ಕೊಪ್ಪಳ: ದೇಶದಾದ್ಯಂತ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು ಮತ್ತು ಅರ್ಹ ಪದವಿಯನ್ನು ಪಡೆದವರಿಗೆ ಸರ್ಕಾರ ಸೂಕ್ತ ಉದ್ಯೋಗ ನೀಡುವಂತೆ ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳು ಕೊಪ್ಪಳ ನಗರದ ಅಶೋಕ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರಧಾನಮಂತ್ರಿ ಅವರ ಹೆಸರಿಗೆ ಬರೆದಿರುವ ಮನವಿ ಪತ್ರವನ್ನು ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸಲಾಯಿತು.ರಾಜ್ಯದಲ್ಲಿ 43 ಇಲಾಖೆಗಳಲ್ಲಿನ 2.84 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿಯಾಗಿದ್ದು, ಕಳೆದ ನಾಲ್ಕು-ಐದು ವರ್ಷಗಳಿಂದ ನೇಮಕಾತಿ ನಡೆದಿಲ್ಲ. ಸಾವಿರಾರು ಯುವಕರು ವಯೋಮಿತಿ ಮೀರಿದ್ದಾರೆ. ಅರ್ಹ ಪದವಿ ಪಡೆದಿದ್ದರೂ ಅವಕಾಶವೇ ಸಿಗದೆ ವಯೋಮಿತಿ ಮೀರುತ್ತಿರುವುದು ಕಳವಳಕಾರಿ ಸಂಗತಿ. ಸರ್ಕಾರ ಹಾಗಾದರೆ ಶಿಕ್ಷಣ ಸಂಸ್ಥೆಗಳನ್ನು ಯಾಕೆ ತೆರೆಯಬೇಕು? ವಿದ್ಯಾರ್ಥಿಗಳಿಗೆ ಯಾಕೆ ಶಿಕ್ಷಣ ನೀಡಬೇಕು? ಪಡೆದಿರುವ ಶಿಕ್ಷಣ ಸದ್ವಿನಿಯೋಗವಾಗಬೇಕು ಎನ್ನುವುದಾದರೆ ಸರ್ಕಾರ ಪ್ರತಿ ವರ್ಷ ನೇಮಕಾತಿ ಮಾಡಿಕೊಳ್ಳಬೇಕು. ಆಗ ಅರ್ಹರು ನೇಮಕವಾಗುತ್ತಾರೆ. ಅವರು ಜೀವನ ರೂಪಿಸಿಕೊಳ್ಳುತ್ತಾರೆ. ಈಗ ಉದ್ಯೋಗವೂ ಸಿಗದೆ, ಬೇರೆ ಕೆಲಸವನ್ನು ಮಾಡದೆ ಕಾಯುತ್ತಾ ಕುಳಿತುಕೊಳ್ಳುವ ಮೂಲಕ ಯುವಶಕ್ತಿಯೇ ಹಾಳಾಗುತ್ತಿದೆ. ಈ ಬಗ್ಗೆ ಯಾರೂ ಚಿಂತನೆ ಮಾಡುತ್ತಿಲ್ಲ ಎಂದು ಕೆಂಡಕಾರಿದ್ದಾರೆ.
ಕೋವಿಡ್ ನೆಪದಲ್ಲಿ ನೇಮಕಾತಿ ಪ್ರಕ್ರಿಯೆ ನಿಲ್ಲಿಸಿ, ಈಗ ಒಳ ಮೀಸಲಾತಿ ಹೆಸರಿನಲ್ಲಿ ನೇಮಕಾತಿ ವಿಳಂಬ ಮಾಡುತ್ತಿರುವ ಸರ್ಕಾರದ ನಿರ್ಲಕ್ಷ್ಯ ಖಂಡಿಸಿದ್ದಾರೆ.ರಾಜ್ಯದ ಶಾಲೆಗಳಲ್ಲಿ 59,454 ಶಿಕ್ಷಕರ ಹುದ್ದೆಗಳು ಖಾಲಿ ಇರುವುದು ಹಾಗೂ ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಮಾತ್ರವೇ 21,381 ಹುದ್ದೆಗಳು ಖಾಲಿ ಬಿದ್ದಿರುವುದರಿಂದ ಶಿಕ್ಷಣ ಹಾಗೂ ಆಡಳಿತ ವ್ಯವಸ್ಥೆಗೆ ಕನ್ನಡಿ ಎಂದು ಸಮಿತಿ ಹೇಳಿದೆ.
ಸಮಿತಿ ಸರ್ಕಾರಕ್ಕೆ ಆರು ಬೇಡಿಕೆಗಳನ್ನು ಮುಂದಿಟ್ಟಿದ್ದು, ಖಾಲಿ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡುವುದು, ನೇಮಕಾತಿಯಲ್ಲಿ ಪಾರದರ್ಶಕತೆ ತರಬೇಕು, ಅರ್ಹತಾ ವಯೋಮಿತಿಯಲ್ಲಿ ಐದು ವರ್ಷ ಸಡಿಲಿಕೆ ನೀಡಬೇಕು, ಗುತ್ತಿಗೆ ಪದ್ಧತಿ ರದ್ದುಪಡಿಸಬೇಕು ಹಾಗೂ ಕೆಇಎ ನೋಟಿಫಿಕೇಶನ್‌ನ ದುಬಾರಿ ಅರ್ಜಿ ಶುಲ್ಕ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.ಶರಣು ಪಾಟೀಲ್, ಸುಭಾನು, ಕಾಸೀಂ, ಹೊನ್ನೂರ, ಯಲ್ಲಪ್ಪ, ನಾಗರಾಜ, ಬಸವರಾಜ, ಮಂಜುನಾಥ ಮೊದಲಾದವರು ಇದ್ದರು.