ಭದ್ರಾ ಬಲದಂಡೆ ಕಾಮಗಾರಿ ಸ್ಥಗಿತಕ್ಕೆ ದಾವಣಗೆರೆಯಲ್ಲಿ ರೈತ ಸಂಘ ಆಗ್ರಹ

KannadaprabhaNewsNetwork |  
Published : Jun 23, 2025, 12:33 AM ISTUpdated : Jun 23, 2025, 11:11 AM IST
22ಕೆಡಿವಿಜಿ2, 3-ದಾವಣಗೆರೆಯಲ್ಲಿ ಭಾನುವಾರ ಬಿಜೆಪಿ ರೈತ ಮೋರ್ಚಾ ಮುಖಂಡರಾದ ಲೋಕಿಕೆರೆ ನಾಗರಾಜ, ಬಿ.ಎಂ.ಸತೀಶ ಕೊಳೇನಹಳ್ಳಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಭದ್ರಾ ಅಚ್ಚುಕಟ್ಟು ರೈತರ ಬದುಕಿಗೆ ಮಾರಕವಾಗುವಂತೆ ಡ್ಯಾಂನ ಬಲದಂಡೆ ನಾಲೆ ಸೀಳಿ, ನೀರು ಪೂರೈಸುವ ಕಾಮಗಾರಿ ಕೈಗೊಂಡ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಲು ಒತ್ತಾಯ

 ದಾವಣಗೆರೆ :  ಭದ್ರಾ ಅಚ್ಚುಕಟ್ಟು ರೈತರ ಬದುಕಿಗೆ ಮಾರಕವಾಗುವಂತೆ ಡ್ಯಾಂನ ಬಲದಂಡೆ ನಾಲೆ ಸೀಳಿ, ನೀರು ಪೂರೈಸುವ ಕಾಮಗಾರಿ ಕೈಗೊಂಡ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಲು ಒತ್ತಾಯಿಸಿ ಜೂ.23ರಂದು ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಡ್ಯಾಂನ ಬಲದಂಡೆ ನಾಲೆ ಬಳಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ದಾವಣಗೆರೆ ಜಿಲ್ಲಾ ರೈತ ಒಕ್ಕೂಟ ಹಾಗೂ ಬಿಜೆಪಿ ಜಿಲ್ಲಾ ರೈತ ಮೋರ್ಚಾ ತಿಳಿಸಿವೆ.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮತನಾಡಿದ ಒಕ್ಕೂಟ ಮತ್ತು ಬಿಜೆಪಿ ಮುಖಂಡರಾದ ಬಿ.ಎಂ.ಸತೀಶ ಕೊಳೇನಹಳ್ಳಿ, ಲೋಕಿಕೆರೆ ನಾಗರಾಜ, ಭದ್ರಾ ಬಲದಂಡೆ ನಾಲೆಯ ಬಳಿ, ಭದ್ರಾ ಜಲಾಶಯದ ನಿರ್ಬಂಧಿತ ಪ್ರದೇಶದಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳದಂತೆ ಒತ್ತಾಯಿಸಿ ದಾವಣಗೆರೆ ಜಿಲ್ಲೆಯ ಭದ್ರಾ ಅಚ್ಚುಕಟ್ಟು ರೈತರು ಸಾವಿರಾರು ಸಂಖ್ಯೆಯಲ್ಲಿ ಅಂದು ಬೆಳಿಗ್ಗೆ 10.30ರಿಂದ ಭದ್ರಾ ಡ್ಯಾಂ ಬಲದಂಡೆ ನಾಲೆಯ ಬಳಿ ಬೃಹತ್‌ ಹೋರಾಟ ನಡೆಸಲಿದ್ದಾರೆ ಎಂದರು.

ಡ್ಯಾಂನ ನಿರ್ಬಂಧಿತ ಪ್ರದೇಶದಲ್ಲಿ ಯಾವುದೇ ಕಾಮಗಾರಿಗಳನ್ನೂ ಕೈಗೊಳ್ಳಬಾರದು. ಇದು ಇರುವಂತಹ ನಿಯವಾಗಿದ್ದರೂ ಭದ್ರಾ ಡ್ಯಾಂನ ಬಲದಂಡೆ ನಾಲೆ ಸೀಳಿ, ನೆರೆ ಜಿಲ್ಲೆಗಳಾದ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ 346 ಗ್ರಾಮಗಳು, ಚಿಕ್ಕಮಗಳೂರು ಜಿಲ್ಲೆ ತರೀಕೆರೆ, ಕಡೂರು ತಾಲೂಕುಗಳ 172 ಗ್ರಾಮಗಳಿಗೆ ನೀರು ಪೂರೈಸುವ ಕಾಮಗಾರಿ ತಕ್ಷಣವೇ ಸ್ಥಗಿತಗೊಳಿಸುವಂತೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಮಧ್ಯ ಕರ್ನಾಟಕದ ಭದ್ರಾ ಬೃಹತ್ ಜಲಾಶಯದ ಸುರಕ್ಷತೆಯನ್ನೇ ನಿರ್ಲಕ್ಷಿಸಿ, ರಾಜ್ಯ ಸರ್ಕಾರ 1660 ಹಳ್ಳಿಗಳಿಗೆ ಕುಡಿಯುವ ನೀರೊದಗಿಸುವ ಬೃಹತ್ ಕಾಮಗಾರಿಯನ್ನು ಭದ್ರಾ ಜಲಾಶಯದ ನಿರ್ಬಂಧಿತ ಪ್ರದೇಶದಲ್ಲಿ (ಬಫರ್ ಝೋನ್‌) ಕೈಗೊಂಡಿದೆ. ಕಾಂಗ್ರೆಸ್ ಸರ್ಕಾರ ಸೌಜನ್ಯಕ್ಕಾದರೂ ಭದ್ರಾ ಅಚ್ಚುಕಟ್ಟಿನ ಪ್ರದೇಶದ ಜನಪ್ರತಿನಿಧಿಗಳು, ರೈತರ ಸಭೆಯನ್ನೇ ನಡೆಸದೇ ಕಾಮಗಾರಿ ಕೈಗೊಂಡಿರುವುದು ಅಕ್ಷಮ್ಯ. ಇದು ಅಚ್ಚುಕಟ್ಟು ರೈತರ ಕತ್ತು ಹಿಸುಕುವ ಅಮಾನವೀಯ ಕೃತ್ಯವಾಗಿದೆ ಎಂದು ದೂರಿದರು.

