ಕನ್ನಡಪ್ರಭ ವಾರ್ತೆ ತುರುವೇಕೆರೆ
ರೈತರು ಪಡೆದಿದ್ದ ಸಾಲಕ್ಕೆ ಪ್ರತಿಯಾಗಿ ಕರ್ನಾಟಕ ಬ್ಯಾಂಕ್ ನಾಲ್ಕು ಕೋಟಿ ಮೌಲ್ಯದ ಜಮೀನನ್ನು ಕೇವಲ 34.80 ಲಕ್ಷಕ್ಕೆ ಮಾರಾಟ ಮಾಡಿರುವ ಕ್ರಮ ಖಂಡಿಸಿ ರಾಜ್ಯದ ಹಲವಾರು ಭಾಗಗಳಿಂದ ರೈತ ಮುಖಂಡರು ಕರ್ನಾಟಕ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದರು.
ನೇತೃತ್ವ ವಹಿಸಿದ್ದ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ರೈತ ಪಡೆದ ಕೇವಲ 5 ಲಕ್ಷ ಸಾಲಕ್ಕೆ ಬ್ಯಾಂಕ್ 34.80 ಲಕ್ಷ ಕಟ್ಟಬೇಕೆಂದು ಸೂಚಿಸಿತ್ತು. ಇದು ಸಾಧ್ಯವಾಗದ ಮಾತೆಂದು ಮಾತುಕತೆಗೆ ಕುಳಿತಾಗ ಒಮ್ಮೆ ಸಾಲ ತೀರುವಳಿ ಯೋಜನೆಯಲ್ಲಿ ಅವಕಾಶ ನೀಡಿತ್ತು. ಆದರೆ ಆ ವೇಳೆಗಾಗಲೇ ಬ್ಯಾಂಕ್ ರೈತನ ಭೂಮಿಯನ್ನು ನ್ಯಾಯಾಲಯದ ಮೂಲಕ ಆನ್ ಲೈನ್ ಟೆಂಡರ್ ನಲ್ಲಿ ಬೇರೆಯವರಿಗೆ ಮಾರಾಟ ಮಾಡಿದೆ. ಅದೂ ಕೇವಲ ಕೆಲವೇ ಲಕ್ಷಗಳಿಗೆ ಕೋಟ್ಯಂತರ ಬೆಲೆ ಬಾಳುವ ಭೂಮಿ ಮಾರಾಟ ಮಾಡಿದ ಉದ್ದೇಶವಾದರೂ ಏನೆಂದು ಪ್ರಶ್ನಿಸಿದರು.ಬ್ಯಾಂಕ್ ಅಧಿಕಾರಿಗಳು ದಲ್ಲಾಳಿಗಳೊಂದಿಗೆ ಶಾಮೀಲಾಗಿ ರೈತನನ್ನು ಬೀದಿಗೆ ತಳ್ಳಿದ್ದಾರೆ. ನಾಲ್ಕು ಕೋಟಿಗೆ ಭೂಮಿ ಮಾರಿ ಸಾಲದ ಹಣ ಪಡೆದು ಉಳಿಕೆ ಹಣ ನೀಡಿದ್ದರೆ ಬ್ಯಾಂಕ್ ಕ್ರಮವನ್ನು ಒಪ್ಪಬಹುದಿತ್ತು ಎಂದರು.
ಅಂತಿಮವಾಗಿ ಭೂಮಿ ಖರೀದಿಸಿರುವ ವ್ಯಕ್ತಿಯೊಂದಿಗೆ ಸಂಧಾನ ನಡೆಸಿ ಭೂಮಿ ಪುನಃ ರೈತನಿಗೇ ಹಿಂತಿರುಗಿಸುವಂತೆ ಮನವೊಲಿಸಲು ನಿರ್ಧರಿಸಲಾಯಿತು.
ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆಂಪುಗೌಡ, ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ್ಚಿ, ಜಿಲ್ಲಾ ಅಧ್ಯಕ್ಷ ಗೋವಿಂದರಾಜು, ತಾಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ್ ಗೌಡ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಅಕ್ಕಿ, ರಮ್ಯ ರಾಮಣ್ಣ, ನೇತ್ರಾವತಿ ಸೇರಿ ಹಲವಾರು ಮುಖಂಡರು ಉಪಸ್ಥಿತರಿದ್ದರು.