ವಿದ್ಯುತ್ ಖಾಸಗೀಕರಣ ವಿರೋಧಿಸಿ ಬೆಸ್ಕಾಂಗೆ ರೈತರ ಮುತ್ತಿಗೆ

KannadaprabhaNewsNetwork |  
Published : Jun 23, 2026, 01:15 AM IST
22ಕೆಡಿವಿಜಿ1, 2, 3-ದಾವಣಗೆರೆಯಲ್ಲಿ ವಿದ್ಯುತ್ ಖಾಸಗೀಕರಣ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದು, ಹೋರಾಟಕ್ಕೆ ಆಮ್ ಆದ್ಮಿ ಪಕ್ಷ ಬೆಂಬಲಿಸಿ ಪಾಲ್ಗೊಂಡಿತ್ತು. | Kannada Prabha

ಸಾರಾಂಶ

ಸೇವಾ ಸದುದ್ದೇಶದ ಸಾರ್ವಜನಿಕ ಉದ್ದಿಮೆಯಾದ ಕೆಪಿಟಿಸಿಎಲ್‌, ಬೆಸ್ಕಾಂ, ಹೆಸ್ಕಾಂ, ಚೆಸ್ಕಾಂಗಳ ವಿದ್ಯುತ್ ವಿತರಣಾ ಪರವಾನಗಿಯನ್ನು ಟಾಟಾ ಪವರ್ ಕಂಪನಿಗೆ ವಹಿಸಿ, ವಿದ್ಯುತ್ ಖಾಸಗೀಕರಣಕ್ಕೆ ಮುಂದಾಗಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಬೆಸ್ಕಾಂ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು. ಹೋರಾಟಕ್ಕೆ ಆಮ್ ಆದ್ಮಿ ಪಕ್ಷವೂ ಬೆಂಬಲ ವ್ಯಕ್ತಪಡಿಸಿತು.

- ಜನರಿಗೆ ಸಂಕಷ್ಟ ತಂದೊಡ್ಡುವ ಕೆಲಸಕ್ಕೆ ಮುಂದಾಗಿರುವ ಸರ್ಕಾರ: ರೈತ ಮುಖಂಡರ ಆಕ್ರೋಶ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಸೇವಾ ಸದುದ್ದೇಶದ ಸಾರ್ವಜನಿಕ ಉದ್ದಿಮೆಯಾದ ಕೆಪಿಟಿಸಿಎಲ್‌, ಬೆಸ್ಕಾಂ, ಹೆಸ್ಕಾಂ, ಚೆಸ್ಕಾಂಗಳ ವಿದ್ಯುತ್ ವಿತರಣಾ ಪರವಾನಗಿಯನ್ನು ಟಾಟಾ ಪವರ್ ಕಂಪನಿಗೆ ವಹಿಸಿ, ವಿದ್ಯುತ್ ಖಾಸಗೀಕರಣಕ್ಕೆ ಮುಂದಾಗಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಬೆಸ್ಕಾಂ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು. ಹೋರಾಟಕ್ಕೆ ಆಮ್ ಆದ್ಮಿ ಪಕ್ಷವೂ ಬೆಂಬಲ ವ್ಯಕ್ತಪಡಿಸಿತು.

ನಗರದ ಶ್ರೀ ಜಯದೇವ ವೃತ್ತದಿಂದ ಸಂಘಟನೆಗಳ ನೇತೃತ್ವದಲ್ಲಿ ಡಾ.ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದ ರೈತರು, ರೈತ ಮುಖಂಡರು, ಎಎಪಿ ಮುಖಂಡರು, ಕಾರ್ಯಕರ್ತರು ವಿದ್ಯುತ್ ಖಾಸಗೀಕರಣ ಕೈಬಿಡುವಂತೆ ಒತ್ತಾಯಿಸಿ ಬೆಸ್ಕಾಂ ಇಇ ಮುಖಾಂತರ ಸರ್ಕಾರಗಳಿಗೆ ಮನವಿ ಅರ್ಪಿಸಿದರು. ಸಂಘಟನೆಗಳು, ಪಕ್ಷದ ಜೊತೆಗೆ ವೈಯಕ್ತಿಕವಾಗಿಯೂ ವಿದ್ಯುತ್ ಖಾಸಗೀಕರಣ ವಿರೋಧಿಸಿ ಆಕ್ಷೇಪಣೆ ಸಲ್ಲಿಸಿದರು.

ಸಂಘಟನೆ ಮುಖಂಡರು ಮಾತನಾಡಿ, ರಾಜ್ಯಾದ್ಯಂತ ರೈತರನ್ನು ಬೀದಿಪಾಲು ಮಾಡುವಂತೆ ವಿದ್ಯುತ್ ಖಾಸಗೀಕರಣಕ್ಕೆ ಸರ್ಕಾರಗಳು ಮುಂದಾಗಿರುವುದು ದುರಂತದ ಪರಮಾವಧಿ. ಸೇವಾ ಕ್ಷೇತ್ರದ ಸಾರ್ವಜನಿಕ ಉದ್ಯಮವಾದ ವಿದ್ಯುತ್ ಇಲಾಖೆಯನ್ನು ಖಾಸಗಿಯವರಿಗೆ ನೀಡುವ ಮೂಲಕ ಸರ್ಕಾರಗಳು ತಮ್ಮ ಸಾಲ ತೀರಿಸಿಕೊಳ್ಳಲು ಮುಂದಾಗಿವೆ. ಇದು ನಾಚಿಕೆಗೇಡಿನ ಸಂಗತಿ. ವಿದ್ಯುತ್ ಖಾಸಗೀಕರಣ ವಿರೋಧಿಸಿ ನಾವೆಲ್ಲರೂ ಆಕ್ಷೇಪಣೆಗಳನ್ನೂ ಸಲ್ಲಿಸುತ್ತಿದ್ದೇವೆ ಎಂದರು.

ಸರ್ಕಾರಿ ಸ್ವಾಮ್ಯದ ಬೆಸ್ಕಾಂ, ಹೆಸ್ಕಾಂ, ಚೆಸ್ಕಾಂಗಳು ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿವೆ. ಈ ಪರಿಸ್ಥಿತಿಯಲ್ಲಿ ವಿದ್ಯುತ್ ಕ್ಷೇತ್ರದ ಖಾಸಗೀಕರಣ ಸರಿಯಲ್ಲ. ಕೇಂದ್ರ, ರಾಜ್ಯ ಸರ್ಕಾರಗಳ ವಿದ್ಯುತ್ ಖಾಸಗೀಕರಣ ನೀತಿಯನ್ನು ಉಗ್ರವಾಗಿ ಖಂಡಿಸುತ್ತೇವೆ. ಖಾಸಗಿ ಸಂಸ್ಥೆಯಾದ ಟಾಟಾ ಪವರ್ ಕಂಪನಿಗೆ ವಿದ್ಯುತ್ ವಿತರಣೆ ಜವಾಬ್ದಾರಿ ನೀಡಿದರೆ ರೈತರಿಗೆ, ಸಾರ್ವಜನಿಕರಿಗೆ ಎಲ್ಲಿಲ್ಲದ ಸಮಸ್ಯೆಯಾಗಲಿದೆ. ವಿದ್ಯುತ್ ಇಲಾಖೆ ನೌಕರರ ಸೇವಾ ಭದ್ರತೆಗೂ ಧಕ್ಕೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳ ಪ್ರವೇಶದಿಂದ ದೀರ್ಘಾವಧಿಯಲ್ಲಿ ರೈತವರ್ಗಕ್ಕೆ, ಕೈಗಾರಿಕೆಗಳಿಗೆ ಮತ್ತು ಗ್ರಾಹಕರಿಗೆ ಭಾರಿ ಸಂಕಷ್ಟ ಎದುರಾಗುವುದು ನಿಶ್ಚಿತ. ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವುದು, ಗೃಹಜ್ಯೋತಿ, ಭಾಗ್ಯಜ್ಯೋತಿ, ಕುಸುಮ ಯೋಜನೆಗಳಡಿ ನೀಡುತ್ತಿರುವ ಸಬ್ಸಿಡಿ ಕಡಿತ ಸೇರಿದಂತೆ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಮತ್ತು ಕಾರ್ಮಿಕ ವರ್ಗಕ್ಕೆ ವಿದ್ಯುತ್ ದರ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ಇಲ್ಲದಿಲ್ಲ. ಈಗಲೇ ಪ್ರತಿಯೊಬ್ಬರೂ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಅಪಾಯ ತಪ್ಪಿದ್ದಲ್ಲ ಎಂದು ಹೇಳಿದರು.

ವಿದ್ಯುತ್ ಖಾಸಗೀಕರಣದಿಂದ ಶೇ.70ರಿಂದ 80 ರೈತರು ಕೃಷಿಯಿಂದಲೇ ವಿಮುಖರಾಗುವ ಅಪಾಯವಿದೆ. ವಿದ್ಯುತ್ ಖಾಸಗೀಕರಣದ ಮೂಲಕ ರೈತರನ್ನು ಹಾಳುಗೆಡವಲು ಉಭಯ ಸರ್ಕಾರಗಳು ಮುಂದಾದಂತಿದೆ. ರೈತರ ಸಹನೆ ಪರೀಕ್ಷಿಸುವ ದುಸ್ಸಾಹಸ ಸರ್ಕಾರ ಮಾಡಬಾರದು. ವಿದ್ಯುತ್ ಖಾಸಗೀಕರಣಕ್ಕೆ ಹೊರಟ ಸರ್ಕಾರಗಳು ಹೆಜ್ಜೇನಿಗೆ ಕಲ್ಲು ಹೊಡೆಯುತ್ತಿದ್ದೇವೆ ಎಂಬುದನ್ನೇ ಮರೆತಂತಿದೆ. ರೈತ, ಕಾರ್ಮಿಕ ಸೇರಿದಂತೆ ಸಂಘ- ಸಂಸ್ಥೆ- ಸಂಘಟನೆಗಳು, ಸಾರ್ವಜನಿಕರು ಸಂಯುಕ್ತ ಹೋರಾಟ ನಡೆಸುವ ಮೂಲಕ ಸರ್ಕಾರಗಳಿಗೆ ತಕ್ಕ ಪಾಠ ಕಲಿಸುವ ದಿನಗಳು ದೂರವಿಲ್ಲ ಎಂದು ಎಚ್ಚರಿಸಿದರು.

