ತುಂಬಿದ ಹೇಮಾವತಿ ಅಣೆಕಟ್ಟು: 30 ಸಾವಿರ ಕ್ಯುಸೆಕ್ ನೀರು ಬಿಡುಗಡೆ

KannadaprabhaNewsNetwork |  
Published : Jun 29, 2025, 01:33 AM IST
28ಕೆಎಂಎನ್ ಡಿ21,22 | Kannada Prabha

ಸಾರಾಂಶ

ಹೇಮಾವತಿ ಜಲಾನಯನ ಪ್ರದೇಶದ ಭಾಗದಲ್ಲಿ ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಹೇಮಾವತಿ ಅಣೆಕಟ್ಟೆ ತುಂಬಿ ಜಲಾಶಯಿಂದ 30 ಸಾವಿರಕ್ಕೂ ಅಧಿಕ ಕ್ಯುಸೆಕ್ ನೀರನ್ನು ನದಿಗೆ ಬಿಡುತ್ತಿರುವುದರಿಂದ ಹೇಮಾವತಿ ನದಿ ಮೈದುಂಬಿ ಹರಿಯುತ್ತಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಹೇಮಾವತಿ ಜಲಾನಯನ ಪ್ರದೇಶದ ಭಾಗದಲ್ಲಿ ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಹೇಮಾವತಿ ಅಣೆಕಟ್ಟೆ ತುಂಬಿ ಜಲಾಶಯಿಂದ 30 ಸಾವಿರಕ್ಕೂ ಅಧಿಕ ಕ್ಯುಸೆಕ್ ನೀರನ್ನು ನದಿಗೆ ಬಿಡುತ್ತಿರುವುದರಿಂದ ಹೇಮಾವತಿ ನದಿ ಮೈದುಂಬಿ ಹರಿಯುತ್ತಿದೆ. ಗೊರೂರು ಜಲಾಶಯದಿಂದ ನದಿಯ ಕೆಳಭಾಗಕ್ಕೆ ನೀರು ಬಿಟ್ಟಿರುವುದರಿಂದ ಕಿಕ್ಕೇರಿ ಹೋಬಳಿಯ ಗೊಂದಿಹಳ್ಳಿ ಬಳಿ ತಾಲೂಕಿಗೆ ಪ್ರವೇಶಿಸುವ ಹೇಮಾವತಿ ನದಿ ಅಕ್ಕಿಹೆಬ್ಬಾಳು ಹೋಬಳಿಯ ಅಂಬಿಗರಹಳ್ಳಿಯ ತ್ರೀವೇಣಿ ಸಂಗಮದ ಬಳಿ ಕಾವೇರಿಯಲ್ಲಿ ಲೀನವಾಗುತ್ತದೆ.

ನದಿಯ ಇಕ್ಕೆಲೆಗಳಲ್ಲಿ ಬೆಳೆದು ನಿಂತಿರುವ ತೆಂಗು ಮತ್ತು ಅಡಿಕೆ ತೋಟಗಳಿಗೆ ನೀರು ನುಗ್ಗಿದೆ. ನೀರಿನ ಪ್ರಮಾಣದಲ್ಲಿ ಮತ್ತಷ್ಟು ಹೆಚ್ಚಳವಾದರೆ ಹೇಮೆ ಅಪಾಯದ ಮಟ್ಟ ಮೀರಲಿದ್ದಾಳೆ. ಮಂದಗೆರೆ ಮತ್ತು ಹೇಮಗಿರಿಯ ಬಳಿ ಮೈಸೂರು ಅರಸರ ಕಾಲದಲ್ಲಿ ನಿರ್ಮಿಸಿ ತಾಲೂಕಿನ ಸಾವಿರಾರು ಎಕರೆಗಳಿಗೆ ನೀರುಣಿಸುತ್ತಿರುವ ಮಂದಗೆರೆ ಮತ್ತು ಹೇಮಗಿರಿ ನದಿ ಅಣೆಕಟ್ಟೆಗಳು ನೋಡುಗರ ಕಣ್ಮನ ಸೆಳೆಯುತ್ತಿವೆ.

ಪಟ್ಟಣ ಸಮೀಪದ ಹೇಮಗಿರಿ ಅಣೆಕಟ್ಟೆಯ ಬಳಿ ರಭಸವಾಗಿ ಹರಿಯುತ್ತಿರುವ ನದಿಯನ್ನು ವೀಕ್ಷಿಸಲು ನೂರಾರು ಜನ ಹೋಗುತ್ತಿದ್ದಾರೆ. ನದಿ ನೀರಿನ ಹೆಚ್ಚಳದಿಂದ ಹೇಮಗಿರಿ ಬೆಟ್ಟದ ತಪ್ಪಲಿನಲ್ಲಿ ಹೇಮಾವತಿ ನದಿಗೆ ನಿರ್ಮಿಸಿರುವ ಸೋಪಾನಕಟ್ಟೆಯ ಮೊದಲ ಮೆಟ್ಟಿಲಿನವೆರೆಗೂ ನೀರು ಬಂದಿದೆ. ಮೈದುಂಬಿ ಹರಿಯುತ್ತಿರುವ ಹೇಮಾವತಿ ನದಿ ದೃಶ್ಯ ಮನಮೋಹಕವಾಗಿದೆ.

ಜೂನ್ ತಿಂಗಳ ಅಂತ್ಯದಲ್ಲಿಯೇ ಹೇಮಾವತಿ ಜಲಾಶಯ ತುಂಬಿದ್ದು, ಹೇಮಾವತಿ ಕೆ.ಆರ್.ಎಸ್ ಕಡೆಗೆ ಮೈದುಂಬಿ ಹರಿಯುತ್ತಿರುವುದು ರೈತರಲ್ಲಿ ಸಂತಸದ ನಗೆ ಮೂಡಿಸಿದೆ. ಕಳೆದ ಬೇಸಿಗೆಯಲ್ಲಿ ಹೇಮಾವತಿ ಜಲಾಶಯದಲ್ಲಿದ್ದರೂ ತಾಲೂಕಿನ ರೈತರಿಗೆ ಹೇಮೆ ಗಗನ ಕುಸುಮವಾಗಿದ್ದಳು. ಪ್ರಸಕ್ತ ಸಾಲಿನಲ್ಲಾದರೂ ಸಕಾಲಕ್ಕೆ ರೈತರ ಹೊಲಗದ್ದೆಗಳಿಗೆ ಹೇಮೆ ಹರಿಯುವ ನಿರೀಕ್ಷೆಯಲ್ಲಿ ತಾಲೂಕಿನ ರೈತ ಸಮುದಾಯ ಇದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ಅಕ್ರಮ ಮನೆಗಳ ತೆರವು ಎನ್‌ಐಎ ತನಿಖೆಗೆ ನೀಡಲು ಆಗ್ರಹ
ಒಳ್ಳೆ ರಿಸಲ್ಟ್‌ಗಾಗಿ ಶಿಕ್ಷಕರಿಂದ್ಲೇಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆ ಲೀಕ್