ಮೌನಾನುಷ್ಠಾನದಲ್ಲಿ ಕೊಪ್ಪಳ ಗವಿಮಠದ ಶ್ರೀ

KannadaprabhaNewsNetwork |  
Published : Oct 14, 2025, 01:02 AM IST
ಗವಿಮಠದ ಶ್ರೀ | Kannada Prabha

ಸಾರಾಂಶ

ಕೊಪ್ಪಳದ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಕಳೆದ ಮೂರು ವಾರಗಳಿಂದ ಮೌನಾನುಷ್ಠಾನದಲ್ಲಿದ್ದಾರೆ. ಸೋಮವಾರ ಮಾತ್ರ ಭಕ್ತರಿಗೆ ದರ್ಶನ ನೀಡುತ್ತಿದ್ದಾರೆ!

ಸೋಮರಡ್ಡಿ ಅಳವಂಡಿ

ಕೊಪ್ಪಳ: ಇಲ್ಲಿನ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಕಳೆದ ಮೂರು ವಾರಗಳಿಂದ ಮೌನಾನುಷ್ಠಾನದಲ್ಲಿದ್ದಾರೆ. ಸೋಮವಾರ ಮಾತ್ರ ಭಕ್ತರಿಗೆ ದರ್ಶನ ನೀಡುತ್ತಿದ್ದಾರೆ!

ಬಿಎಸ್‌ಪಿಎಲ್ ಕಾರ್ಖಾನೆಯ ವಿರುದ್ಧ ಹೋರಾಟದಲ್ಲಿ ಪಾಲ್ಗೊಂಡ ಬಳಿಕ ಹೆಚ್ಚು ಮೌನದಲ್ಲಿರಲು ಪ್ರಾರಂಭಿಸಿದ ಶ್ರೀಗಳು ಈಗೀಗಂತೂ ವಾರದ ಆರು ದಿನಗಳ ಕಾಲ ಮೌನಾನುಷ್ಠಾನದಲ್ಲಿಯೇ ಗುಹೆಯಲ್ಲಿ ಕಳೆಯುತ್ತಾರೆ.

ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ ಕೆಲವೇ ದಿನಗಳಲ್ಲಿ ಪ್ರವಚನ ಕಾರ್ಯಕ್ರಮ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಅಧ್ಯಯನದಲ್ಲಿ ತೊಡಗಿದ್ದಾರೆ. ಹೀಗಾಗಿಯೇ ಮೌನದಲ್ಲಿಯೇ ಇರುತ್ತಾರೆ ಎಂದು ಹೇಳಲಾಗುತ್ತದೆ. ಶ್ರೀಗಳು ಪಟ್ಟಾಭಿಷೇಕವಾದ ಕೆಲವು ವರ್ಷಗಳಲ್ಲಿ ಶ್ರಾವಣ ಮಾಸದಲ್ಲಿ ಮಾತ್ರ ಒಂದು ತಿಂಗಳ ಕಾಲ ಮೌನಾನುಷ್ಠಾನ ಮಾಡುತ್ತಿದ್ದರು. ಅದಾದ ನಂತರ ಇಷ್ಟು ಸುದೀರ್ಘ ಮೌನಕ್ಕೆ ಹೋಗುತ್ತಿರಲಿಲ್ಲ. ಆದರೆ, ಕಳೆದ ಆರು ತಿಂಗಳಿಂದ ಆಗಾಗ ಮೌನಾನುಷ್ಠಾನ ಮಾಡುತ್ತಿದ್ದಾರೆ. ಕಳೆದ ಮೂರು ವಾರ ಶ್ರೀಗಳು ಸೋಮವಾರ ಮಾತ್ರ ಭಕ್ತರಿಗೆ ದರ್ಶನ ನೀಡುತ್ತಿದ್ದಾರೆ.

