ಸಾಲಗಾರರ ಹಣ ಮರು ಪಾವತಿ ಮಾಡದೆ ಅವಮಾನ ಸಹಿಸಲಾಗುತ್ತಿಲ್ಲ. ಹೀಗಾಗಿ ಮನನೊಂದು ಪ್ರಾಣ ಬಿಡುತ್ತಿರುವುದಾಗಿ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಂಘ ಕಚೇರಿಯಲ್ಲಿ ಜಮೀನು ಖರೀದಿದಾರರಿಂದ ಬಾಕಿ ಹಣ ಕೊಟ್ಟಿಲ್ಲ ಎಂದು ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣು
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೋಡಿಹಳ್ಳಿ ಬಣದ ತಾಲೂಕು ಅಧ್ಯಕ್ಷ ಮರಳುಕುಂಟೆ ರಾಮಾಂಜಿನಪ್ಪ (75) ತಮ್ಮ ರೈತ ಸಂಘದ ಕಚೇರಿಯಲ್ಲೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.
ಸುಮಾರು ಐದಾರು ಲಕ್ಷ ಕೈ ಸಾಲವಿದ್ದು, ಅದನ್ನು ತೀರಿಸಲು ಜಮೀನು ಮಾರಿದ್ದರು. ಆದರೆ ತಮ್ಮ ಜಮೀನು ಖರೀದಿ ಮಾಡಿದ್ದ ಮಾಲೀಕ ಸುಮಾರು ಒಂದು ವರ್ಷವಾಗುತಿದ್ದರೂ ಬಾಕಿ ಹಣ ನೀಡಿಲ್ಲ. ಸಾಲಗಾರರ ಹಣ ಮರು ಪಾವತಿ ಮಾಡದೆ ಅವಮಾನ ಸಹಿಸಲಾಗುತ್ತಿಲ್ಲ. ಹೀಗಾಗಿ ಮನನೊಂದು ಪ್ರಾಣ ಬಿಡುತ್ತಿರುವುದಾಗಿ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಾನು ಸತ್ತ ಮೇಲಾದರೂ ನನ್ನ ಮಕ್ಕಳಿಗೆ ಆ ಬಾಕಿ ಹಣ ಕೊಟ್ಟು ಪುಣ್ಯಕಟ್ಟಿಕೊಳ್ಳಯ್ಯ ಎಂದು ಹಣ ನೀಡಬೇಕಾದ ರವೀಂದ್ರ ರೆಡ್ಡಿ ಎನ್ನುವವರಿಗೆ ಮನವಿ ಮಾಡಿ ಸಾವಿಗೆ ಶರಣಾಗಿರುವುದು ರೈತ ಮುಖಂಡರು ಕಾರ್ಯಕರ್ತರ ಕಣ್ಣು ಕೆಂಪಗಾಗುವಂತೆ ಮಾಡಿದೆ.
ಮರಳುಕುಂಟೆ ರಾಮಾಂಜಿನಪ್ಪ 75 ವರ್ಷ ವಯಸ್ಸಾಗಿದ್ದರು ಗಟ್ಟಿಮುಟ್ಟಾಗಿದ್ದರು. ನೂರಾರು ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟದಲ್ಲೆ ತೊಡಗಿಸಿಕೊಂಡಿದ್ದ. ಹಣಕ್ಕಾಗಿ ಯಾರ ಬಳಿಯೂ ಕೈ ಚಾಚದ ಸ್ವಾಭಿನಮಾನಿ ವ್ಯಕ್ತಿ ರಾಮಾಂಜಿನಪ್ಪ ಜನಾನುರಾಗಿಯಾಗಿದ್ದರು. ತೀವ್ರ ಆರ್ಥಿಕ ಸಮಸ್ಯೆಯ ಸಿಲುಕಿಕೊಂಡು ಕಳೆದ ಹತ್ತು ತಿಂಗಳ ಹಿಂದೆ ತಮ್ಮ 35 ಗುಂಟೆ ಜಮೀನು ಮಾರಾಟ ಮಾಡಿದ್ದ ಚಿಕ್ಕಬಳ್ಳಾಪುರದ ರವೀಂದ್ರರೆಡ್ಡಿ ಎಂಬುವರಿಗೆ ಜಮೀನು ಮಾರಾಟ ಮಾಡಿದ್ದರು.
