ದೇಶದ ಲೋಕತಂತ್ರ ಮತ್ತು ಸಂವಿಧಾನ ರಕ್ಷಿಸುವ ಕೆಲಸವನ್ನು ಮತದಾನದ ಮೂಲಕ ಮಾಡಿದರು. ಈಗ ರೈತ ಹೋರಾಟದ ಒಗ್ಗಟ್ಟು ಎಲ್ಲಿಯವರೆಗೆ ಕೆಲಸ ಮಾಡಿದೆ ಎಂದರೆ ಬಿಜೆಪಿ ಮೈತ್ರಿ ಪಕ್ಷಗಳೂ ಕೂಡ ಸರ್ಕಾರದ ಒಳಗೆ ನಮ್ಮ ಪರವಾಗಿ ಕೆಲಸ ಮಾಡುವ ಅನಿವಾರ್ಯ ಪರಿಸ್ಥಿತಿಗೆ ಬಂದಿದ್ದಾರೆ ಎಂದರು.

ಸ್ವಾಮಿನಾಥನ್ ವರದಿಯಂತೆ ರೈತರ ಬೆಳೆಗಳಿಗೆ ಸೂಕ್ತ ದರ ನಿಗದಿಯಾಗಬೇಕು. ಕನಿಷ್ಠ ಬೆಂಬಲ ಬೆಲೆ ಜಾರಿಗೊಳಿಸಬೇಕು. ಅದಕ್ಕಾಗಿ ಕಾನೂನು ಜಾರಿಗೆ ತರುವವರೆಗೆ ರೈತ ಹೋರಾಟ ನಿಲ್ಲುವುದಿಲ್ಲ. ಈಗಾಗಲೇ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ರೈತ ಸಂಘಟನೆಗಳು ಒಗ್ಗಟ್ಟಾಗಿ ಹೋರಾಟಕ್ಕೆ ಸಿದ್ಧವಾಗಿವೆ ಎಂದು ತಿಳಿಸಿದರು.

ದಕ್ಷಿಣ ಭಾರತ ರಾಜ್ಯಗಳ ಎಸ್‍ಕೆಎಂ ಸಂಚಾಲಕ ಕುರುಬೂರು ಶಾಂತಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಎಂಎಸ್‍ಪಿ ನಿಗದಿ ಮಾಡಬೇಕಾದ ಕೇಂದ್ರ ಯಾವುದೇ ನಿರ್ಧಾರ ಮಾಡಿಲ್ಲ. ದೇಶದ ಬೆನ್ನೆಲುಬು ರೈತ ಎನ್ನುತ್ತಾರೆ. ಆ ಬೆನ್ನೆಲುಬು ಮುರಿಯಲು ಹವಣಿಸುತ್ತಿದ್ದಾರೆ. ಸ್ವಾತಂತ್ರ್ಯ ಬಂದು 75 ವರ್ಷವಾದರೂ ರೈತರ ಬದುಕು ಬದಲಾಗಿಲ್ಲ. ಮೊನ್ನೆ ಕೇಂದ್ರದಿಂದ ಎಂಎಸ್‍ಪಿ ಘೋಷಣೆ ಮಾಡಲಾಗಿದೆ. ಇದನ್ನೇ ದೊಡ್ಡದಾಗಿ ಬಿಂಬಿಸಲಾಗಿದೆ. 1968 ರಿಂದ ಎಂಎಸ್‍ಪಿ ಘೋಷಣೆಯಾಗುತ್ತಲೇ ಇದೆ. ಏನೂ ಪ್ರಯೋಜನವಾಗುತ್ತಿಲ್ಲ. ಬರಗಾಲದಲ್ಲಿ ರೈತರಿಗೆ ಭಿಕ್ಷಾ ರೂಪದ ಪರಿಹಾರ ನೀಡಲಾಗಿದೆ. ವೈಜ್ಞಾನಿಕ ಬೆಲೆ ನೀಡಿದಾಗ ಮಾತ್ರ ರೈತರು ನಷ್ಟದಿಂದ ಪಾರಾಗಬಹುದು ಎಂದು ಹೇಳಿದರು.

