ಕನ್ನಡಪ್ರಭ ವಾರ್ತೆ ಬಳ್ಳಾರಿ
ಒಕ್ಕೂಟ ನಷ್ಟದಲ್ಲಿದೆ ಎಂಬ ನೆಪದಲ್ಲಿ ಹಾಲು ಉತ್ಪಾದಕರ ಹಣವನ್ನು ಕಡಿತಗೊಳಿಸಿರುವ ಒಕ್ಕೂಟದ ನಿಲುವು ಖಂಡಿಸಿ ಹಾಗೂ ಕೂಡಲೇ ಬಾಕಿ ಹಣ ಮರಳಿ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಇಲ್ಲಿನ ಬರಾಕೊವಿ ಹಾಲು ಒಕ್ಕೂಟದ ಮುಂಭಾಗ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ ಅವರಿಗೆ ಮುತ್ತಿಗೆ ಹಾಕಿ ಶನಿವಾರ ಪ್ರತಿಭಟನೆ ನಡೆಸಿದರು.ಒಕ್ಕೂಟದ ಕಾರ್ಯಕಾರಿ ಸಮಿತಿ ಸಭೆಗೆ ಹಾಜರಾಗಲು ಭೀಮಾನಾಯ್ಕ ಆಗಮಿಸುತ್ತಿದ್ದಂತೆಯೇ ರೈತರು ಮುತ್ತಿಗೆ ಹಾಕಿ, ಪ್ರತಿಭಟಿಸಿದರಲ್ಲದೆ ಬಾಕಿ ಹಣ ನೀಡದೆ ಹಾಲು ಉತ್ಪಾದಕರಿಗೆ ಒಕ್ಕೂಟ ಅನ್ಯಾಯ ಮಾಡುತ್ತಿದೆ ಎಂದು ಘೋಷಣೆ ಕೂಗಿದರು.ಇದೇ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಒಕ್ಕೂಟ ನಷ್ಟದಲ್ಲಿದೆ ಎಂದು ಕಳೆದ ವರ್ಷ ಸೆಪ್ಟಂಬರ್‌ನಿಂದ ಪ್ರತಿ ಲೀಟರ್ ಹಾಲಿಗೆ ₹1.50ಗಳಂತೆ ಕಡಿತಗೊಳಿಸಲಾಗಿದೆ. ಕಳೆದ ಏಳು ತಿಂಗಳ ಅವಧಿಯಲ್ಲಿ ಸುಮಾರು ₹7 ಕೋಟಿಗಳಷ್ಟು ಹಣವನ್ನು ಹಾಲು ಉತ್ಪಾದಕರಿಗೆ ಒಕ್ಕೂಟ ನೀಡಬೇಕಿದೆ. ಒಂದು ತಿಂಗಳೊಳಗೆ ಹಣ ನೀಡುವುದಾಗಿ ಒಕ್ಕೂಟ ಭರವಸೆ ನೀಡಿತ್ತು. ಆದರೆ, ಈವರೆಗೆ ಹಣ ನೀಡಲಾಗಿಲ್ಲ. ಹಾಲು ಉತ್ಪಾದನಾ ವೆಚ್ಚದಿಂದ ಸಂಕಷ್ಟದಲ್ಲಿರುವ ರೈತರ ಬಗ್ಗೆ ಒಕ್ಕೂಟ ಗಮನ ಹರಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ರಾಜ್ಯ ರೈತ ಸಂಘದ ಅಧ್ಯಕ್ಷ ಮಾಧವ ರೆಡ್ಡಿ ಕರೂರು ಮಾತನಾಡಿ, ಹಾಲು ಉತ್ಪಾದಕರು ತೀವ್ರ ಸಂಕಷ್ಟದಲ್ಲಿದ್ದಾರೆ. ಬೆಲೆ ಏರಿಕೆಯ ಸ್ಥಿತಿಯಲ್ಲಿ ಹಾಲು ಉತ್ಪಾದಕ ವೆಚ್ಚಗಳನ್ನು ತೂಗಿಸುವುದು ಸಹ ಕಷ್ಟವಾಗಿದೆ. ಹೀಗಿರುವಾಗ ಬಾಕಿ ಇರುವ ಹಣವನ್ನು ನೀಡಲು ಹಿಂದೇಟು ಹಾಕುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರಲ್ಲದೆ, ಕಳೆದ ಏಳು ತಿಂಗಳಿನಿಂದ ಹಾಲು ಉತ್ಪಾದಕರಿಂದ ಪ್ರತಿ ಲೀಟರ್‌ಗೆ ₹1.50ಗಳಂತೆ ಕಡಿತಗೊಳಿಸಿರುವ ಹಣವನ್ನು ಕೂಡಲೇ ಪಾವತಿಸಬೇಕು. ಈ ಭಾಗದ ಹಾಲು ಉತ್ಪಾದಕರ ಹಿತ ದೃಷ್ಟಿಯಿಂದ ಮೇಗಾಡೈರಿಯ ಆರಂಭಕ್ಕೆ ಮುಂದಾಗಬೇಕು ಎಂದು ಒತ್ತಾಯಸಿದರು.ಮೇಗಾಡೈರಿ ಆರಂಭಕ್ಕೆ ಸಂಬಂಧಿಸಿದಂತೆ ಕೆಎಂಇಆರ್‌ಸಿಯಿಂದ ₹114 ಕೋಟಿ ಅನುಮೋದನೆಯಾಗಿದೆ. ಆದರೆ, ಜಮೀನು ಹಾಗೂ ಡೈರಿ ಅಭಿವೃದ್ಧಿ ಹಿನ್ನೆಲೆ ಪಾವತಿಸಬೇಕಾಗಿರುವ ಹಣವನ್ನು ಪಾವತಿ ಮಾಡಲಾಗಿಲ್ಲ. ಹೀಗಾಗಿಯೇ ಡೈರಿ ಆರಂಭಕ್ಕೆ ಹಿನ್ನಡೆಯಾಗಿದೆ ಎಂದು ಮಾಧವ ರೆಡ್ಡಿ ಕರೂರು ದೂರಿದರು.