ಬಹದ್ದೂರುಬಂಡಿ ಏತ ನೀರಾವರಿಯಿಂದ ರೈತರಿಗೆ ಅನುಕೂಲ: ಶಿವರಾಜ ತಂಗಡಗಿ

KannadaprabhaNewsNetwork |  
Published : Feb 01, 2025, 12:01 AM IST
ಮುಂಡರಗಿ ಜಾಕ್‌ವೆಲ್ ಪಾಯಿಂಟ್ ಹತ್ತಿರ ಬಹದ್ದೂರ್ ಬಂಡಿ ನವಲಕಲ್ ಏತ ನೀರಾವರಿ ಯೋಜನೆ ಪಂಪ್‌ಹೌಸ್‌ನ ಪ್ರಾಯೋಗಿಕ ಚಾಲನಾ ಕಾರ್ಯಕ್ರಮ | Kannada Prabha

ಸಾರಾಂಶ

ಕೊಪ್ಪಳ ತಾಲೂಕಿನ ಮುಂಡರಗಿ ಜಾಕ್‌ವೆಲ್ ಪಾಯಿಂಟ್ ಹತ್ತಿರ ಬಹದ್ದೂರ್ ಬಂಡಿ ನವಲಕಲ್ ಏತ ನೀರಾವರಿ ಯೋಜನೆ ಪಂಪ್‌ಹೌಸ್‌ಗೆ ಶುಕ್ರವಾರ ಸಚಿವ ಶಿವರಾಜ ತಂಗಡಗಿ ಪ್ರಾಯೋಗಿಕ ಚಾಲನಾ ನೀಡಿದರು.

ಕೊಪ್ಪಳ: ಬಹದ್ದೂರುಬಂಡಿ ಏತ ನೀರಾವರಿಯಿಂದ ರೈತರಿಗೆ ಅನುಕೂಲವಾಗಲಿದೆ. ಈ ಭಾಗದಲ್ಲಿ ಮಣ್ಣು ಫಲವತ್ತಾಗಿರುವುದರಿಂದ ಇಂಥ ಮಣ್ಣಿಗೆ ನೀರು ಬಂದು ಬಿಟ್ಟರೆ ರೈತನ ಬದುಕು ಬಂಗಾರವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್. ತಂಗಡಗಿ ಹೇಳಿದರು.

ಶುಕ್ರವಾರ ಮುಂಡರಗಿ ಜಾಕ್‌ವೆಲ್ ಪಾಯಿಂಟ್ ಹತ್ತಿರ ಬಹದ್ದೂರ್ ಬಂಡಿ ನವಲಕಲ್ ಏತ ನೀರಾವರಿ ಯೋಜನೆ ಪಂಪ್‌ಹೌಸ್‌ನ ಪ್ರಾಯೋಗಿಕ ಚಾಲನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.

2018ರಲ್ಲಿ ಬಹದ್ದೂರ್ ಬಂಡಿ ಏತ ನೀರಾವರಿ ಯೋಜನೆಗೆ ಅಡಿಗಲ್ಲು ಹಾಕಲಾಗಿತ್ತು. ಬಹುದಿನಗಳ ಕನಸು ಈಗ ನನಸಾಗಿದೆ. ನಮ್ಮ ಶಾಸಕರು, ನಾವು ಸೇರಿ ಮೊನ್ನೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ₹236 ಕೋಟಿ ಹಣ ಈ ಯೋಜನೆ ಫಿಡರ್ ಚಾನಲ್‌ಗಾಗಿ ಮಂಜೂರ ಮಾಡಿಸಿದ್ದೇವೆ. ನಮ್ಮ ರೈತರು ನೆಮ್ಮದಿಯಿಂದ ಇರಬೇಕು. ಅಧಿಕಾರ ಬರುತ್ತದೆ, ಹೋಗುತ್ತದೆ. ಅಧಿಕಾರ ಇದ್ದಾಗ ಒಳ್ಳೆಯ ಕೆಲಸ ಮಾಡಬೇಕು. ನಾನು ಮೊದಲು ಕೆರೆ ತುಂಬಿಸುವ ಯೋಜನೆ ಕನಕಗಿರಿಯಿಂದಲೇ ಆರಂಭಿಸಿದ್ದೆ. ಬಳಿಕ ಎಲ್ಲ ಕಡೆ ಈ ಯೋಜನೆ ಆರಂಭಿಸಲಾಯಿತು. ಇದರಿಂದ ರೈತರಿಗೆ ಬಹಳ ಅನುಕೂಲವಾಗಿದೆ ಎಂದು ಹೇಳಿದರು.