ರೈತರಿಗಾಗಿ ವಿಶೇಷ ಸಾಲ ನೀತಿ ರೂಪಿಸಬೇಕು. ತೆಲಂಗಾಣದಲ್ಲಿ 15 ಸಾವಿರ ರು. ಪ್ರೋತ್ಸಾಹಧನ ನೀಡಿ 7 ಲಕ್ಷ ರೈತರ ಸಾಲ ಮನ್ನಾ ಮಾಡಿದ್ದಾರೆ. ಅಲ್ಲಿ ಕೂಡ ಕಾಂಗ್ರೆಸ್ ಸರ್ಕಾರವಿದೆ. ಆದರೆ, ಇಲ್ಲಿನ ಕಾಂಗ್ರೆಸ್ ಸರ್ಕಾರ ಹಾಲಿನ ಸಬ್ಸಿಡಿ ನಿಲ್ಲಿಸಿದೆ. ಕಿಸಾನ್ ಸಮ್ಮಾನ್ ಯೋಜನೆಯ 4 ಸಾವಿರ ರು. ಕೂಡ ನಿಲ್ಲಿಸಿದೆ. ಬರಗಾಲ ಪರಿಹಾರ ನೀಡಿಲ್ಲ. ತೆಂಗು ಬೆಳೆಗಾರರ ಬದುಕು ಬೀದಿಗೆ ಬಂದಿದೆ. ಭತ್ತಕ್ಕೆ ಕೂಡ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಂಬಲ ಬೆಲೆ ನೀಡಲಾಗುತ್ತಿದೆ. ಆದ್ದರಿಂದ ಅನಿವಾರ್ಯವಾಗಿ ರೈತರು ಸಂಘಟನೆ ಗಟ್ಟಿಗೊಳಿಸಿ ಒಂದಾಗಿ ಹೋರಾಟ ಮಾಡಿದಾಗ ಮಾತ್ರ ಸರ್ಕಾರ ನಮ್ಮ ಮಾತು ಕೇಳುತ್ತದೆ ಎಂದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ನಾಯಕರಾದ ಕೆ.ವಿ. ಬಿಜು, ಅಭಿಮನ್ಯು ಕುಹರ್, ಲಲ್ವಿಂದರ್ ಸಿಂಗ್ ಔಲಾಖ್, ಸುಕ್ಷಿತ್ ಸಿಂಗ್, ಜಾಫರ್ ಖಾನ್, ಪಿ.ಆರ್. ಪಾಂಡ್ಯನ್, ಟಿ.ಎನ್. ರಾಮನ್ ಗೌಡರ್, ವೆಂಕಟೇಶ್ವರರಾವ್, ನರಸಿಂಹನಾಯ್ಡು, ಕರ್ನಾಟಕದ ಎಂ.ಪಿ. ಕರಿಬಸಪ್ಪಗೌಡ, ವೀರನಗೌಡ ಪಾಟೀಲ್, ಮಾಧವ ರೆಡ್ಡಿ, ಚೂನ್ನಪ್ಪ ಪೂಜಾರಿ, ಎನ್.ಹೆಚ್. ದೇವಕುಮಾರ್, ಬಲ್ಲೂರು ರವಿಕುಮಾರ್, ಸಿ.ವಿ.ಲೋಕೇಶ್ ಗೌಡ, ದಿನೇಶ್ ಶಿರಿವಾಳ, ಬಸವರಾಜ್ ಸಂಬೋಳ, ಎಂ. ಈರಣ್ಣ, ಶರಣಪ್ಪ, ಶಿವಕುಮಾರ್, ದೊಡ್ಡ ಅಜ್ಜಯ್ಯ, ಮಹೇಂದ್ರ, ಹೊಯ್ಸಳ ಗಣಪತಿಯಪ್ಪ, ರುದ್ರೇಶ್ ಕಸೆಟ್ಟಿ, ರಾಮಚಂದ್ರಪ್ಪ, ಉಷಾ, ಪಾರ್ವತಿ, ಆರ್ಮುಗಂ, ರಾಜು ಇದ್ದರು.

18 ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿ ಮೂಗಿಗೆ ತುಪ್ಪ ಸವರುವ ಕೆಲಸವಾಗುತ್ತಿದೆ. ಆದರೆ, ಕೆಲವು ನಿಗದಿಪಡಿಸಿದ ಬೆಂಬಲ ಬೆಲೆ ಉತ್ಪಾದನಾ ವೆಚ್ಚದ ಅರ್ಧಕ್ಕೂ ಸಮವಿಲ್ಲ. ಈ ಅವೈಜ್ಞಾನಿಕ ಬೆಂಬಲ ಬೆಲೆ ನೀತಿಯನ್ನು ನಾವು ವಿರೋಧಿಸುತ್ತೇವೆ. ಆಶ್ವಾಸನೆ ನೀಡಿದ ಹಾಗೆ ತೊಗರಿ, ಕೊಬ್ಬರಿ, ಇನ್ನಿತರ ಬೆಳೆಗಳಿಗೂ ಕೂಡ ಉತ್ಪಾದನಾ ವೆಚ್ಚ ಆಧರಿತ ಬೆಂಬಲ ಬೆಲೆ ಸರ್ಕಾರ ನಿಗದಿಪಡಿಸಬೇಕು. ನಾವು ಎಲ್ಲರೂ ಒಂದಾದರೆ ಸರ್ಕಾರವೇ ನಮ್ಮ ಬಳಿ ಬರುತ್ತದೆ. ನಮ್ಮ ಪ್ರಾಮಾಣಿಕ ಬೇಡಿಕೆಗಳು ಈಡೇರುತ್ತವೆ ಎಂದು ಎಸ್.ಕೆ.ಎಂ. ಅಖಿಲ ಭಾರತ ರೈತ ನಾಯಕ ಜಗಜಿತ್ ಸಿಂಗ್ ದಲೈವಾಲಾ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತರಕಾರಿಯಲ್ಲಿ ಹಾನಿಕಾರಕ ಅಂಶ ಪತ್ತೆ: ಶೀಘ್ರ ಸೂಕ್ತ ಮಾರ್ಗಸೂಚಿ
ಸಿಲಿಂಡರ್‌ಗೆ ಹಾಹಾಕಾರ: ಊಟ, ತಿಂಡಿ ಹರೋಹರ!