ಪುನರ್ವಸತಿಗೆ ಆಗ್ರಹಿಸಿ ರೈತ ಸಂಘದ ಪ್ರತಿಭಟನೆ

KannadaprabhaNewsNetwork |  
Published : Apr 12, 2026, 01:45 AM IST
11ಎಚ್ಎಸ್ಎನ್7 :  | Kannada Prabha

ಸಾರಾಂಶ

ನಿವೇಶನಗಳಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ದಶಕಗಳಿಂದ ವಾಸವಾಗಿದ್ದೇವೆ ಎಂದು ತಿಳಿಸಿದರು. ಆದರೆ ಇತ್ತೀಚೆಗೆ ಸ್ಥಳೀಯ ಜನಪ್ರತಿನಿಧಿಗಳ ಒತ್ತಡದ ಮೇರೆಗೆ ಯಾವುದೇ ಪೂರ್ವ ನೋಟಿಸ್ ನೀಡದೆ ಹಾಗೂ ಕಾನೂನು ಪ್ರಕ್ರಿಯೆ ಅನುಸರಿಸದೆ ಮನೆಗಳಿಗೆ ಹಾನಿ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದರು. ಕೆಲ ಮನೆಗಳ ಗೋಡೆಗಳನ್ನು ಕೆಡವಲಾಗಿದ್ದು, ಕೆಲವು ಮನೆಗಳನ್ನು ತೆರವುಗೊಳಿಸಲು ಯತ್ನಿಸಲಾಗಿದೆ. ಇದರಿಂದ ಕುಟುಂಬಗಳು ಆತಂಕದ ವಾತಾವರಣದಲ್ಲಿ ದಿನ ಕಳೆಯುವಂತಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಆಶ್ರಯ ಯೋಜನೆಯಡಿ ಹಕ್ಕುಪತ್ರ ಹೊಂದಿರುವ ಮನೆಗಳನ್ನು ಹಾನಿಗೊಳಿಸಿದ್ದು, ಸೂಕ್ತ ಪರಿಹಾರ ಹಾಗೂ ಪುನರ್ವಸತಿ ಒದಗಿಸುವಂತೆ ಆಗ್ರಹಿಸಿ, ದನಕರುಗಳಿಗೆ ಮೇವು ನೀಡಿ, ಸ್ಥಳದಲ್ಲಿ ಅಡುಗೆ ಸಿದ್ಧಪಡಿಸಿ ರೈತ ಸಂಘದ ಹೋರಾಟ ಮೂರನೇ ದಿನವು ಡಿಸಿ ಕಚೇರಿ ಆವರಣದಲ್ಲಿ ಮುಂದುವರೆಯಿತು.

ರೈತ ಸಂಘದ ಜಿಲ್ಲಾಧ್ಯಕ್ಷ ಬಾಬು ಮಾತನಾಡಿ, ಹಾಸನ ಜಿಲ್ಲೆಯ ಅರಕಲಗೂಡು ತಾಲೂಕು ಎಬಿಎಂ ಹಳ್ಳಿಯ ನಿವಾಸಿಗಳಿಗೆ 1991-92ರಲ್ಲಿ ತಹಸೀಲ್ದಾರ್ ಅವರಿಂದ ಆಶ್ರಯ ಯೋಜನೆ ಅಡಿಯಲ್ಲಿ ಕಾನೂನುಬದ್ಧವಾಗಿ ನಿವೇಶನ ಹಂಚಿಕೆ ಮಾಡಲಾಗಿತ್ತು ಎಂದು ವಿವರಿಸಿದರು. ಆ ನಿವೇಶನಗಳಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ದಶಕಗಳಿಂದ ವಾಸವಾಗಿದ್ದೇವೆ ಎಂದು ತಿಳಿಸಿದರು. ಆದರೆ ಇತ್ತೀಚೆಗೆ ಸ್ಥಳೀಯ ಜನಪ್ರತಿನಿಧಿಗಳ ಒತ್ತಡದ ಮೇರೆಗೆ ಯಾವುದೇ ಪೂರ್ವ ನೋಟಿಸ್ ನೀಡದೆ ಹಾಗೂ ಕಾನೂನು ಪ್ರಕ್ರಿಯೆ ಅನುಸರಿಸದೆ ಮನೆಗಳಿಗೆ ಹಾನಿ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದರು. ಕೆಲ ಮನೆಗಳ ಗೋಡೆಗಳನ್ನು ಕೆಡವಲಾಗಿದ್ದು, ಕೆಲವು ಮನೆಗಳನ್ನು ತೆರವುಗೊಳಿಸಲು ಯತ್ನಿಸಲಾಗಿದೆ. ಇದರಿಂದ ಕುಟುಂಬಗಳು ಆತಂಕದ ವಾತಾವರಣದಲ್ಲಿ ದಿನ ಕಳೆಯುವಂತಾಗಿದೆ ಎಂದರು.