ಡೆತ್‌ನೋಟ್‌ನಲ್ಲಿ ನೋಡಪ್ಪ ಸ್ವಾಮಿ ರವೀಂದ್ರ ರೆಡ್ಡಿಯವರೆ ನೀವು ನನ್ನ ಹತ್ತಿರ ಒಂದು ಗುಂಟೆ ಜಮೀನಿಗೆ 2 ಲಕ್ಷ 20 ಸಾವಿರ ರು.ಗಳ ದರದಲ್ಲಿ 35 ಗುಂಟೆ ಜಮೀನು ಖರೀದಿ ಮಾಡಿದ ಒಟ್ಟು 77 ಲಕ್ಷ ರು.ಗಳ ಪೈಕಿ 50 ಲಕ್ಷ ಕೊಟ್ಟು ರಿಜಿಸ್ಟರ್ ಮಾಡಿಸಿಕೊಂಡಿದ್ದೀರಿ. ಆ ನಂತರ 7 ಲಕ್ಷ ನನ್ನ ಮಗನ ಕೈಲಿ ಕೊಟ್ಟಿರುವ 50 ಸಾವಿರ ಸೇರಿ 57 ಲಕ್ಷ 50 ಸಾವಿರ ಸೇರಿದ ಉಳಿದ 19 ಲಕ್ಷ 50 ಸಾವಿರ ರು.ಗಳು ಕೊಡದೆ 8 ತಿಂಗಳಿಂದ ಸತಾಯಿಸುತಿದ್ದೀರಿ. ನನಗೆ ಇದು ಅವಮಾನವಾಗಿದೆ.
ಪೋನ್ ಮಾಡಿದರೆ ಅಟೆಂಟ್ ಮಾಡೊಲ್ಲ. ನೇರವಾಗಿ ಸಿಕ್ಕಿದಾಗ ನಿನ್ನದು ಒಂದು ಪೈಸೇನು ಬಾಕಿಇಟ್ಟುಕೊಳ್ಳಲ್ಲ ಕೊಟ್ಟುಬಿಡ್ತೀನಿ ಅಂತ ಹೇಳ್ತಿರಾ. ನನಗೆ ಸಾಲಗಾರರ ಒತ್ತಡ ಹೆಚ್ಚಾಗುತ್ತಿದೆ ಇದೆ. ಕಾರಣಕ್ಕೆ ನಾನು ಪ್ರಾಣ ಬಿಡ್ತಿದ್ದೇನೆ. ನಾನು ಸತ್ತಮೇಲಾದರೂ ನನ್ನ ಮಕ್ಕಳಿಗೆ ಬಾಕಿ ಹಣ ಕೊಟ್ಟು ಪುಣ್ಯ ಕಟ್ಟಿಕೊಳ್ಳಪ್ಪಾ ಎಂದು ತನ್ನ ಕೈಯಾರೆ ಬರೆದಿರುವ ಡೆತ್‌ನೋಟ್‌ನಲ್ಲಿ ಅಂಗಲಾಚಿರುವುದು ಎಂತವರ ಮನ ಕಲುಕುವಂತೆ ಮಾಡಿದೆ.
