ವಿದ್ಯುತ್ ವಿತರಣಾ ವ್ಯವಸ್ಥೆ ಖಾಸಗಿಗೆ ಬೇಡ: ರೈತ ಸಂಘ

KannadaprabhaNewsNetwork |  
Published : Jun 23, 2026, 01:15 AM IST
ಚಿತ್ರದುರ್ಗ  ಎರಡನೇ ಪುಟದ ಲೀಡ್  | Kannada Prabha

ಸಾರಾಂಶ

ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗವು ವಿದ್ಯುತ್ ವಿತರಣಾ ಪರವಾನಗಿಯನ್ನು ಖಾಸಗಿ ಕಂಪನಿಗೆ ನೀಡಲು ಮುಂದಾಗಿರುವ ಕ್ರಮ ಖಂಡಿಸಿ ರೈತ ಸಂಘದ ಕಾರ್ಯಕರ್ತರು ಸೋಮವಾರ ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗವು ವಿದ್ಯುತ್ ವಿತರಣಾ ಪರವಾನಗಿಯನ್ನು ಖಾಸಗಿ ಕಂಪನಿಗೆ ನೀಡಲು ಮುಂದಾಗಿರುವ ಕ್ರಮ ಖಂಡಿಸಿ ರೈತ ಸಂಘದ ಕಾರ್ಯಕರ್ತರು ಸೋಮವಾರ ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸಭೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣವೇ ತಮ್ಮ ನಿಲುವುಗಳ ಬದಲಾಯಿಸಬೇಕೆಂದು ಆಗ್ರಹಿಸಿದರು.

ವಿದ್ಯುತ್ ವಿತರಣಾ ವ್ಯವಸ್ಥೆಯ ಖಾಸಗಿ ಕಂಪನಿಗಳಿಗೆ ನೀಡಿದರೆ ಭವಿಷ್ಯದಲ್ಲಿ ರೈತರು ತೊಂದರೆಗೆ ಒಳಗಾಗುತ್ತಾರೆ. ಕೃಷಿ ಪಂಪುಸೆಟ್ಟುಗಳಿಗೆ ಹಾಲಿ ನೀಡುತ್ತಿರುವ ಉಚಿತ ವಿದ್ಯುತ್ ಪೂರೈಕೆ ರದ್ದಾಗಿ, ಮೋಟಾರು ಪಂಪುಸೆಟ್ಟುಗಳಿಗೆ ಮೀಟರು ಅಳವಡಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಬಡ ಜನರಿಗೆ ನೀಡುವ ಭಾಗ್ಯಗಳು ಹಾಗೂ ಉಚಿತ ವಿದ್ಯುತ್ ವ್ಯವಸ್ಥೆ ಪೂರ್ಣವಾಗಿ ರದ್ದಾಗುತ್ತದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.

ಸರ್ಕಾರಿ ಕಂಪನಿಗಳಾದ ಬೆಸ್ಕಾಂ, ಎಸ್ಕಾಂ, ಮೆಸ್ಕಾಂ ಸಿಇಎಸ್ಸಿ ಕಂಪನಿಗಳಲ್ಲಿರುವ ನೌಕರರಿಗೆ ಮತ್ತು ಅವರ ಕುಟುಂಬಗಳಿಗೆ ಜೀವನ ನಿರ್ವಹಿಸಲು ತೊಂದರೆ ಯಾಗುತ್ತದೆ ಹಾಗೂ ಅವರ ಕುಟುಂಬಗಳು ನಿರ್ಗತಿಕರಾಗಿ ಆತ್ಮಹತ್ಯೆ ದಾರಿ ಹಿಡಿಯಬೇಕಾಗುತ್ತದೆ. ವಿದ್ಯುತ್ ವಿತರಣಾ ವ್ಯವಸ್ಥೆ ಖಾಸಗಿಯವರಿಗೆ ನೀಡಿದಲ್ಲಿ ಕಾರ್ಪೊರೇಟ್ ಕಂಪನಿಗಳಿಗೆ ಲೂಟಿ ಮಾಡಿ ಕೊಳ್ಳಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಅಲ್ಲದೇ ಖಾಸಗೀಕರಣ ಮಾಡಿದರೆ ವಿದ್ಯುತ್ ಬೆಲೆ ದುಬಾರಿಯಾಗುತ್ತದೆ ಎಂದು ದೂರಿದರು.

