ಲಸಿಕೆಯಿಂದ ಯಾವುದೇ ಮಗು ವಂಚಿತವಾಗದಂತೆ ಎಚ್ಚರ ವಹಿಸಿ: ಡಾ. ಸುರೇಶ ಇಟ್ನಾಳ

KannadaprabhaNewsNetwork |  
Published : Oct 14, 2025, 01:02 AM IST
13ಕೆಪಿಎಲ್23 ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಜಿಲ್ಲಾ ಮಟ್ಟದ ಜಾಗೃತಿ ಸಮಿತಿ ಸಭೆ | Kannada Prabha

ಸಾರಾಂಶ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಜಿಲ್ಲಾ ಮಟ್ಟದ ಜಾಗೃತಿ ಸಮಿತಿ ಸಭೆ ಸೋಮವಾರ ನಡೆಯಿತು.

ಕೊಪ್ಪಳ: ಮಗುವಿನ ಆರೋಗ್ಯದ ಬಗ್ಗೆ ಅತಿ ಹೆಚ್ಚಿನ ಕಾಳಜಿ ವಹಿಸಲು ಮತ್ತು ನಿಗದಿತ ಸಮಯಕ್ಕೆ ಲಸಿಕೆ ಹಾಕುವಂತೆ ಸ್ಥಳೀಯವಾಗಿ ಕಾರ್ಯನಿರ್ವಹಿಸುವ ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತರು ಸೂಕ್ತ ಸಮಯದಲ್ಲಿ ತಿಳಿವಳಿಕೆ ಮೂಡಿಸಲು ಅಗತ್ಯ ಕ್ರಮಕೈಗೊಳ್ಳಬೇಕು. ಲಸಿಕೆಯಿಂದ ಯಾವುದೇ ಮಗು ವಂಚಿತವಾಗದಂತೆ ಎಚ್ಚರ ವಹಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಸೂಚನೆ ನೀಡಿದರು.

ಸೋಮವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಜಿಲ್ಲಾ ಮಟ್ಟದ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಗು ಜನಿಸಿದ 24 ಗಂಟೆಯೊಳಗೆ ಹಾಕಬೇಕಾದ ಕಡ್ಡಾಯ ಲಸಿಕೆಗಳು, ಮಗುವಿನ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಹಾಕಬೇಕಾದ ಲಸಿಕೆಗಳು, ಲಸಿಕೆಯಿಂದ ಮಗುವಿಗೆ ಆಗುವ ಆರೋಗ್ಯ ಪ್ರಯೋಜನಗಳು, ಲಸಿಕೆ ಹಾಕಿಸದೇ ಇರುವುದರಿಂದ ಆಗುವ ತೊಂದರೆಗಳು ಸೇರಿದಂತೆ ನಾನಾ ವಿಷಯಗಳ ಬಗ್ಗೆ ಪ್ರತಿಯೊಬ್ಬ ತಾಯಂದಿರಿಗೆ ಗೊತ್ತಿರಬೇಕು. ಹಾಗಾಗಿ ಸಂಬಂಧಿಸಿದ ಅಧಿಕಾರಿಗಳು ಅವರಿಗೆ ತಿಳಿವಳಿಕೆ ಮೂಡಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಅವರು ಹೇಳಿದರು.

ಹಾವು ಕಡಿತದ ಬಗ್ಗೆಯೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು. ಹಾವು ಕಚ್ಚಿದ 30 ನಿಮಿಷಗಳ ಒಳಗಾಗಿ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯಲು ತಿಳಿವಳಿಕೆ ನೀಡುವಂತೆ ತಿಳಿಸಿದರು.

ಜಿಲ್ಲೆಯಲ್ಲಿನ ತಾಯಿ-ಮಗು ಮರಣ ಸಂಖ್ಯೆಯನ್ನು ತಗ್ಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಹಾಗೂ ಮಾರ್ಚ್ ಅಂತ್ಯದವರೆಗೂ ಯಾವುದೇ ತಾಯಿ-ಮಗು ಮರಣ ಪ್ರಕರಣ ದಾಖಲಾಗದಂತೆ ಕ್ರಮ ವಹಿಸಿ. ನಿಮ್ಮ ಕರ್ತವ್ಯದಲ್ಲಿ ಪ್ರಾಮಾಣಿಕತೆ ಇರಲಿ, ಬೇಜವಾಬ್ದಾರಿ ತೋರದಿರಿ ಎಂದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ಮಾತನಾಡಿ, ಅರ್ಹವಿರುವ ಪ್ರತಿಯೊಬ್ಬ ಮಗುವಿಗೂ ಲಸಿಕೆ ಹಾಕಿಸಲು ಕ್ರಮಕೈಗೊಳ್ಳಬೇಕು. ಈ ಕಾರ್ಯಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯವರು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಲಿಂಗರಾಜು ಟಿ., ಎಸ್‌ಎಂಒ ಡಾ. ಶ್ರೀಧರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಸೋಮಶೇಖರಗೌಡ ಪಾಟೀಲ್, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ರವೀಂದ್ರನಾಥ ಎಂ.ಎಚ್., ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಂದಕುಮಾರ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಕುಮಾರಸ್ವಾಮಿ ಗೋನಾಳ, ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಶಶಿಧರ, ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ. ಪ್ರಕಾಶ ಎಚ್., ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ವೆಂಕಟೇಶ, ಕಿಮ್ಸ್ ಸ್ತ್ರೀ ರೋಗ ತಜ್ಞರಾದ ಡಾ. ಧನಕ್ಷ್ಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ. ಶೆಟ್ಟೆಪ್ಪನವರ್, ಗಂಗಾವತಿ ಸ್ತ್ರೀರೋಗ ತಜ್ಞರಾದ ಡಾ. ಈಶ್ವರ ಸವಡಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿಮ್ಮ ಮೇಲೆಲ್ಲ ಕೇಸ್‌ ಹಾಕ್ತೀನಿ : ಡಿಕೆ ಸಿಡಿಮಿಡಿ ! - ಪತ್ರಕರ್ತರಿಗೆ ಡಿಸಿಎಂ ಕೈಮುಗಿದಿದ್ದು ಏಕೆ ?
ಎಂದಿಗೂ ಬೆನ್ನಿಗೆ ಚೂರಿ ಹಾಕಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್‌