ಪ್ರತಿಭಟನೆಯಲ್ಲಿದ್ದ ರೈತ ಸಂಘದ ಮುಖಂಡರು ಹಾಗೂ ವಿವಿಧ ಗ್ರಾಮೀಣ ಪ್ರದೇಶಗಳಿಂದ ಆಗಮಿಸಿದ್ದ ಹಾಲು ಉತ್ಪಾದಕರು ಒಕ್ಕೂಟದ ರೈತ ವಿರೋಧಿ ನಿಲುವು ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನಾಕಾರರಿಗೆ ಸಮಜಾಯಿಷಿ ನೀಡಲು ಆಗಮಿಸಿದ ಭೀಮಾನಾಯ್ಕ ಅವರಿಗೆ ರೈತರು ತರಾಟೆಗೆ ತೆಗೆದುಕೊಂಡರಲ್ಲದೆ, ರೈತರ ಹಿತ ಕಾಯುವ ಮನಸ್ಸಿದ್ದರೆ ಕೂಡಲೇ ಬಾಕಿ ಹಣವನ್ನು ರೈತರಿಗೆ ನೀಡಿ ಎಂದು ಆಗ್ರಹಿಸಿದರು. ಇದೇ ವೇಳೆ ರೈತರು ಹಾಗೂ ಭೀಮಾನಾಯ್ಕ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಮಧ್ಯಪ್ರವೇಶಿಸಿ ತಿಳಿಗೊಳಿಸಿದರು. ರೈತರ ಹಿತ ಕಾಯಲು ನಾವು ಬದ್ಧರಾಗಿದ್ದೇವೆ. ಕಡಿತಗೊಳಿಸಿರುವ ಹಣವನ್ನು ವಾಪಾಸ್ ಮಾಡಲಾಗುವುದು. ಈ ಸಂಬಂಧ ಒಕ್ಕೂಟದ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿಲುವು ತೆಗೆದುಕೊಳ್ಳಲಾಗುವುದು ಎಂದು ಭೀಮಾನಾಯ್ಕ ಭರವಸೆ ನೀಡಿದರು.ಸಂಘದ ಮುಖಂಡರಾದ ಲೇಪಾಕ್ಷಿ, ಬಸವರಾಜಸ್ವಾಮಿ, ಪಂಪನಗೌಡ, ಬಸರೆಡ್ಡಿ, ಉಮಾಪತಿಗೌಡ, ವಿರುಪಾಕ್ಷ ನಾಯಕ, ಹೇಮಣ್ಣ ನಾಯಕ, ಓಂಕಾರಗೌಡ, ವಿಶ್ವನಾಥ ಸೇರಿದಂತೆ ಹಾಲು ಉತ್ಪಾದಕರಿದ್ದರು.ಹೆಚ್ಚು ಮಾಡಿದ ಹಣ ಕಾಂಗ್ರೆಸ್‌ಗೆ ತಗೊಂಡು ಹೋಗ್ತೀವಾ:
ಹಾಲಿನ ದರ ಏರಿಕೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ, ಹಾಲಿನ ದರ ಏರಿಕೆ ಹಣವನ್ನು ರೈತರಿಗೆ ಕೊಡುತ್ತೇವೆ. ನಾವೇನು ಕಾಂಗ್ರೆಸ್ ಪಕ್ಷಕ್ಕೆ ತಗೊಂಡು ಹೋಗ್ತೀವಾ ಎಂದು ಪ್ರಶ್ನಿಸಿದರು.ಈ ಹಿಂದೆ ಬಿಜೆಪಿ ಅಧಿಕಾರದ ಕಾಲದಲ್ಲೂ ಹಾಲಿನ ದರ ಏರಿಕೆಯಾಗಿತ್ತು. ರೈತರ ಬಗ್ಗೆ ಕಾಳಜಿಗಳಲ್ಲದ ಬಿಜೆಪಿಯವರು ಹಾಲಿನ ದರದ ಬಗ್ಗೆ ಮಾತನಾಡುತ್ತಾರೆ. ನಮ್ಮದು ಜನಪರ ಸರ್ಕಾರ. ಜನಹಿತ ಕಾಯಲು ಯೋಜನೆ ಹಾಕಿಕೊಂಡಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ವರ್ಷ ಅವಧಿ ಪೂರ್ಣಗೊಳಿಸಲಿದ್ದು, ಇದನ್ನು ಸಹಿಸದ ಬಿಜೆಪಿಯವರು ವಿನಾಕಾರಣ ಟೀಕೆ ಮಾಡುತ್ತಾರೆ ಎಂದು ಹೇಳಿದರು. ಪಕ್ಷದ ಮುಖಂಡರಾದ ಎ. ಮಾನಯ್ಯ, ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡ್ರಗಿ ನಾಗರಾಜ್ ಇತರರಿದ್ದರು.