ತಾಲೂಕು ಆಡಳಿತವು ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಮಣಿದು ಹಕ್ಕುಪತ್ರದಾರರ ಮೇಲೆ ಅನ್ಯಾಯ ಮಾಡುತ್ತಿದೆ. ಅತಿಕ್ರಮಣಕಾರರ ವಿರುದ್ಧ ಕ್ರಮ ಕೈಗೊಳ್ಳದೇ, ಅವರಿಗೆ ಸಹಕಾರ ನೀಡುತ್ತಿರುವುದು ಅಸಂವಿಧಾನಿಕ ನಡೆ ಎಂದು ಕಿಡಿಕಾರಿದರು. ಜಾಗದ ಸರಿಯಾದ ಅಳತೆ ಹಾಗೂ ಗುರುತುಪಡಿಸುವ ಕೆಲಸ ಮಾಡದೇ, ನಿಜವಾದ ಹಕ್ಕುದಾರರನ್ನು ತೊಂದರೆಗೊಳಿಸಲಾಗುತ್ತಿದೆ ಎಂದು ಆರೋಪಿಸಿದರು.ಈ ಘಟನೆ ನಮ್ಮ ಮೂಲಭೂತ ಹಕ್ಕುಗಳ ಮೇಲಿನ ಸ್ಪಷ್ಟ ಹಲ್ಲೆಯಾಗಿದ್ದು, ಬಡ ಕುಟುಂಬಗಳನ್ನು ಅನಾಥರನ್ನಾಗಿ ಮಾಡುವ ಪ್ರಯತ್ನವಾಗಿದೆ. ತಕ್ಷಣವೇ ಸರ್ಕಾರ ಹಾಗೂ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.ರೈತ ಸಂಘದ ಬೇಡಿಕೆಗಳು:ಮನೆಗಳ ಧ್ವಂಸ ಕಾರ್ಯವನ್ನು ತಕ್ಷಣ ನಿಲ್ಲಿಸಲು ಆದೇಶ ನೀಡಬೇಕು, ಈಗಾಗಲೇ ಹಾನಿಗೊಳಿಸಿದ ಮನೆಗಳಿಗೆ ಸಮರ್ಪಕ ಪರಿಹಾರ ನೀಡಬೇಕು, ತಪ್ಪಿತಸ್ಥ ಅಧಿಕಾರಿಗಳು ಮತ್ತು ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಹಕ್ಕುಪತ್ರದ ಆಧಾರದ ಮೇಲೆ ವಾಸಸ್ಥಳವನ್ನು ರಕ್ಷಣೆ ಮಾಡಬೇಕು ಹಾಗೂ ಯಾವುದೇ ಸಾರ್ವಜನಿಕ ಯೋಜನೆಗಾಗಿ ಜಾಗ ಬೇಕಾದಲ್ಲಿ ಕಾನೂನುಬದ್ಧ ಪರಿಹಾರ ಹಾಗೂ ಪುನರ್ವಸತಿ ಒದಗಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮೊಹಮ್ಮದ್ ಸಾದಿಕ್, ಮುಖಂಡರಾದ ಪವಿತ್ರ, ಅದರ ಅಕ್ಮಲ್ ಪಾಷಾ, ವಿಠಲ್ ಸೇರಿದಂತೆ ಹಲವಾರು ರೈತರು ಹಾಗೂ ಮಹಿಳೆಯರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀರಂಗಪಟ್ಟಣ: ಮಹಾತ್ಮ ಜ್ಯೋತಿಬಾ ಫುಲೆ ಜನ್ಮ ದಿನಾಚರಣೆ
ರಾಮಾನುಜಾಚಾರ್ಯರ ಜಯಂತಿ: ಏ.13 ರಿಂದ ಧಾರ್ಮಿಕ ಕಾರ್ಯಕ್ರಮ ಆರಂಭ