ರೈತ ಸಂಘದಿಂದ ವೈದ್ಯರ ವಿರುದ್ಧ ಕಿಡಿ

KannadaprabhaNewsNetwork |  
Published : Jun 29, 2025, 01:33 AM IST
ಚಿತ್ರ 1 | Kannada Prabha

ಸಾರಾಂಶ

ತಾಲೂಕಿನ ಜವನಗೊಂಡನಹಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸ್ಟಾಫ್ ನರ್ಸ್ ಒಬ್ಬರ ಒಪ್ಪಂದದ ರಿನೀವಲ್‌ಗೆ ಸಹಿ ಮಾಡಲು ಜೆಜಿ ಹಳ್ಳಿಯ ಸರ್ಕಾರಿ ಆರೋಗ್ಯ ಕೇಂದ್ರದ ವೈದ್ಯ ಐದು ಸಾವಿರ ರುಪಾಯಿ ಲಂಚ ನೀಡುವಂತೆ ಆಗ್ರಹಿಸಿದ ಆಡಿಯೋ ಒಂದು ವೈರಲ್ ಆಗಿದೆ.

ಕನ್ನಡಪ್ರಭ ವಾರ್ತೆ ಹಿರಿಯೂರು

ತಾಲೂಕಿನ ಜವನಗೊಂಡನಹಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸ್ಟಾಫ್ ನರ್ಸ್ ಒಬ್ಬರ ಒಪ್ಪಂದದ ರಿನೀವಲ್‌ಗೆ ಸಹಿ ಮಾಡಲು ಜೆಜಿ ಹಳ್ಳಿಯ ಸರ್ಕಾರಿ ಆರೋಗ್ಯ ಕೇಂದ್ರದ ವೈದ್ಯ ಐದು ಸಾವಿರ ರುಪಾಯಿ ಲಂಚ ನೀಡುವಂತೆ ಆಗ್ರಹಿಸಿದ ಆಡಿಯೋ ಒಂದು ವೈರಲ್ ಆಗಿದೆ. ಈ ಘಟನೆ ಕಳೆದ ಹದಿನೈದು ದಿನಗಳ ಹಿಂದೆ ನಡೆದಿದ್ದು ಎನ್ನಲಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ.

ತಾಲೂಕಿನ ಜವಗೊಂಡನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಕೃಷ್ಣ ಎಂಬುವರದ್ದು ಎನ್ನಲಾದ ಆಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದ್ದು ಅದರಲ್ಲಿ ಗುತ್ತಿಗೆ ರಿನೀವಲ್ ಮಾಡಿಕೊಡುವುದಕ್ಕೆ ಸ್ಟಾಫ್ ನರ್ಸ್ ಒಬ್ಬರಿಗೆ 5 ಸಾವಿರ ರು. ನೀಡುವಂತೆ ಒತ್ತಾಯಿಸಲಾಗಿದೆ. 5 ಸಾವಿರ ರು. ಕೊಟ್ಟು ಸಹಿ ಪಡೆಯದಿದ್ದರೆ 10 ಸಾವಿರ ರು. ಆಗುತ್ತದೆ. ಇನ್ನೂ ತಡವಾದರೆ 15 ಸಾವಿರ ರು. ಆಗುತ್ತದೆ ಎಂದು ವೈದ್ಯರು ಪೆಟ್ರೋಲ್ ಡೀಸೆಲ್ ಬೆಲೆ ಏರಿಸಿದಂತೆ ಏರಿಸುತ್ತಾ ಹೋಗಿರುವುದು ಆಡಿಯೋದಲ್ಲಿದೆ.

‘ನನ್ನನ್ನು ಯಾರಿಂದಲೂ ಏನು ಮಾಡುವುದಕ್ಕೂ ಸಾಧ್ಯವಿಲ್ಲ. ನನ್ನ ಎದುರು ಹಾಕಿಕೊಂಡು ನೀನು ತಪ್ಪು ಮಾಡಿದೆ. ಹಣ ಕೊಟ್ಟರೆ ಮಾತ್ರವೇ ರಿನೀವಲ್ ಅರ್ಜಿಗೆ ಸಹಿ ಹಾಕೋದು’ ಎಂದು ವೈದ್ಯ ಹೇಳುವುದು ಆಡಿಯೋದಲ್ಲಿದೆ.