ಅವೈಜ್ಞಾನಿಕ ಕಾಮಗಾರಿಯಿಂದ ಬಲದಂಡೆ ನಾಲೆಯ ನೀರಿನ ವೇಗವು ಜಲಾಶಯದ ಬುಡದಲ್ಲೇ ಕ್ಷೀಣಿಸುತ್ತದೆ. ಇದರಿಂದ ನಾಲೆಯಲ್ಲಿ ಹರಿಯುವ ನೀರಿನ ವೇಗದ ಪ್ರಮಾಣ ಕಡಿಮೆಯಾಗಿ, ನಾಲೆಯ ಕೊನೆಯ ಭಾಗದ ರೈತರ ಜಮೀನುಗಳಿಗೆ ನೀರು ತಲುಪುವ ಸಾಧ್ಯತೆ ಕಡಿಮೆಯಾಗುತ್ತದೆಂಬ ಆಂತಕ ರೈತರಲ್ಲಿದೆ ಎಂದರು.

ಭದ್ರಾ ಬಲದಂಡೆ ನಾಲೆ ಅಚ್ಚುಕಟ್ಟು ರೈತರ ಆತಂಕ ತಗ್ಗಿಲು ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಬೇಕು. ಪರ್ಯಾಯವಾಗಿ ನೀರಿನ ಘಟಕಗಳಿಗೆ ನೀರು ಪೂರೈಸುವ ಕಾಮಗಾರಿಯನ್ನು ಕೈಗೊಳ್ಳಲಿ. ಕುಡಿಯುವ ನೀರಿನ ಯೋಜನೆ ಕೈಗೊಳ್ಳಲು ಸರ್ಕಾರದ ಕ್ರಮಕ್ಕೆ ಯಾವುದೇ ರೈತರು ತಕರಾರು ಮಾಡುತ್ತಿಲ್ಲ ಎಂದು ಹೇಳಿದರು.

ಮಾಯಕೊಂಡ ಮಾಜಿ ಶಾಸಕ ಎಂ.ಬಸವರಾಜ ನಾಯ್ಕ ಮಾತನಾಡಿ, ಅತಿಯಾದ ಮಳೆ ಹೊಡೆತಕ್ಕೆ ದೊಡ್ಡ ದೊಡ್ಡ ಗುಡ್ಡಗಳೇ ಕುಸಿಯುತ್ತಿರುವುದನ್ನು ದಿನೇದಿನೇ ಹೆಚ್ಚುತ್ತಿವೆ. ಇವೆಲ್ಲವನ್ನೂ ಸರ್ಕಾರ ಮನಗಂಡಿದ್ದರೂ, ಜಲಾಶಯದ ಸುರಕ್ಷತೆ ಮತ್ತು ಜನರ ಹಿತಾಸಕ್ತಿ ಕಡೆಗಣಿಸಿ, ಇಂತಹದ್ದೊಂದು ಅವೈಜ್ಞಾನಿಕ, ಅಪಾಯಕಾರಿ ಕಾಮಗಾರಿ ಕೈಗೊಂಡಿರುವುದನ್ನು ಖಂಡಿಸುತ್ತೇವೆ. ಭದ್ರಾ ಡ್ಯಾಂನ ನಿರ್ಬಂಧಿತ ಪ್ರದೇಶದಲ್ಲಿ ಡ್ಯಾಂಗೆ ಆಪತ್ತು ತಂದೊಡ್ಡುವ ಕಾಮಗಾರಿಯನ್ನು ಶಾಶ್ವತವಾಗಿ ಕೈಬಿಡಬೇಕು ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೆಬಾಳು, ರಾಜು ತೋಟಪ್ಪನವರ, ರಾಮಪುರದ ನರೇಂದ್ರ ಗೌಡ್ರು, ಕಾಶೀಪುರ ಎಚ್.ಟಿ.ಮಲ್ಲಿಕಾರ್ಜುನ, ಎನ್.ಎಚ್.ಹಾಲೇಶ ಇತರರು ಇದ್ದರು.

PREV
Read more Articles on

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