ಕಾರಟಗಿ: ಮುಂಗಾರು ಹಂಗಾಮಿನ ಭತ್ತದ ಬೆಳೆಗೆ ಎಂ.ಎಸ್. ಸ್ವಾಮಿನಾಥನ್ ಆಯೋಗದ ವರದಿಯಂತೆ ಬೆಂಬಲ ಬೆಲೆ ನಿಗದಿಪಡಿಸಿ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ಬಸ್ ನಿಲ್ದಾಣದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಸಂಘದ ಪದಾಧಿಕಾರಿಗಳು, ಕಂದಾಯ, ನೀರಾವರಿ ಹಾಗೂ ಪುರಸಭೆ, ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಸಭೆಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಶರಣಪ್ಪ ದೊಡ್ಡಮನಿ ಮಾತನಾಡಿ, ಸರ್ಕಾರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈಗಾಗಲೇ ಖರೀದಿ ಕೇಂದ್ರ ಆರಂಭಿಸಿದೆ. ಆದರೆ, ಪ್ರತಿ ಕ್ವಿಂಟಲ್‌ಗೆ ₹2300ಗಳ ವರೆಗೆ ಬೆಂಬಲ ಬೆಲೆ ನಿಗದಿಪಡಿಸಿದ್ದು ಅವೈಜ್ಞಾನಿಕವಾಗಿದೆ. ರೈತರು ಬೆಳೆ ಬೆಳೆಯಲು ಪ್ರತಿ ಎಕರೆಗೆ ರಸಗೊಬ್ಬರ, ಕ್ರಿಮಿನಾಶಕ, ಕಟಾವು, ಕಾರ್ಮಿಕರ ನಿರ್ವಹಣೆ ಸೇರಿ ಸುಮಾರು ₹35 ಸಾವಿರ ವರೆಗೆ ಖರ್ಚು ತಗಲುತ್ತದೆ. ಅಲ್ಲದೇ ಸಾಕಷ್ಟು ರೈತರು ಸಾಲ ಮಾಡಿ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ. ಸರ್ಕಾರದ ಅವೈಜ್ಞಾನಿಕ ಬೆಂಬಲ ಬೆಲೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆಯಂತಹ ದಾರಿ ಹಿಡಿಯುವ ಸಂಭವವಿದೆ. ಹೀಗಾಗಿ ಸರ್ಕಾರ ಕೂಡಲೇ ಎಲ್ಲೆಡೆ ಖರೀದಿ ಕೇಂದ್ರ ಆರಂಭಿಸಿ ಎಂ.ಎಸ್. ಸ್ವಾಮಿನಾಥನ್ ಆಯೋಗದ ವರದಿಯಂತೆ ಪ್ರತಿ ಕ್ವಿಂಟಲ್‌ಗೆ ಕನಿಷ್ಠ ₹3200ಗಳ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದರು.
ಸಂಘದ ಅಧ್ಯಕ್ಷ ನಾರಾಯಣ ಈಡಿಗೇರ್ ಮಾತನಾಡಿ, ಸಾಕಷ್ಟು ಸವಾಲುಗಳ ನಡುವೆ ರೈತರು ಭತ್ತ ಬೆಳೆಯುತ್ತಿದ್ದಾರೆ. ಬೆಲೆ ಏರಿಕೆ, ಕಾರ್ಮಿಕರ ಕೊರತೆ, ಅನಿರೀಕ್ಷಿತ ಮಳೆ ಸೇರಿದಂತೆ ನೂರಾರು ಸವಾಲುಗಳ ಮಧ್ಯೆಯೂ ರೈತರು ಹರಸಾಹಸ ಪಡುತ್ತಿದ್ದಾರೆ. ಇನ್ನು ತುಂಗಭದ್ರಾ ಜಲಾಶಯದ ಹೂಳಿನ ಸಮಸ್ಯೆ, ನವಲಿ ಸಮಾನಾಂತರ ಜಲಾಶಯ ನಿರ್ಮಾಣ ಸೇರಿದಂತೆ ಯಾವೊಂದು ಸಮಸ್ಯೆಗಳಿಗೂ ಕ್ರಿಯಾತ್ಮಕ ಪರಿಹಾರ ದೊರೆಯುತ್ತಿಲ್ಲ. ಕೂಡಲೇ ಸರ್ಕಾರ ರೈತರ ಹಿತಾಸಕ್ತಿಗೆ ಬದ್ಧವಾಗಿ ನಿರ್ಧಾರ ಕೈಗೊಂಡು ಕಾರ್ಯರೂಪಗೊಳಿಸಬೇಕು ಎಂದು ಹೇಳಿದರು.ರೈತ ಸುರೇಶ ಚಳ್ಳೂರು ಮಾತನಾಡಿ, ಕಳೆದ ಬಾರಿ ಸುರಿದ ಆಲಿಕಲ್ಲು ಮಳೆಗೆ ಸಾಕಷ್ಟು ಭತ್ತ ನಷ್ಟವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಆದರೆ, ಅದಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಪರಿಹಾರ ಕೊಟ್ಟಿದೆ. ರಾಜ್ಯ ಸರ್ಕಾರದವರು ಕೂಡಾ ಅವರ ಪಾಲಿನ ಪರಿಹಾರಧನ ನೀಡಿ ರೈತರ ರಕ್ಷಣೆಗೆ ಧಾವಿಸಬೇಕು ಎಂದರು.
ಆನಂತರ ಉಪ ತಹಸಿಲ್ದಾರ್ ಜಗದೀಶಕುಮಾರ್, ಪುರಸಭೆ ವ್ಯವಸ್ಥಾಪಕ ಪರಮೇಶ್ವರಪ್ಪ, ನೀರಾವರಿ ಇಲಾಖೆಯ ಎಇಇ ವೆಂಕಟೇಶ್ವರ, ಪಿಎಸ್ಐ ಕಾಮಣ್ಣ ನಾಯ್ಕ, ಜೆಸ್ಕಾಂನ ಖಾದರಬಾಷಾ, ರಾಜು ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ರೈತ ಸಂಘದ ಜಿಲ್ಲಾಧ್ಯಕ್ಷ ಹನುಮಂತಪ್ಪ ನಾಯಕ, ಪದಾಧಿಕಾರಿಗಳಾದ ರಮೇಶ್ ಭಂಗಿ, ನಾಗಭೂಷಣ ಸಜ್ಜನ್, ಬಾಷಾಸಾಬ್, ಸುರೇಶ ಮೇಟಿ, ಅಯ್ಯಪ್ಪ ಸುದ್ದಿ, ಭೀಮಣ್ಣ ಪನ್ನಾಪುರ, ಸಣ್ಣ ರಾಮಣ್ಣ, ಶರಣಪ್ಪ ಕುರಿ, ಪರಶುರಾಮ ದಾರಿಮನಿ, ಹನುಮಂತ ದಲಾಲಿ, ಹನುಮಂತರೆಡ್ಡಿ, ಪರಸಪ್ಪ ಮಡಿವಾಳ, ಲಕ್ಷ್ಮಣ ಡಂಕನಕಲ್, ಹುಸೇನಸಾಬ್, ಮಹೇಶ್ ಮೇಟಿ ಚಳ್ಳೂರು, ಸಿದ್ದರಾಮ ರ್ಯಾವಳದ್, ಬಸವರಾಜ ನಾಯಕ, ಹೇಮರೆಡ್ಡೆಪ್ಪ ಪನ್ನಾಪುರ ಇತರರಿದ್ದರು.