ಮುಖಂಡರಾದ ಅರುಣಕುಮಾರ ಕುರುಡಿ, ಬುಳ್ಳಾಪುರ ಹನುಮಂತಪ್ಪ, ಮಂಡಲೂರು ವಿಶ್ವನಾಥ, ಕರಿಲಕ್ಕೇನಹಳ್ಳಿ ರೇವಣಸಿದ್ದಪ್ಪ, ತಾಲೂಕು ಅಧ್ಯಕ್ಷ ಬುಳ್ಳಾಪುರ ಎಸ್.ಟಿ. ಪರಮೇಶಪ್ಪ, ಈಚಘಟ್ಟ ಉದಯಪ್ಪ, ಚಟ್ಟೋಬನಹಳ್ಳಿ ಕಂಪಳೇಶ, ಕರಿಲಕ್ಕೇನಹಳ್ಳಿ ಹನುಮಂತಪ್ಪ, ಭೀಮಾನಾಯ್ಕ ಚಿನ್ನಸಮುದ್ರ, ಈಚಘಟ್ಟ ಹನುಮಂತ ನಾಯ್ಕ, ನಯನ ಈಚಘಟ್ಟ, ನಾಗರಾಜ, ರೇವಣಸಿದ್ದಪ್ಪ, ಎಸ್.ಜಿ.ರಮೇಶ, ಎಸ್.ಜಿ.ಶಾಂತನಗೌಡ, ಎಸ್.ಎಂ.ಜಿ. ರೇವಣಸಿದ್ದಪ್ಪ, ಎ.ವಿ.ರವಿಕುಮಾರ, ಕೆ.ಆರ್.ಶಿವಕುಮಾರ, ಎ.ವಿ.ರುದ್ರೇಶ, ಎ.ವಿ.ಶಿವು, ಎ.ಬಿ. ಲೋಕೇಶ, ಎಸ್.ಜಿ.ಸತೀಶ, ಎ.ವಿ.ಮರುಳಸಿದ್ದಪ್ಪ, ಎಚ್.ಬಿ.ವಿಶ್ವನಾಥ, ಎಂ.ಎನ್.ಚಿಗಟೇರಪ್ಪ, ಶಿವಕುಮಾರಯ್ಯ, ರವಿಕುಮಾರ, ಮಧು, ಜಯಪ್ಪ, ಬಸವರಾಜ ರಟ್ಟಿಹಳ್ಳಿ, ಬಸವರಾಜ, ಗೌಡ್ರ ಸಿದ್ದಲಿಂಗಪ್ಪ, ಕಡ್ಲೆಬಾಳು ಚಂದ್ರಶೇಖರ ಇತರರು ಇದ್ದರು.

ಆಮ್ ಆದ್ಮಿ ಪಕ್ಷದ ಕೆ.ಎಸ್.ಶಿವಕುಮಾರಪ್ಪ, ಕೆ.ಎಸ್.ಆದಿಲ್ ಖಾನ್, ವಿಕಾಸ್, ಕೆ.ರವೀಂದ್ರ, ಎಸ್.ಎನ್.ಮಲ್ಲಿಕಾರ್ಜುನ, ಎಂ.ವೆಂಕಟೇಶ ಇತರರು ಹೋರಾಟದಲ್ಲಿದ್ದರು.

- - -

-22ಕೆಡಿವಿಜಿ1, 2, 3:

ದಾವಣಗೆರೆಯಲ್ಲಿ ವಿದ್ಯುತ್ ಖಾಸಗೀಕರಣ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ, ರೈತ ಸಂಘ-ಹಸಿರು ಸೇನೆ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಹೋರಾಟಕ್ಕೆ ಆಮ್ ಆದ್ಮಿ ಪಕ್ಷ ಕಾರ್ಯಕರ್ತರು ಸಹ ಬೆಂಬಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯೋಧರ ಕಲ್ಯಾಣಕ್ಕೆ ನಿವೃತ್ತ ಶಿಕ್ಷಕಿ ₹10 ಲಕ್ಷ ದೇಣಿಗೆ!
ಪ್ರತಿ ವಾರ ಗ್ರಾಪಂ ಮಟ್ಟದಲ್ಲಿ ಜನಸಂಪರ್ಕ ಸಭೆ