ಹಾವೇರಿ: ಕಳೆದ ಮೂರ‍್ನಾಲ್ಕು ವರ್ಷಗಳಿಂದ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಬಿತ್ತನೆ ಮಾಡಿದ ಬೆಳೆ ಕೈಗೆ ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಸಮಸ್ಯೆಗಳಿಗೆ ಸ್ಪಂದಿಸಿ, ಪ್ರತಿ ಎಕರೆಗೆ ೨೫ ಸಾವಿರ ರು. ಪರಿಹಾರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ವತಿಯಿಂದ ಸೋಮವಾರ ತಹಸೀಲ್ದಾರ್ ಕಚೇರಿ ಅಧಿಕಾರಿಗಳ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಕಳೆದ ಹಂಗಾಮಿನಲ್ಲಿ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ನಿಯಮಗಳನ್ನು ಸಡಿಲಗೊಳಿಸಿ ಸಮರ್ಪಕ ಪರಿಹಾರ ನೀಡಬೇಕು. ರೈತರ ಸಹಕಾರ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಸಾಲ ಮರುಪಾವತಿಸಲು ಸಾಧ್ಯವಾಗದ ರೈತರ ಮೇಲೆ ಬ್ಯಾಂಕ್‌ಗಳು ಹಾಗೂ ಖಾಸಗಿ ಲೇವಾದೇವಿದಾರರು ನಡೆಸುತ್ತಿರುವ ಒತ್ತಡ ಮತ್ತು ಜಪ್ತಿ ಕ್ರಮಗಳನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಕೃಷಿ ಪಂಪ್‌ಸೆಟ್‌ಗಳಿಗೆ ಪ್ರತಿದಿನ ಕನಿಷ್ಠ ಏಳು ಗಂಟೆಗಳ ಕಾಲ ನಿರಂತರವಾಗಿ ಗುಣಮಟ್ಟದ ವಿದ್ಯುತ್ ಪೂರೈಸಬೇಕು. ರೈತರು ರಾತ್ರಿ ವೇಳೆ ಜಮೀನುಗಳಿಗೆ ತೆರಳುವುದರಿಂದ ಹಾವು ಹಾಗೂ ವನ್ಯಜೀವಿಗಳ ದಾಳಿಯ ಅಪಾಯ ಎದುರಿಸುತ್ತಿದ್ದು, ಹಗಲಿನಲ್ಲೇ ವಿದ್ಯುತ್ ಒದಗಿಸಬೇಕು. ಮುಂದಿನ ಹಿಂಗಾರು ಬಿತ್ತನೆಗೆ ಅನುಕೂಲವಾಗುವಂತೆ ಉಚಿತವಾಗಿ ಗುಣಮಟ್ಟದ ಬೀಜ ಮತ್ತು ರಸಗೊಬ್ಬರ ವಿತರಿಸಬೇಕು ಎಂದು ಒತ್ತಾಯಿಸಿದರು.ಅಂತರ್ಜಲ ವೃದ್ಧಿಗಾಗಿ ಹೊಸ ಕೃಷಿ ಹೊಂಡಗಳ ನಿರ್ಮಾಣಕ್ಕೆ ಅನುದಾನ ನೀಡಬೇಕು. ಹಳೆಯ ಚೆಕ್‌ಡ್ಯಾಂಗಳ ಹೂಳು ತೆಗೆಯಬೇಕು. ಅಂತರ್ಜಲ ಕುಸಿದಿರುವ ಪ್ರದೇಶಗಳಲ್ಲಿ ಹೊಸ ಕೊಳವೆಬಾವಿ ಕೊರೆಯಿಸಲು ಹಾಗೂ ಸೋಲಾರ್ ಪಂಪ್‌ಸೆಟ್ ಅಳವಡಿಸಿಕೊಳ್ಳಲು ಶೇ.೧೦೦ರಷ್ಟು ಸಬ್ಸಿಡಿ ನೀಡಬೇಕು ಎಂದರು. ಒಂದುವೇಳೆ ಈ ಎಲ್ಲ ಹಕ್ಕೊತ್ತಾಯಗಳನ್ನು ಶೀಘ್ರ ಈಡೇರಿಸದಿದ್ದರೆ ಸಾಮೂಹಿಕ ನಾಯಕತ್ವದಲ್ಲಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ರೈತ ಸಂಘದ ಮುಖಂಡರು ಎಚ್ಚರಿಸಿದರು.