ಬದಲಾದ ಜೀವನಶೈಲಿ, ಒತ್ತಡದ ಬದುಕಿನಲ್ಲಿ ಕ್ರೀಡೆಗಳು ಸಹಕಾರಿಯಾಗಿವೆ.
ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಗೆ ಜಿಲ್ಲಾಧಿಕಾರಿ ಚಾಲನೆ
ಕನ್ನಡಪ್ರಭ ವಾರ್ತೆ ಹೊಸಪೇಟೆಬದಲಾದ ಜೀವನಶೈಲಿ, ಒತ್ತಡದ ಬದುಕಿನಲ್ಲಿ ಕ್ರೀಡೆಗಳು ಸಹಕಾರಿಯಾಗಿವೆ ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹೇಳಿದರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ವಿಜಯನಗರ ಜಿಲ್ಲಾ ಘಟಕ ವತಿಯಿಂದ ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಆವರಣದಲ್ಲಿ ಭಾನುವಾರ ಪತ್ರಿಕಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.ಎಲ್ಲರಿಗೂ ಇವತ್ತಿನ ಒತ್ತಡದ ಬದುಕಿನಲ್ಲಿ ಕ್ರೀಡೆಗಳ ಮಹತ್ವವನ್ನು ಕಳೆದುಕೊಳ್ಳುವ ವಾತಾವರಣ ಹೆಚ್ಚಾಗಿದೆ. ಕ್ರೀಡೆಗಳನ್ನು ಆಡುವುದರಿಂದ ಆರೋಗ್ಯ ಸದೃಢವಾಗಿರುತ್ತದೆ.ಇತ್ತೀಚಿನ ದಿನಗಳಲ್ಲಿ ಪತ್ರಿಕೋದ್ಯಮ ಕ್ಷೇತ್ರದಿಂದ ಹಿಡಿದು ಎಲ್ಲಾ ಕ್ಷೇತ್ರಗಳಲ್ಲಿ ಒತ್ತಡಗಳು ಹೆಚ್ಚಾಗಿವೆ.ಇಂತಹ ದಿನಮಾನಗಳಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ದೊಡ್ಡ ಸಾವಲಿನ ಕೆಲಸವಾಗಿದೆ. ಪತ್ರಕರ್ತರು ಕೆಲಸ ಒತ್ತಡದಲ್ಲಿ ಬಿಡುವು ಮಾಡಿಕೊಂಡು ಕ್ರೀಡೆ ಆಯೋಜನೆ ಮಾಡಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ ಎಂದರು.ವಿಜಯನಗರ ಜಿಲ್ಲಾ ಎಸ್ಪಿ ಡಾ. ಶ್ರೀಹರಿಬಾಬು ಮಾತನಾಡಿ, ಕ್ರೀಡೆಗಳಲ್ಲಿ ಸೋಲು-ಗೆಲುವು ಸಾಮಾನ್ಯ ಎರಡನ್ನ ಸಮನಾಗಿ ಸ್ವೀಕರಿಸಬೇಕು, ಆಟವನ್ನ ಮನರಂಜನೆಯಾಗಿ ತೆಗೆದುಕೊಂಡಾಗ ಹೆಚ್ಚಿನ ಆಸಕ್ತಿ ಬರುತ್ತದೆ.ಪತ್ರಕರ್ತರು ಮತ್ತು ಪೊಲೀಸರು ಒಂದೇ ಮುಖದ ಎರಡು ನಾಣ್ಯಗಳು ಇದ್ದಂತೆ. ಇಬ್ಬರು ಕೂಡ ಸಮಾಜ ಬದಲಾವಣೆ ಮಾಡುವ ಕೆಲಸದಲ್ಲಿ ತೊಡಗಿಕೊಂಡಿದ್ದೇವೆ ಎಂದರು.ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಎರಡು ತಂಡಗಳಾಗಿ ಮಾಡಿಕೊಂಡು ಅದರಲ್ಲಿ ಒಂದು ತಂಡ ಹಂಪಿ ವಾರಿಯರ್ಸ್ ಮತ್ತೊಂದು ತಂಡ ವಿಜಯನಗರ ಕಿಂಗ್ಸ್ ತಂಡಗಳನ್ನು ಮಾಡಿಕೊಂಡು ಆಟ ಆಡಲಾಯಿತು.ಮೊದಲ ಟಾಸ್ ಗೆದ್ದ ಹಂಪಿ ವಾರಿಯರ್ಸ್ ಫಿಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಜಯಪ್ಪ ರಾಥೋಡ್ ನೇತೃತ್ವದ ವಿಜಯನಗರ ಕಿಂಗ್ಸ್ ನಿಗದಿತ ೧೦ ಓವರ್‌ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೭೦ ರನ್ ಗಳಿಸಿತು. ಇದರಲ್ಲಿ ವಿಶೇಷವಾಗಿ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ವಿಜಯನಗರ ಕಿಂಗ್ಸ್ ತಂಡದಲ್ಲಿ ಆಟವಾಡಿದರು.ವಿಜಯಕುಮಾರ ನೇತೃತ್ವದ ಹಂಪಿ ವಾರಿಯರ್ಸ್ ನಿಗದಿತ ೧೦ ಓವರ್‌ಗಳಲ್ಲಿ ೨ ವಿಕೇಟ್ ನಷ್ಟಕ್ಕೆ ೬೨ ರನ್ ಗಳಿಸಿ, ೯ ರನ್‌ಗಳಿಂದ ಸೋಲು ಅನುಭವಿಸಬೇಕಾಯಿತು.ಹಂಪಿ ವಾರಿಯರ್ಸ್ ತಂಡದಲ್ಲಿ ವಿಜಯನಗರ ಜಿಲ್ಲಾ ಎಸ್ಪಿ ಡಾ. ಶ್ರೀಹರಿಬಾಬು ಆಟ ಆಡುವ ಮೂಲಕ ಗಮನ ಸೆಳೆದರು. ಆಟದ ನಿರ್ಣಯಕರಾಗಿ ಅನಂತ ಜೋಶಿ ಮತ್ತು ಎಂ.ಜಿ. ಬಾಲಕೃಷ್ಣ ಭಾಗವಹಿಸಿದ್ದರು.ಈ ಸಂದರ್ಭ ಜಿಲ್ಲಾ ಕಾರ್ಯನಿರತ ಸಂಘದ ಅಧ್ಯಕ್ಷ ಪಿ.ಸತ್ಯಾನಾರಾಯಣ, ಜಿಲ್ಲಾ ಕಾರ್ಯದರ್ಶಿ ಕೆ.ಲಕ್ಷ್ಮಣ, ರಾಜ್ಯ ಕಾರ್ಯಕಾರಿಣಿ ಸದಸ್ಯ ಪಿ.ವೆಂಕೋಬ ನಾಯಕ ಹಾಗೂ ಹೊಸಪೇಟೆ ಉಪ ವಿಭಾಗದ ಪೊಲೀಸ್ ಅಧಿಕಾರಿ ಟಿ.ಮಂಜುನಾಥ, ಸಂಚಾರಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಹುಲುಗಪ್ಪ ಹಾಗೂ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗಿಯಾಗಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.