ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಜಿಲ್ಲಾಡಳಿತ ಭವನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಒಣಗಿದ ಬೆಳೆ ಹಾಗೂ ಗುರಿಗಳನ್ನು ಹಿಡಿದು ಕೊಂಡು ಧರಣಿ ನಡೆಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ತಮಿಳುನಾಡಿನ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪರ ಸಂಘಟನೆಯ ಮುಖಂಡ ಚಾ.ರಂ.ಶ್ರೀನಿವಾಸ್ ಗೌಡ ಮಾತನಾಡಿ, ರಾಜ್ಯದಲ್ಲಿ ಬರದ ವಾತಾವರಣ ನಿರ್ಮಾಣವಾಗಿದ್ದು, ರೈತಾಪಿ ವರ್ಗ ಸಾಕಷ್ಟು ಸಂಕಷ್ಟವನ್ನು ಎದುರಿಸುತ್ತಿದೆ. ರಾಜ್ಯದ ಕೆರೆ-ಕಟ್ಟೆಗಳು ನೀರು ಇಲ್ಲದೆ ಬರಿದಾಗಿದೆ. ರಾಜ್ಯ ಸರ್ಕಾರ ನಾಡಿನ ರೈತರು ಹಾಗೂ ಸಾರ್ವಜನಿಕರ ಹಿತವನ್ನು ಮರೆತು ತಮಿಳುನಾಡಿಗೆ ನೀರು ಬಿಡಲು ಮುಂದಾಗಿರುವುದು ಅತ್ಯಂತ ಖಂಡನೀಯ ಎಂದರು.ಜಿಲ್ಲೆಯಲ್ಲಿರುವ ಕೆಲವು ಕೆರೆಗಳಿಗೆ ನಾಟಕೀಯ ರೀತಿಯಲ್ಲಿ ನೀರು ಬಿಡಲಾಗುತ್ತಿದೆ. ಕೆರೆಗಳಿಗೆ ನೀರು ತುಂಬಿಸಲು ಒಂದು ವಾರದ ಗಡುವು ನೀಡುತ್ತೇವೆ. ಇಲ್ಲವಾದರೇ ಮುಂದಿನ ದಿನಗಳಲ್ಲಿ ಚಾಮರಾಜನಗರ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.