ನಿನ್ನೆ ರಾತ್ರಿ ಮದುವೆ ಇದೆ ಎಂದು ಮನೆಯಿಂದ ಬೈಕ್‌ನಲ್ಲಿ ಬಂದಿದ್ದ ಅವರು ವಾಪಸಂದ್ರ ಡೈರಿ ಬಳಿ ಬೈಕ್ ನಿಲ್ಲಿಸಿ ರೈತಸಂಘದ ಕಚೇರಿಯಲ್ಲೆ ನೇಣಿಗೆ ಶರಣಾಗಿದ್ದಾನೆ. ಮೊಮ್ಮಗ ಹಲವಾರು ಬಾರಿ ಪೋನ್ ಮಾಡಿದರೂ ತಗೆದಿಲ್ಲ. ಅವರ ಸ್ನೇಹಿತರಿಗೂ ಕಾಲ್ ಮಾಡಿದರೂ ಗೊತ್ತಿಲ್ಲ ಎಂದಿದ್ದಾರೆ. ಅನುಮಾನ ಬಂದ ಮೊಮ್ಮಗ ಬೆಳಿಗ್ಗೆ ರೈತ ಸಂಘ ಕಚೇರಿ ಬಳಿ ಬಂದು ನೇಡಿದಾಗ ಬೈಕ್ ನಿಲ್ಲಿಸಿರುವುದು ಕಂಡು ಇಲ್ಲೆ ಇದ್ದಾರೆ. ಯಾಕೆ ಪೋನ್ ಪಿಕ್ ಮಾಡಿಲ್ಲ ಎಂದು ರೈತ ಸಂಘ ಕಚೇರಿ ಬಾಗಿಲು ತಳ್ಳಿಕೊಂಡು ಹೋಗಿ ನೋಡುವಷ್ಟರಲ್ಲಿ ಸಾವಾಗಿರುವುದು ಕಂಡು ಬೆಚ್ಚಿ ಬಿದ್ದಿದ್ದಾರೆ.
ಮಾಹಿತಿ ತಿಳಿಯುತಿದ್ದಂತೆ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ರೈತ ಸಂಘದ ರಾಜ್ಯ ಕಾರ್ಯದ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮರಳುಕುಂಟೆ ಕೃಷ್ಣಮೂರ್ತಿ ಸಹ ಸ್ಥಳಕ್ಕೆ ಬಂದು ಪರಿಸ್ಥಿತಿ ಗಮನಿಸುತಿದ್ದಂತೆ ಡೆತ್ ನೋಟ್ ನೋಟ್ ಮಾಹಿತಿ ಹೊರಬಿದ್ದಿದ್ದು ಅದರಲ್ಲಿನ ವಿಷಯ ತಿಳಿದು ಆ ವ್ಯಕ್ತಿ ವಿರುದ್ದ ಕ್ರಮ ಜರುಗಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮರಳುಕುಂಟೆ ರಾಮಾಂಜಿನಪ್ಪ ರೈತಸಂಘದಲ್ಲಿ ಸುಮಾರು ವರ್ಷಗಳಿಂದ ಇದ್ದು, ಕಳೆದ ಹನ್ನೆರಡು ವರ್ಷಗಳಿಂದ ತಾಲ್ಲೂಕು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದು, ತಮ್ಮ ಬಳಿ ಬಂದ ಎಷ್ಟೋ ಜನರ ನೋವಿಗೆ ದನಿಯಾಗಿದ್ದಾರೆ. ಆದರೆ ತನ್ನ ಸಣ್ಣದೊಂದು ಸಮಸ್ಯೆಗೆ ಭಯಬಿದ್ದು ನೇಣಿಗೆ ಕೊರಳೊಡ್ಡಿರುವುದು ಆಶ್ಚರ್ಯಕರ ಎಂದು ರೈತ ಸಂಘದ ವರು ಮತ್ತು ರೈತರು, ಸಾರ್ವಜನಿಕರು ದುಖಃ ವ್ಯಕ್ತಪಡಿಸಿದ್ದು ಇದೊಂದು ದುರಂತ ಅವರಿಗಾಗಿರುವ ಅನ್ಯಾಯಕ್ಕೆ ನ್ಯಾಯ ಸಿಗಲೆ ಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನೂ ಮೃತ ರಾಮಾಂಜಿನಪ್ಪ ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳು ಅಣ್ಣತಮ್ಮಂದಿರು ಸಾವಿರಾರು ಕಾರ್ಯಕರ್ತರನ್ನ ಅಗಲಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪದ್ಮನಿಸಾಹು, ಡಿವೈಎಸ್ಪಿ ಪ್ರಕಾಶ್, ಬೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಿಕ್ಕಬಳ್ಳಾಪುರ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.