ಊರಿನ ಸೇವೆಯೇ ನಿಜವಾದ ಧರ್ಮ ಪಾಲನೆ-ಡಾ. ಪ್ರಕಾಶ ಭಟ್‌

KannadaprabhaNewsNetwork |  
Published : Jun 23, 2025, 12:33 AM IST
ಪೋಟೋ ಇದೆ. | Kannada Prabha

ಸಾರಾಂಶ

ಊರಿನ ಸೇವೆಯೇ ನಮ್ಮ ಧರ್ಮವಾಗಲಿ. ಅಂದಾಗ ಮಾತ್ರ ಗ್ರಾಮಸ್ವರಾಜ್ಯ, ಸಮೃದ್ಧ ಮತ್ತು ಸೌಹಾರ್ಧ ಗ್ರಾಮಗಳ ನಿರ್ಮಾಣ ಸಾಧ್ಯ ಎಂದು ಗ್ರಾಮಾಭಿವೃದ್ಧಿ ಚಿಂತಕ ಡಾ.ಪ್ರಕಾಶ ಭಟ್‌ ಕರೆ ನೀಡಿದರು.

ಗದಗ:ಊರಿನ ಸೇವೆಯೇ ನಮ್ಮ ಧರ್ಮವಾಗಲಿ. ಅಂದಾಗ ಮಾತ್ರ ಗ್ರಾಮಸ್ವರಾಜ್ಯ, ಸಮೃದ್ಧ ಮತ್ತು ಸೌಹಾರ್ಧ ಗ್ರಾಮಗಳ ನಿರ್ಮಾಣ ಸಾಧ್ಯ ಎಂದು ಗ್ರಾಮಾಭಿವೃದ್ಧಿ ಚಿಂತಕ ಡಾ.ಪ್ರಕಾಶ ಭಟ್‌ ಕರೆ ನೀಡಿದರು.

ಹುಲಕೋಟಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಎರಡು ದಿನಗಳ ಕಾಲ ಆಯೋಜನೆಯಾಗಿದ್ದ ಗದಗ, ಧಾರವಾಡ, ಚಿಕ್ಕಬಳ್ಳಾಪುರ ಜಿಲ್ಲೆಗಳ ಸ್ವಗ್ರಾಮ ಮಿತ್ರರ ಪ್ರೇರಣಾ ಶಿಬಿರದಲ್ಲಿ ಅವರು ಮಾತನಾಡಿದರು.

ನಮ್ಮ ಮನೆ, ನಮ್ಮ ಓಣಿ, ನಮ್ಮ ಊರು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಗ್ರಾಮದ ಪ್ರತಿಯೊಬ್ಬರ ಕರ್ತವ್ಯ. ಎಲ್ಲವನ್ನೂ ಸ್ಥಳೀಯ ಆಡಳಿತವಾದ ಗ್ರಾಮ ಪಂಚಾಯತಿ ಅಥವಾ ಸರ್ಕಾರವೇ ಮಾಡಲಿ ಎನ್ನುವ ಮನೋಭಾವನೆ ತೊರೆದು ಊರಿನ ಸೇವೆಗೆ ಕಂಕಣ ತೊಡಬೇಕು. ಸೇವೆಯೇ ನಮ್ಮ ಧರ್ಮವಾಗಬೇಕು ಎಂದು ಕಿವಿಮಾತು ಹೇಳಿದರು.

ನಮ್ಮ ಬೇಡಿಕೆಗಳಿಗೆ ತಕ್ಕಮಟ್ಟಿನ ಸ್ಪಂದನೆ ನೀಡಿ ಸರ್ಕಾರ ತನ್ನ ಇತಿಮಿತಿಯಲ್ಲಿ ಸೌಲಭ್ಯಗಳನ್ನು ಕಲ್ಪಿಸುತ್ತದೆ. ಆದರೆ ಎಲ್ಲವೂ ಸರ್ಕಾರದಿಂದಲೇ ಆಗುವುದಿಲ್ಲ. ಶ್ವಮದಾನದ ಮೂಲಕ ಸ್ವಚ್ಚತೆ, ಸಣ್ಣಪುಟ್ಟ ನಿರ್ಮಾಣ, ಮೂಲ ಸೌಕರ್ಯಗಳ ಸದ್ಬಳಕೆ ಆಗಬೇಕಿದ್ದರೆ ಸ್ವಗ್ರಾಮ ಮಿತ್ರರು ಊರಿನ ಯುವಕ/ಯುವತಿಯರಲ್ಲಿ ಜಾಗೃತಿ ಮೂಡಿಸಿ ಸೇವೆಗೆ ಅಣಿಗೊಳಿಸಬೇಕು ಎಂದು ಹೇಳಿದರು.

ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಮಾತನಾಡಿ, ಊರಿನ ಸಮಗ್ರ ಅಭಿವೃದ್ಧಿ ಆಗಬೇಕೆಂದರೆ ಗ್ರಾಮದ ಎಲ್ಲರೂ ಚರ್ಚೆಯಲ್ಲಿ ಭಾಗಿಯಾಗಬೇಕು. ಕುರಿಗಾಯಿಗಳು, ದನಗಾಯಿಗಳು, ರೈತರು, ಕೃಷಿ ಕೂಲಿಕಾರರು, ಕಾರ್ಮಿಕರು ತಮ್ಮ ಬೇಡಿಕೆಗಳ ಬಗ್ಗೆ ಬಾಯಿ ಬಿಡಬೇಕು. ಅಂದಾಗ ಮಾತ್ರ ಗ್ರಾಮ ಸಮಗ್ರ ಅಭಿವೃದ್ಧಿಯಾಗಲು ಸಾಧ್ಯ. ಇದೆಲ್ಲ ಸಾಕಾರ ಆಗಬೇಕೆಂದರೆ ಜನತೆ ಆಯ್ಕೆ ಮಾಡಿದ ಶಾಸಕರು ಮತ್ತು ಸಚಿವರು ಅಧಿಕಾರಿಗಳ ಸಮೇತ ಗ್ರಾಮ ವಾಸ್ತವ್ಯ ಮಾಡಿ ಸಮಸ್ಯೆ ಆಲಿಸಿ, ಪರಿಹರಿಸಬೇಕು. ಇಂಥ ಗ್ರಾಮ ವಾಸ್ತವ್ಯಕ್ಕೆ ಗ್ರಾಮಸ್ಥರು ಬೇಡಿಕೆ ಇಡಬೇಕು ಎಂದು ಸಲಹೆ ನೀಡಿದರು.

ಊರಿನ ಶಾಲೆ, ಅಂಗನವಾಡಿ, ಆಸ್ಪತ್ರೆ, ಮಠ, ಮಂದಿರ, ಕೆರೆ, ಬಾವಿ, ಗುಡ್ಡಗಳು ನಮ್ಮ ಆಸ್ತಿಗಳು ಎನ್ನುವ ಹೆಮ್ಮೆ ಗ್ರಾಮಸ್ಥರಲ್ಲಿ ಮೂಡಬೇಕು. ಅವುಗಳ ರಕ್ಷಣೆ ನಮ್ಮೆಲ್ಲರ ಹೊಣೆ ಎನ್ನುವ ಭಾವನೆಯಿಂದ ಯುವ ಸಮುದಾಯ ಸೇವೆಗೆ ಮುಂದಾದಾಗಬೇಕು. ಯುವಕರನ್ನು ಸೇವೆಗೆ ಅಣಿಗೊಳಿಸುವ ನಿಟ್ಟಿನಲ್ಲಿ ಸ್ವಗ್ರಾಮ ಮಿತ್ರರ ಜವಾಬ್ದಾರಿ ದೊಡ್ಡದಿದೆ ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿದ್ದ ಡಾ.ತಿಪ್ಪೆಸ್ವಾಮಿ ಕೆ.ಟಿ, ಅಶ್ವಿನ್‌ ಭೂಸಾರೆ ಅವರ ಸ್ವಗ್ರಾಮ ಮಿತ್ರರ ಜವಾಬ್ದಾರಿ, ನಡುವಳಿಕೆ, ಸಂಘಟನಾ ಚಾತುರ್ಯ, ಮುಂದಿನ ಮೂರು ವರ್ಷಗಳಲ್ಲಿ ಸಾಧಿಸಬೇಕಿರುವ ಮೈಲುಗಟ್ಟುಗಳ ಬಗ್ಗೆ ತರಬೇತಿ ನೀಡಿದರು.

ಸ್ವಗ್ರಾಮ ಮಿತ್ರರ ತಂಡಗಳನ್ನು ರಚನೆ ಮಾಡಿ ಅವರಿಂದಲೇ ಗ್ರಾಮಗಳು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳು ಮತ್ತು ಆ ಸಮಸ್ಯೆಗಳ ನಿವಾರಣೆಗೆ ಇರುವ ಪರಿಹಾರೋಪಾಯಗಳ ಪಟ್ಟಿ ಮಾಡಿಸಿದರು.

ನಂತರ ನಡೆದ ಸಂವಾದದಲ್ಲಿ ಎಲ್ಲರೂ ಮುಕ್ತವಾಗಿ ಚರ್ಚಿಸಿ, ಪ್ರಶ್ನೆಗೆ ತೃಪ್ತಿಕರ ಉತ್ತರ ಪಡೆದರು. ಎರಡು ದಿನ ನಡೆದ ಶಿಬಿರದಲ್ಲಿ ಪ್ರಾರ್ಥನೆ, ಆಟ, ಹಾಡು, ಚರ್ಚೆ, ಹರಟೆ, ಗಂಭೀರ ಚರ್ಚೆಗಳು ನಡೆದವು.

PREV

Recommended Stories

ಉಪರಾಷ್ಟ್ರಪತಿ ಹುದ್ದೆ ರೇಸಲ್ಲಿ ರಾಜ್ಯ ಗೌರ್ನರ್‌ ಗೆಹಲೋತ್‌?
ಮಕ್ಕಳಲ್ಲಿ ಬಾಲ್ಯದಿಂದಲೇ ದೇಶಪ್ರೇಮ ತುಂಬಿ