ಬೆಂಬಲ ಬೆಲೆಯಡಿ 20 ಕ್ವಿಂಟಲ್ ಜೋಳ ಖರೀದಿಗೆ ಆಗ್ರಹಿಸಿ ರೈತ ಸಂಘ ಪ್ರತಿಭಟನೆ

KannadaprabhaNewsNetwork | Published : Dec 31, 2024 1:00 AM

ಸಾರಾಂಶ

ಬಳ್ಳಾರಿ ಜಿಲ್ಲೆಯಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಜೋಳವನ್ನು ಬೆಳೆದಿದ್ದಾರೆ.

ಬಳ್ಳಾರಿ: ಬೆಂಬಲ ಬೆಲೆ ಅಡಿಯಲ್ಲಿ ಪ್ರತಿ ಎಕರೆಗೆ 20 ಕ್ವಿಂಟಲ್‌ ಜೋಳ ಖರೀದಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ಸದಸ್ಯರು ನಗರದಲ್ಲಿ ಪ್ರತಿಭಟನೆ ನಡೆಸಿದರು.ರಾಜ್ಯ ಸರ್ಕಾರ ಬೆಂಬಲ ಬೆಲೆಯಡಿ ಪ್ರತಿ ರೈತನಿಂದ ಎಕರೆಗೆ 10 ಕ್ವಿಂಟಲ್‌ ಮಾತ್ರ ಖರೀದಿಗೆ ಮಿತಿಗೊಳಿಸಿದೆ. ಬಳ್ಳಾರಿ ಜಿಲ್ಲೆಯಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಜೋಳವನ್ನು ಬೆಳೆದಿದ್ದಾರೆ. ಹೀಗಾಗಿ ಸರ್ಕಾರದ ನಿಯಮ ಸಡಿಲಗೊಳಿಸಿ ಎಕರೆಗೆ 20 ಕ್ವಿಂಟಲ್ ಗಳಂತೆ ಖರೀದಿಗೆ ಮುಂದಾಗಬೇಕು. ಈ ಮೂಲಕ ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಮುಂದಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈಗಾಗಲೆ ಜೋಳ ಕಟಾವು ಆರಂಭವಾಗಿದೆ. ಸರ್ಕಾರ ಕೂಡಲೇ ಬೆಂಬಲ ಬೆಲೆಯಡಿ ಪ್ರತಿ ರೈತನಿಂದ ಪ್ರತಿ ಎಕರೆಗೆ 20 ಕ್ವಿಂಟಲ್‌ನಂತೆ ಮಾರಾಟ ಮಾಡಲು ಆದೇಶ ಮಾಡಿದಲ್ಲಿ ಖಾಸಗಿ ದಲ್ಲಾಳಿಗಳಿಗೆ ಕಡಿಮೆ ದರಕ್ಕೆ ಮಾರಾಟ ಮಾಡಿ ರೈತನು ನಷ್ಟಕ್ಕೆ ಒಳಗಾಗದಂತೆ ತಡೆಯಬಹುದಾಗಿದೆ. ಹೀಗಾಗಿ ಸರ್ಕಾರ ವಿಳಂಬ ಮಾಡದೇ ರೈತರ ಪರ ಕಾಳಜಿ ಮೆರೆಯಬೇಕು. ತಕ್ಷಣವೇ ಖರೀದಿ ಮಾಡುವ ಮಾನದಂಡವನು ಪರಿಷ್ಕರಿಸಿ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಮಾತನಾಡಿದ ರೈತ ಸಂಘದ ಅಧ್ಯಕ್ಷ ಮಾಧವರೆಡ್ಡಿ ಕರೂರು, ಪಕ್ಕದ ರಾಯಚೂರು ಜಿಲ್ಲೆಯ ಆಯಾ ತಾಲೂಕು ಹೋಬಳಿ ಮಟ್ಟದಲ್ಲಿ ನೊಂದಣಿಯಾದಂತಹ ಎಲ್ಲಾ ಸಹಕಾರಿ ಸಂಘಗಳಲ್ಲಿ ರೈತರು ತಮ್ಮ ದವಸ ಧಾನ್ಯಗಳನ್ನು ಬೆಂಬಲ ಬೆಲೆಯಡಿ ಮಾರಾಟಕ್ಕೆ ನೋಂದಣಿ ಮಾಡಲು 29 ಕೇಂದ್ರಗಳನ್ನು ತೆರೆದಿದೆ. ಆದರೆ, ಬಳ್ಳಾರಿ ಜಿಲ್ಲಾಡಳಿತ ಇಡೀ ಜಿಲ್ಲೆಗೆ 8 ಕೇಂದ್ರಗಳನ್ನು ತೆರೆದಿದ್ದು ಇದರಿಂದ ನೋಂದಣಿ ಕೇಂದ್ರಗಳಲ್ಲಿ ಜನದಟ್ಟಣೆ ಹೆಚ್ಚಾಗುತ್ತಿದೆ. ಆನ್‌ಲೈನ್ ತಾಂತ್ರಿಕ ತಂತ್ರಾಶದ ತೊಡಕು ಸಮಸ್ಯೆಗಳು ಉದ್ಭವಿಸಿವೆ. ಇದರಿಂದ ರೈತರು ಪರದಾಡುವಂತಾಗಿದೆ. ಹೀಗಾಗಿ ಜಿಲ್ಲಾಡಳಿತ ಪಕ್ಕದ ರಾಯಚೂರು ಜಿಲ್ಲೆಯಂತೆಯೇ ಹೆಚ್ಚಿನ ನೋಂದಣಿ ಕೇಂದ್ರಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದರು.

ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮುಖ್ಯಮಂತ್ರಿಗೆ ಬರೆದ ಮನವಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು. ಅಪರ ಜಿಲ್ಲಾಧಿಕಾರಿ ಮನವಿ ಸ್ವೀಕರಿಸಿದರು. ರೈತ ಸಂಘದ ಹಿರಿಯ ಮುಖಂಡ ಬೈಲೂರು ಲಕ್ಷ್ಮಿಕಾಂತ ರೆಡ್ಡಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಸಂಘಟನೆಯ ಜಿಲ್ಲಾ ಹಾಗೂ ತಾಲೂಕು ಸಮಿತಿಯ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬೆಂಬಲ ಬೆಲೆ ಅಡಿಯಲ್ಲಿ ಪ್ರತಿ ಎಕರೆಗೆ 20 ಕ್ವಿಂಟಲ್‌ ಜೋಳ ಖರೀದಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ಸದಸ್ಯರು ಬಳ್ಳಾರಿಯಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

Share this article