ಶಾಸಕ ಪ್ರದೀಪ್ ಈಶ್ವರ್ ಸೂಚನೆ ಮೇರೆಗೆ ನೋಟಿಸ್ । ಚಿಕ್ಕಬಳ್ಳಾಪುರ ಜಿಲ್ಲಾ ನಾಗರಿಕ ಹಿತರಕ್ಷಣಾ ಸಮಿತಿ ಮನವಿ
ಶಾಸಕ ಪ್ರದೀಪ್ ಈಶ್ವರ್ ಸೂಚನೆ ಮೇರೆಗೆ 182 ಶಿಕ್ಷಕರಿಗೆ ನೋಟಿಸ್ ನೀಡಿದ ಬಿಇಓ ವಿರುದ್ಧ ಕ್ರಮಕ್ಕೆ ಮತ್ತು ಶಿಕ್ಷಕರಿಗೆ ನೋಟಿಸನ್ನು ಕೂಡಲೇ ವಾಪಸ್ಸು ಪಡೆಯುವಂತೆ ಒತ್ತಾಯಿಸಿ ಜಿಲ್ಲಾ ನಾಗರೀಕ ಹಿತರಕ್ಷಣಾ ಸಮಿತಿಯು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಿತು.
ಈ ವೇಳೆ ಸಮಿತಿಯ ಅಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ ಮಾತನಾಡಿ, ಬಿಇಒ ಕಲಿಕಾ ವಿಷಯಗಳಲ್ಲಿನ ಲೋಪಗಳನ್ನು ಕುರಿತು ಆರೋಪಿಸಿ ಏಕಾಏಕಿ 182 ಪ್ರಾಥಮಿಕ ಶಾಲೆ ಶಿಕ್ಷಕರಿಗೆ ನೋಟೀಸ್ ನೀಡಿ ಮೂರು ದಿನಗಳ ಒಳಗಾಗಿ ಸಮಜಾಯಿಸಿ ನೀಡುವಂತೆ ಸೂಚಿಸಿರುವುದು ಅವೈಜ್ಞಾನಿಕ ಮತ್ತು ಆಘಾತಕಾರಿ ಕ್ರಮ. ಈಗಾಗಲೇ ಶಿಕ್ಷಕರು ಶಾಲಾ ಸ್ವಚ್ಛತೆ, ಶೌಚಾಲಯ ನಿರ್ವಹಣೆ, ಅಡಿಗೆಕಾರ್ಯ, ಜಾತಿಗಣತಿ, ಜನಗಣತಿ, ಮತದಾರರ ಪಟ್ಟಿ ಪರಿಷ್ಕರಣೆ ಇನ್ನಿತರೆ ಕಾರ್ಯಗಳನ್ನು ತಮ್ಮ ಕೌಟುಂಬಿಕ ಕಾರ್ಯದ ಒತ್ತಡಗಳ ನಡುವೆಯೂ ಶಾಲಾವಧಿಯನ್ನು ಮೀರಿ ಅತ್ಯಂತ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ.ಬಹುತೇಕ ಸರ್ಕಾರಿ ಶಾಲೆಗಳಲ್ಲು ಹೊರರಾಜ್ಯಗಳು, ಹೊರಜಿಲ್ಲೆಗಳಿಂದ ಬಂದಂತಹ ಹಾಗೂ ಇಟ್ಟಿಗೆ ಗೂಡು ಕಾರ್ಖಾನೆಗಳಲ್ಲಿ, ಕೋಳಿ ಫಾರಂಗಳಲ್ಲಿ ಕೆಲಸ ಮಾಡುವವರ ಮಕ್ಕಳು, ಕೃಷಿ ಕಾರ್ಮಿಕ ಮಕ್ಕಳು ಇರುವುದರಿಂದ ಅವರ ಪೋಷಕರಿಗೆ ಶೈಕ್ಷಣಿಕ ಹಿನ್ನೆಲೆ ಇಲ್ಲದಿರುವುದು, ಮಕ್ಕಳ ಸರಾಗಕಲಿಕೆಗೆ ಅಡಚಣೆ ಆಗಿರುತ್ತದೆ. ಇಂತಹ ಎಡರು ತೊಡರುಗಳನ್ನು ನಿಭಾಯಿಸಿ ಸಾಧ್ಯವಾದಷ್ಟು ಹೆಚ್ಚಿನ ಶಕ್ತಿಮೀರಿ ಶಿಕ್ಷಕರು ಪಾಠ ಪ್ರವಚನಗಳನ್ನು ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಬಿಇಒ ಕ್ಷೇತ್ರದ ಶಾಸಕರು ಕೆಲವು ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟವನ್ನು ಪರಿಶೀಲಿಸಿ ಎಚ್ಚರಿಕೆ ಕೊಟ್ಟು ನಂತರವೇ ಎಚ್ಚೆತ್ತುಕೊಂಡಿರುವುದು ಇವರ ಸಂಪೂರ್ಣ ನಿಷ್ಕ್ರಿಯತೆಗೆ ಕನ್ನಡಿ ಹಿಡಿದಂತಿದೆ. ಇವರು ತಮ್ಮ ಕರ್ತವ್ಯ ಲೋಪಗಳನ್ನು ಮರೆಮಾಚಲು ಶಿಕ್ಷಕರಿಗೆ ನೋಟೀಸನ್ನು ನೀಡಿ ಸಮಜಾಯಿಸಿ ನೀಡುವಂತೆ ಸೂಚಿಸಿರುವುದು ಅತ್ಯಂತ ಖಂಡನೀಯವಾಗಿರುತ್ತದೆ.
ಮನವಿ ಸ್ವೀಕರಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ವಿ.ರಮೇಶ್ ಮಾತನಾಡಿ, 8-10 ದಿನದೊಳಗೆ ಶಿಕ್ಷಕರ ಹಿತದೃಷ್ಟಿಯನ್ನೂ ಪರಿಗಣಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದೆಂದು ಭರವಸೆ ನೀಡಿದರು.
ಸಿಕೆಬಿ-1 182 ಶಿಕ್ಷಕರಿಗೆ ನೋಟಿಸ್ ನೀಡಿದ ಬಿಧೊಓ ವಿರುದ್ಧ ಕ್ರಮಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ನಾಗರಿಕ ಹಿತರಕ್ಷಣಾ ಸಮಿತಿ ಸದಸ್ಯರು ಡಿಡಿಪಿಐ ವಿ.ರಮೇಶ್ ಅವರಿಗೆ ಮನವಿ ನೀಡಿದರು.