ರೈತ ಸಂಘದ ಹೋರಾಟ: ಗ್ರಾಮಗಳಿಗೆ ಬಸ್ ಸಂಚಾರ ಪ್ರಾರಂಭ

KannadaprabhaNewsNetwork | Published : Jan 14, 2024 1:31 AM

ಸಾರಾಂಶ

ಕರ್ನಾಟಕ ರಾಜ್ಯ ರೈತ ಸಂಘದ ಹೋರಾಟದ ಫಲವಾಗಿ ವಿವಿಧ ಗ್ರಾಮಗಳಿಗೆ ಬಸ್ ಸಂಚಾರ ಪ್ರಾರಂಭವಾಗಿದ್ದರಿಂದ ಗ್ರಾಮಸ್ಥರು ಪೂಜೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಕನ್ನಡಪ್ರಭ ವಾರ್ತೆ ಹನೂರು

ಕರ್ನಾಟಕ ರಾಜ್ಯ ರೈತ ಸಂಘದ ಹೋರಾಟದ ಫಲವಾಗಿ ವಿವಿಧ ಗ್ರಾಮಗಳಿಗೆ ಬಸ್ ಸಂಚಾರ ಪ್ರಾರಂಭವಾಗಿದ್ದರಿಂದ ಗ್ರಾಮಸ್ಥರು ಪೂಜೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಹನೂರು ತಾಲೂಕಿನ ಬಸಪ್ಪನ ದೊಡ್ಡಿ, ಗಂಗನದೊಡ್ಡಿ, ಚಕ್ಕಗುಡಿ ,ಮಂಚಾಪುರ ಮಾರ್ಗವಾಗಿ ಮೊದಲ ಬಾರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಸಂಚಾರ ಪ್ರಾರಂಭವಾಗಿದ್ದು, ಸ್ವಾತಂತ್ರ್ಯ ಬಂದು 76 ವರ್ಷಗಳು ಕಳೆದರೂ ಈ ಗ್ರಾಮಗಳಿಗೆ ಬಸ್ ಸಂಚಾರವಿಲ್ಲದ್ದರಿಂದ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ರಾಜ್ಯ ರೈತ ಸಂಘ ಪ್ರತಿಭಟನೆ ನಡೆಸಿತ್ತು. ಇದರ ಫಲವಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ವಿವಿಧ ಗ್ರಾಮಗಳಿಗೆ ಬಸ್ ಸಂಚಾರ ಪ್ರಾರಂಭಿಸಿರುವುದರಿಂದ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದು, ಮೊದಲ ಬಾರಿಗೆ ಗ್ರಾಮಕ್ಕೆ ಬಂದ ಬಸ್ಸಿಗೆ ತಳಿರು ತೋರಣ ಕಟ್ಟಿ ಪೂಜೆ ಸಲ್ಲಿಸಿ ಸಿಹಿ ಹಂಚಿ ರೈತ ಮುಖಂಡರು ಹಾಗೂ ನಾಗರಿಕರು ಹರ್ಷ ವ್ಯಕ್ತಪಡಿಸಿ ಮಾತನಾಡಿ, ಹನೂರು ಘಟಕದ ಅಧ್ಯಕ್ಷ ಅಮ್ಜದ್ ಖಾನ್ ಜ 3 ರಂದು ನಾಲಾ ರೋಡ್ ಗ್ರಾಮದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ವಿವಿಧ ಗ್ರಾಮಗಳಿಗೆ ಬಸ್ ಸೌಲಭ್ಯ ಕಲ್ಪಿಸುವಂತೆ ಸಾರಿಗೆ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಅದರಂತೆ ಇಂದು ನಿರಂತರವಾಗಿ ಹಲವಾರು ವರ್ಷಗಳಿಂದ ಬಹು ಬೇಡಿಕೆಯ ಸಾರಿಗೆ ಬಸ್‌ ಹಾಕಿರುವುದರಿಂದ ಇಲ್ಲಿನ ಹಿರಿಯ ನಾಗರಿಕರಿಗೆ ಹಾಗೂ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಮತ್ತು ಗ್ರಾಮಗಳ ನಾಗರಿಕರಿಗೆ ಹೋಗಿ ಬರಲು ಅನುಕೂಲವಾಗಿದೆ ಎಂದರು.ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಉಪಾಧ್ಯಕ್ಷ ಗೌಡೆಗೌಡ ಮಾತನಾಡಿ, ಹಲವಾರು ಬೇಡಿಕೆಗಳು ಇರುವುದರಿಂದ ಜಿಲ್ಲಾಧಿಕಾರಿಗಳು ಜಿಲ್ಲೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಕರೆದು ಪರಿಶೀಲನೆ ನಡೆಸಿ ಗ್ರಾಮಗಳ ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ನೀಡಲು ಪ್ರತ್ಯೇಕವಾಗಿ ಸಭೆ ಕರೆದು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.

Share this article