ಸರ್ಕಾರಿ ವಿದ್ಯುತ್ ಕಂಪನಿಗಳಲ್ಲಿರುವ ಮೀಸಲಾತಿ ರದ್ದಾಗುತ್ತದೆ ಹಾಗೂ ಇದರಿಂದ ದಲಿತರು, ಕೆಳ ವರ್ಗದ ಜನತೆಗೆ ಹಾಗೂ ಉದ್ಯೋಗ ಆಕಾಂಕ್ಷಿಗಳಿಗೆ ಉದ್ಯೋಗ ಎನ್ನುವುದು ಮರೀಚಿಕೆಯಾಗುವ ಸಂಭವವಿರುತ್ತದೆ. ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗೀಕರಣ ಮಾಡಿದರೆ ಖಾಸಗಿ ಕಂಪನಿಗಳು ಗೃಹಬಳಕೆ ಹಾಗೂ ಇನ್ನಿತರ ಉದ್ದೇಶಕ್ಕೆ ವಿದ್ಯುತ್ ಪಡೆಯಲು ದುಬಾರಿ ವೆಚ್ಚವನ್ನು ಪಾವತಿಸಲು ಒತ್ತಾಯಿಸುವುದರಿಂದ ದೀನ ದಲಿತರು ರೈತರು, ಜನಸಾಮಾನ್ಯರು, ಮಹಿಳೆಯರಿಗೆ ಹೊರೆಯಾಗುವ ಸಂಭವ ಇರುತ್ತದೆ ಎಂದರು.

ಖಾಸಗಿ ಕಂಪನಿಗಳು ಲಾಭ ನೋಡುತ್ತವೆಯೇ ಹೊರತು ಸಾರ್ವಜನಿಕರು ರೈತರು, ದಲಿತರು, ಮಹಿಳೆಯರು, ಶೋಷಿತರ ಹಿತದೃಷ್ಟಿಯನ್ನು ನೋಡುವುದಿಲ್ಲ. ಸೇವೆ ಎನ್ನುವುದು ಗೌಣ ವಾಗುತ್ತದೆ ಹಾಗಾಗಿ ವಿದ್ಯುತ್ ವಿತರಣೆಯ ಖಾಸಗಿಗೆ ಕೊಡಬಾರದೆಂದು ಜಿಲ್ಲಾಡಳಿತಕ್ಕೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಿದರು. ನಂತರ ಬೆಸ್ಕಾಂ ಮುಖ್ಯ ಎಂಜಿನಿಯರ್ ಕಚೇರಿ ಮುಂಭಾಗವೂ ಕೂಡಾ ಪ್ರತಿಭಟನೆ ನಡೆಸಲಾಯಿತು.

ರೈತ ಸಂಘ ಮುಖಂಡರಾದ ಬೇಡರೆಡ್ಡಿ ಹಳ್ಳಿ ಬಸವರೆಡ್ಡಿ, ಕೆ.ಟಿ.ತಿಪ್ಪೇಸ್ವಾಮಿ, ಕೆ.ಪಿ.ಭೂತಯ್ಯ, ರೆಡ್ಡಿಹಳ್ಳಿ ವೀರಣ್ಣ, ಮಲ್ಲಿಕಾರ್ಜುನ, ಮರ್ಲಹಳ್ಳಿ ರವಿಕುಮಾರ್, ಕಾಂತರಾಜ್, ಪ್ರವೀಣ್ ಕುಮಾರ್, ಚಿಕ್ಕಬೆನ್ನೂರು ಶಾಂತಮ್ಮ, ಶಿವಕುಮಾರ್, ಎರ್ರಿ ಸ್ವಾಮಿ, ಲಕ್ಷ್ಣಣ ಹೂಗಾರ ಪ್ರತಿಭಟನೆ ನೇತೃತ್ವ ವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯೋಧರ ಕಲ್ಯಾಣಕ್ಕೆ ನಿವೃತ್ತ ಶಿಕ್ಷಕಿ ₹10 ಲಕ್ಷ ದೇಣಿಗೆ!
ವಿದ್ಯುತ್ ಖಾಸಗೀಕರಣ ವಿರೋಧಿಸಿ ಬೆಸ್ಕಾಂಗೆ ರೈತರ ಮುತ್ತಿಗೆ