ಆಡಿಯೋ ವೈರಲ್ ಬೆನ್ನಲ್ಲೇ ಶನಿವಾರ ರೈತ ಸಂಘದ ಮುಖಂಡರು ಜೆಜಿ ಹಳ್ಳಿಯ ವೈದ್ಯನ ವಿರುದ್ಧ ಪ್ರತಿಭಟಿಸಿ ತಾಲೂಕು ಆರೋಗ್ಯ ಅಧಿಕಾರಿಗೆ (ಟಎಚ್ಒ) ಮನವಿ ಸಲ್ಲಿಸಿ, ‘ಜೆಜಿ ಹಳ್ಳಿಯ ವೈದ್ಯ ಸರ್ಕಾರದಿಂದ ಬಂದ ಔಷಧಿಗಳನ್ನು ರೋಗಿಗಳಿಗೆ ನೀಡದೇ ಔಷಧಿಯನ್ನು ಹೊರಗಡೆ ತೆಗೆದುಕೊಳ್ಳಲು ಚೀಟಿ ಬರೆದು ಕೊಡುತ್ತಾರೆ. ಇಂತಹ ವೈದ್ಯರನ್ನು ಕೂಡಲೇ ಇಲ್ಲಿಂದ ವರ್ಗಾಯಿಸಬೇಕು. ಅಪಘಾತದ ಗಾಯಾಳುಗಳಿಗೆ ತತ್ ಕ್ಷಣದ ಚಿಕಿತ್ಸೆ ಸಿಗುತ್ತಿಲ್ಲ. ಕೂಡಲೇ ಹೊಸ ವೈದ್ಯರನ್ನು ನೇಮಿಸಿ ಅನುಕೂಲ ಮಾಡಿಕೊಡಬೇಕು’ ಪ್ರತಿಭಟನಾಕಾರರು ಒತ್ತಾಯಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಕೆಟಿ ತಿಪ್ಪೇಸ್ವಾಮಿ,ತಾಲೂಕು ಅಧ್ಯಕ್ಷ ಸಿದ್ದರಾಮಣ್ಣ, ಹೋಬಳಿ ಅಧ್ಯಕ್ಷ ಈರಣ್ಣ, ರಾಜಪ್ಪ, ರಾಜಕುಮಾರ್,ಚಂದ್ರಪ್ಪ, ದಿಂಡಾವರ ಸಣ್ಣತಿಮ್ಮಣ್ಣ, ವಿರೂಪಾಕ್ಷಪ್ಪ, ಕನ್ಯಪ್ಪ, ವಜೀರ್ ಸಾಬ್, ಜಯರಾಮಣ್ಣ, ಮಹಾಲಿಂಗಪ್ಪ ಕಲೀಮ್ ಸಾಬ್ ಮುಂತಾದವರು ಹಾಜರಿದ್ದರು.ಬಾಕ್ಸ್...

ವೈದ್ಯನ ವಿರುದ್ಧ ನೋಟಿಸ್‌ ಜಾರಿ

ಆಡಿಯೋ ವೈರಲ್ ಬಗ್ಗೆ ತಾಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶ್ ಪ್ರತಿಕ್ರಿಯಿಸಿ, ಜವನಗೊಂಡನಹಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್ ಒಬ್ಬರ ಬಳಿ ಐದು ಸಾವಿರ ರುಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಆಡಿಯೋ ನನ್ನ ಗಮನಕ್ಕೂ ಬಂದಿದೆ. ಈ ಬಗ್ಗೆ ಡಿಎಚ್ಒ ಗಮನಕ್ಕೆ ತಂದಿದ್ದು ಆ ಆಸ್ಪತ್ರೆಯ ವೈದ್ಯ ಸರಿಯಾಗಿ ಕರ್ತವ್ಯಕ್ಕೆ ಬರುತ್ತಿಲ್ಲ. ಈತನ ಕರ್ತವ್ಯದ ಬಗ್ಗೆ ಹಲವಾರು ಸಮಸ್ಯೆಗಳು ಕೇಳಿ ಬಂದಿವೆ. ನೋಟಿಸ್ ಕೂಡ ಜಾರಿ ಮಾಡಲಾಗಿದೆ. ಡಾಕ್ಟರ್ ಲಂಚ ಕೇಳಿರುವ ಆಡಿಯೋ ಮೇಲಾಧಿಕಾರಿಗಳ ಗಮನಕ್ಕೆ ಹೋಗಿದೆ. ಶೀಘ್ರದಲ್ಲೇ ನೋಡಲ್ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಸ್ಯೆ ಬಗೆಹರಿದ್ರೆ 6 ತಿಂಗಳಲ್ಲಿ 1 ಲಕ್ಷ ನೇಮಕಾತಿ : ಸಾರಿಗೆ ಸಚಿವ
ಸರ್ಕಾರದಿಂದ ಮಹತ್ವದ ನಿರ್ಧಾರ : ವಿಪತ್ತು ವೇಳೆ ಇಡೀ ಊರಿನ ರೈತರಿಗೆ ಪರಿಹಾರ