ಬರುವ ದಿನಗಳಲ್ಲಿ ನನ್ನ ಕ್ಷೇತ್ರದಲ್ಲಿ ತೋಟಗಾರಿಕೆ ಪಾರ್ಕ್ ಮಾಡುತ್ತೇನೆ. ಇದು ಮಾತ್ರವಲ್ಲದೆ ಸಿಂಗಟಾಲೂರು ಯೋಜನೆ ಮುಗಿಸಿ ರೈತರಿಗೆ ನೀರು ಕೊಡುವ ಕೆಲಸ ಮಾಡುತ್ತೇವೆ. ಗಿಣಿಗೇರಾ ಕೆರೆ ತುಂಬಿಸುವ ಯೋಜನೆ ವಿಚಾರ ಪ್ರಸ್ತಾಪ ಮಾಡಲಾಗಿದೆ. ಬಹದ್ದೂರ್ ಬಂಡಿ ಏತ ನೀರಾವರಿ ಯೋಜನೆಯಿಂದ 17 ಗ್ರಾಮಗಳ ವ್ಯಾಪ್ತಿಯ 12,988 ಎಕರೆ ಪ್ರದೇಶದ ಜಮೀನಿಗೆ ನೀರಾವರಿ ಸೌಲಭ್ಯ ದೊರೆಯಲಿದೆ ಎಂದು ಹೇಳಿದರು.

ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ, ಬಹದ್ದೂರ್ ಬಂಡಿ ಏತ ನೀರಾವರಿ ಯೋಜನೆ ಈ ಭಾಗದ ರೈತರ ಬಹುದಿನಗಳ ಹೋರಾಟದ ಫಲವಾಗಿದೆ. ನೀರಾವರಿಯಿಂದ ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಲಿದೆ. ಸಿಂಗಟಾಲೂರು ಏತ ನೀರಾವರಿಯಿಂದ 90 ಸಾವಿರ ಎಕರೆ ಜಮೀನು ನೀರಾವರಿಯಾಗಲಿದೆ. ಬಹದ್ದೂರುಬಂಡಿ-ನವಲಕಲ್ ಏತ ನೀರಾವರಿ ಯೋಜನೆಗೆ ₹188 ಕೋಟಿ ಹಾಗೂ ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆಗೆ ₹88 ಕೋಟಿ ಅನುದಾನ ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂದು ಒಂದೇ ಸಲಕ್ಕೆ ಈ ಯೋಜನೆಗಳಿಗೆ ಚಾಲನೆ ನೀಡಿದ್ದರು ಎಂದು ಹೇಳಿದರು.

ಬಹದ್ದೂರ್ ಬಂಡಿ ಏತ ನೀರಾವರಿ ಚಾನೆಲ್‌ ಕೆಲಸಕ್ಕೆ ₹256 ಕೋಟಿ ಮಂಜೂರು ಮಾಡಲಾಗಿದೆ. ರೈತರ ಪರವಾಗಿ ಕೆಲಸ ಮಾಡಿದಾಗ ಹೊಲಗಳಿಗೆ ನೀರಾವರಿ ಆಗುತ್ತದೆ. ನೀರಾವರಿ, ಆರೋಗ್ಯ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಜೊತೆಗೆ ದೂರದೃಷ್ಟಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ. ಇದೇ ತಿಂಗಳಲ್ಲಿ 450 ಬೆಡ್ಡಿನ ಆಸ್ಪತ್ರೆ ಲೋಕಾರ್ಪಣೆ ಮಾಡುತ್ತೇವೆ ಎಂದು ಹೇಳಿದರು. ಕೊಪ್ಪಳ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಮಾಜಿ ಸಂಸದ ಸಂಗಣ್ಣ ಕರಡಿ, ಮಾಜಿ ಶಾಸಕರಾದ ಕೆ. ಬಸವರಾಜ ಹಿಟ್ನಾಳ, ಜಿಪಂ ಮಾಜಿ ಸದಸ್ಯರಾದ ಗೂಳಪ್ಪ ಹಲಗೇರಿ ಮಾತನಾಡಿದರು.

ಕೊಪ್ಪಳ ಸಂಸದರಾದ ಕೆ. ರಾಜಶೇಖರ ಬಸವರಾಜ ಹಿಟ್ನಾಳ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ನೀರಾವರಿ ಕೇಂದ್ರ ವಲಯ ಕೆ.ಎನ್.ಎನ್.ಎಲ್. ಮುನಿರಾಬಾದ್ ಮುಖ್ಯ ಎಂಜಿನಿಯರ್ ಹನುಮಂತಪ್ಪ ದಾಸರ, ಅಧೀಕ್ಷಕ ಎಂಜಿನಿಯರ್ ಬಸವರಾಜ, ಕಾರ್ಯಪಾಲಕ ಎಂಜಿನಿಯರ್ ಗಿರೀಶ್, ಕೃಷ್ಣ ರೆಡ್ಡಿ, ಗಾಳಪ್ಪ ಪೂಜಾರಿ, ಯಂಕಪ್ಪ ಉಪಸ್ಥಿತರಿದ್ದರು.

PREV

Recommended Stories

ಇಂದಿನಿಂದ ಪ್ರೊ ಕಬಡ್ಡಿ ಲೀಗ್‌ ಶುರು : 12ನೇ ಆವೃತ್ತಿ । 12 ತಂಡ, ಒಟ್ಟು 117 ಪಂದ್ಯ
‘ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡುವವರು ಕಷ್ಟಕ್ಕೆ ಸಿಲುಕ್ತಾರೆ’