ಇತ್ಯರ್ಥವಾಗದ ಸಮಸ್ಯೆ: ಕೊಪ್ಪಳ ಬಳಿ ಬಿಎಸ್‌ಪಿಎಲ್ ಕಾರ್ಖಾನೆ ಸ್ಥಾಪಿಸುವುದನ್ನು ವಿರೋಧಿಸಿ ಶ್ರೀಗಳ ನೇತೃತ್ವದಲ್ಲಿ ಹೋರಾಟ ನಡೆದಿತ್ತು. ಹೋರಾಟದ ವೇಳೆಯಲ್ಲಿ ಮಾತನಾಡಿದ್ದ ಶ್ರೀಗಳು ಶಾಸಕರು, ಸಚಿವರು ಸೇರಿದಂತೆ ಜನಪ್ರತಿನಿಧಿಗಳಿಗೆ ಜವಾಬ್ದಾರಿಯನ್ನು ನೀಡಿ, ಈ ಕಾರ್ಖಾನೆ ಸ್ಥಾಪನೆ ರದ್ದು ಮಾಡಿ, ಸರ್ಕಾರದಿಂದ ಆದೇಶವನ್ನು ತನ್ನಿ ಎನ್ನುವ ಕಟ್ಟಪ್ಪಣೆ ಮಾಡಿದ್ದರು. ಇದಾದ ಮೇಲೆಯೂ ಜನಪ್ರತಿನಿಧಿಗಳು ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಮನವರಿಕೆ ಮಾಡಿಕೊಟ್ಟಿದ್ದರು. ಪರಿಣಾಮ ಕಾರ್ಖಾನೆ ಸ್ಥಾಪಿಸುವುದಕ್ಕೆ ಬ್ರೇಕ್ ಹಾಕಲಾಯಿತು.

ಅದಾದ ಮೇಲೆ ಮತ್ತೆ ಯಾವುದೇ ಬೆಳವಣಿಗೆಯೂ ಆಗಿಲ್ಲ. ಈ ಕುರಿತು ಶ್ರೀಗಳು ಸಹ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಈ ಬೆಳವಣಿಗೆಯ ನಂತರ ಮೌನಾನುಷ್ಠಾನ ಮಾಡುವುದು ಹೆಚ್ಚಾಗಿದೆ. ಈ ಕುರಿತು ಭಕ್ತರು ಗವಿಸಿದ್ದೇಶ್ವರ ಶ್ರೀಗಳು ಮನನೊಂದುಕೊಂಡಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿಯೂ ಚರ್ಚೆ ಮಾಡಿದರು. ಇದ್ಯಾವುದಕ್ಕೂ ಅವರು ಪ್ರತಿಕ್ರಿಯೆ ನೀಡಿಲ್ಲ.

ಮೌನಾನುಷ್ಠಾನ ಪರಂಪರೆ: 17ನೇ ಪೀಠಾಧಿಪತಿಗಳಾಗಿದ್ದ ಲಿಂ. ಶ್ರೀ ಶಿವಶಾಂತವೀರ ಮಹಾಸ್ವಾಮೀಜಿಗಳು ಮೌನಾನುಷ್ಠಾನದ ಪರಿಕಲ್ಪನೆ ಹಾಕಿಕೊಂಡು, ಅನುಸರಿಸುತ್ತಾ ಬಂದಿದ್ದಾರೆ. ಪ್ರತಿ ಮಂಗಳವಾರ ಅನುಷ್ಠಾನ ಮಾಡುವ ಸಂಪ್ರದಾಯ ಬೆಳೆದುಬಂದಿತು. ಅದನ್ನು ಈಗಿನ ಗವಿಸಿದ್ಧೇಶ್ವರ ಶ್ರೀಗಳು ಚಾಚೂತಪ್ಪದೇ ಪಾಲಿಸುತ್ತಿದ್ದಾರೆ. ಮಂಗಳವಾರ ತೀರಾ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಮೌನ ಮುರಿಯುತ್ತಿದ್ದರು. ಆದರೆ, ಈಗ ಕಳೆದ ಆರು ತಿಂಗಳಿಂದ ಪದೇ ಪದೇ ಮೌನಾನುಷ್ಠಾನ ಮಾಡುತ್ತಿದ್ದಾರೆ.

PREV

Recommended Stories

ದೀಪಾವಳಿ ಹಬ್ಬ : ಕೆಎಸ್ಸಾರ್ಟಿಸಿಯಿಂದ 2500 ಹೆಚ್ಚುವರಿ ಬಸ್‌
ಆರೆಸ್ಸೆಸ್‌ ಚಟುವಟಿಕೆ ನಿಷೇಧ ಬಗ್ಗೆ ತಮಿಳುನಾಡು ಮಾದರಿ ಪರಿಶೀಲನೆ : ಸಿದ್ದರಾಮಯ್ಯ