ಚಿಕ್ಕಮಗಳೂರು: ಸಾಮಾಜಿಕ ಮಾಧ್ಯಮಗಳು ಬೆಳೆಯುತ್ತಿದ್ದಂತೆ ಸುಗಮ ಸಂಗೀತ ಮಾಧ್ಯಮ ನೇಪಥ್ಯಕ್ಕೆ ಸರಿಯುತ್ತಿದೆಯೇನೋ ಎಂಬ ಆತಂಕ ಮೂಡುತ್ತಿದೆ ಎಂದು ಗಾಯಕ, ಸಂಗೀತ ನಿರ್ದೇಶಕ ಮೈಸೂರಿನ ನಿತಿನ್ ರಾಜಾರಾಮ್ ಶಾಸ್ತ್ರಿ ವಿಷಾದ ವ್ಯಕ್ತಪಡಿಸಿದರು. ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಹಾಗೂ ಯುರೇಕಾ ಅಕಾಡೆಮಿಯ ಆಶ್ರಯದಲ್ಲಿ ವಿಶ್ವ ಸಂಗೀತ ದಿನಾಚರಣೆ ಪ್ರಯುಕ್ತ ನಗರದ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಿದ್ದ ಪೂರ್ವಿ ಗಾನ ಯಾನ -108 ರ ಸರಣಿಯಲ್ಲಿ ‘ಹಾಡು ಹಳೆಯದಾದರೇನು ಭಾವ ನವನವೀನ’ ಶೀರ್ಷಿಕೆಯ ಕನ್ನಡ ಚಿತ್ರಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಪೂರ್ವಿ ನಾದೋಪಾಸನಾ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಹಿಂದೆ ಈ ಟಿವಿ ಕನ್ನಡ ಚಾನೆಲ್ ಇದ್ದ ಸಂದರ್ಭ ಅತ್ಯುತ್ತಮ ಕಾರ್ಯಕ್ರಮಗಳು ಮೂಡಿ ಬರುತ್ತಿದ್ದವು. ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಸಾರಥ್ಯದ ‘ಎದೆತುಂಬಿ ಹಾಡುವೆನು’, ರವಿ ಬೆಳಗೆರೆ ನಿರೂಪಣೆಯ‘ಎಂದೂ ಮರೆಯದ ಹಾಡು’ ಹಾಗೆಯೇ ಪ್ರಣಯರಾಜ ಶ್ರೀನಾಥ್ ಅವರ ನಿರ್ವಹಣೆಯ ‘ಸ್ನೇಹದ ಕಡಲಲ್ಲಿ’ ಕಾರ್ಯಕ್ರಮ ತುಂಬಾ ಗಮನ ಸೆಳೆಯುತ್ತಿದ್ದವು. ಇಂದು ಆ ಮಟ್ಟಿಗಿನ ವಿಶೇಷ ಕಂಡು ಬರುತ್ತಿಲ್ಲ ಎಂದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಖ್ಯಾತ ಚಲನಚಿತ್ರ ಕಲಾವಿದೆ ಪದ್ಮಾ ವಾಸಂತಿ, ಮಾನಸ ಸರೋವರ ಚಲನಚಿತ್ರ ಬಿಡುಗಡೆಯಾಗಿ 42 ವರ್ಷಗಳು ಕಳೆದಿವೆ. ಆದರೂ ಜನರು ನನ್ನನ್ನು ಮರೆತಿಲ್ಲ. ಅಂದು ರಸ್ತೆಯಲ್ಲಿ ಹೋಗುತ್ತಿದ್ದ ನನ್ನನ್ನು ಗುರುತಿಸಿ ಪುಟ್ಟಣ್ಣ ಕಣಗಾಲ್ ಅವರು ಅವಕಾಶ ನೀಡಿದ್ದು, 24 ಗಂಟೆಗಳಲ್ಲಿ ತಾವು ಹಿರೋಯಿನ್‌ಆದ ಸಂತಸವನ್ನು ಹಂಚಿಕೊಂಡರು.ಸುಗಮ ಸಂಗೀತ ಗಂಗಾದ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಮಾತನಾಡಿ, 1982 ರಲ್ಲಿ ಪ್ಯಾರೀಸ್‌ನಲ್ಲಿ ವಿಶ್ವ ಸಂಗೀತ ದಿನಾಚರಣೆ ಪ್ರಾರಂಭವಾಯಿತು. ಇಂದು 170 ದೇಶಗಳ 1000 ನಗರಗಳಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಇದೀಗ ನಡೆಯುತ್ತಿರುವುದು ಪೂರ್ವಿಗಾನ ಯಾನದ ಗಾಯನ 108ನೇ ಸರಣಿಯದು, 108 ಸಂಖ್ಯೆ ಹಿಂದೂಗಳು, ಜೈನರು ಹಾಗೂ ಸಿಖ್ಖರಿಗೆ ಶ್ರೇಷ್ಠವಾಗಿದ್ದು, ಅಧ್ಯಾತ್ಮದ ಸಂಬಂಧವಿರುವುದರಿಂದ ಅತ್ಯಂತ ವಿಶೇಷವಾಗಿದೆ. ಈ ಸಾಧನೆಯಲ್ಲಿ ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್‌ನ ಮುಖ್ಯಸ್ಥ ಎಂ.ಎಸ್.ಸುಧೀರ್ ಅವರ ಸಾಧನೆ ಅಮೋಘ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಶಾಸಕ ಎಚ್.ಡಿ.ತಮ್ಮಯ್ಯ, ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷಎಂ.ಆರ್.ದೇವರಾಜಶೆಟ್ಟಿ, ಪತ್ರಕರ್ತ ಪಿ.ರಾಜೇಶ್ ಮಾತನಾಡಿದರು.