ಯೂರಿಯಾ ಗೊಬ್ಬರಕ್ಕಾಗಿ ಒತ್ತಾಯಿಸಿ ರೈತರಿಂದ ರಸ್ತೆ ತಡೆ

KannadaprabhaNewsNetwork |  
Published : Sep 02, 2025, 12:00 AM IST
ಚಿತ್ರ: ೧ಎಸ್.ಎನ್.ಡಿ.೦೧- ಸಂಡೂರಿನ ವಿಜಯ ವೃತ್ತದಲ್ಲಿ ಸೋಮವಾರ ಬೆಳಗ್ಗೆ ಹಲವು ರೈತರು ಯೂರಿಯಾ ಗೊಬ್ಬರ ಪೂರೈಕೆಗೆ ಒತ್ತಾಯಿಸಿ ಕೆಲ ಸಮಯ ರಸ್ತೆ ತಡೆ ನಡೆಸಿ, ಸ್ಥಳಕ್ಕೆ ಆಗಮಿಸಿದ್ದ ಪೊಲೀಸರ ಎದುರಿಗೆ ತಮ್ಮ ಅಳಲನ್ನು ತೋಡಿಕೊಂಡರು. ೧ಎಸ್.ಎನ್.ಡಿ.೦೨-ಸಂಡೂರಿನ ವಿಜಯ ವೃತ್ತದಲ್ಲಿ ಸೋಮವಾರ ಬೆಳಗ್ಗೆ ಯೂರಿಯಾ ಗೊಬ್ಬರಕ್ಕಾಗಿ ಒತ್ತಾಯಿಸಿ ರೈತರು ರಸ್ತೆ ತಡೆ ನಡೆಸಿದ ಸಂದರ್ಭದಲ್ಲಿ ಹಲವು ವಾಹನಗಳು ಸಾಲುಗಟ್ಟಿ ನಿಂತಿದ್ದವು. | Kannada Prabha

ಸಾರಾಂಶ

ಯೂರಿಯಾ ಗೊಬ್ಬರಕ್ಕಾಗಿ ಒತ್ತಾಯಿಸಿ ಸೋಮವಾರ ಪಟ್ಟಣದ ವಿಜಯ ವೃತ್ತದಲ್ಲಿ ಹಲವು ರೈತರು ಕೆಲ ಸಮಯ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ಕನ್ನಡಪ್ರಭ ವಾರ್ತೆ ಸಂಡೂರು

ಯೂರಿಯಾ ಗೊಬ್ಬರಕ್ಕಾಗಿ ಒತ್ತಾಯಿಸಿ ಸೋಮವಾರ ಪಟ್ಟಣದ ವಿಜಯ ವೃತ್ತದಲ್ಲಿ ಹಲವು ರೈತರು ಕೆಲ ಸಮಯ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ಪ್ರತಿಭಟನೆಯಿಂದಾಗಿ ಕೆಲ ಸಮಯ ರಸ್ತೆಯ ಎರಡೂ ಕಡೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸಂಚಾರಕ್ಕೆ ಕೆಲ ಸಮಯ ಅಡಚಣೆ ಉಂಟಾಯಿತು. ಸ್ಥಳಕ್ಕೆ ತಹಶೀಲ್ದಾರ್ ಬಂದು ಸಮಸ್ಯೆ ಆಲಿಸಿ, ಅದರ ನಿವಾರಣೆಗೆ ಕ್ರಮಕೈಗೊಳ್ಳುವವರೆಗೆ ಹೋರಾಟ ಹಿಂಪಡೆಯುವುದಿಲ್ಲ ಎಂದು ರೈತರು ಪಟ್ಟು ಹಿಡಿದರು.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಜಿ. ಅನಿಲ್‌ಕುಮಾರ್ ರೈತರೊಂದಿಗೆ ಚರ್ಚಿಸಿದರು.

ರೈತರಾದ ತಾವಾನಾಯ್ಕ, ಕುಮಾರಸ್ವಾಮಿ ಮುಂತಾದವರು ಮಾತನಾಡಿ, ಉತ್ತಮ ಮಳೆಯಿಂದಾಗಿ ಬೆಳೆಗಳೂ ಚೆನ್ನಾಗಿವೆ. ಅವುಗಳಿಗೆ ಕೂಡಲೇ ಯೂರಿಯಾ ಗೊಬ್ಬರ ಕೊಡಬೇಕಿದೆ. ಆದರೆ, ಯೂರಿಯಾ ಗೊಬ್ಬರ ಸಿಗುತ್ತಿಲ್ಲ. ಆದ್ದರಿಂದ ರೈತರಿಗೆ ಸಮರ್ಪಕವಾಗಿ ಯೂರಿಯಾ ಗೊಬ್ಬರ ಪೂರೈಸಲು ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು.

ತಹಶೀಲ್ದಾರ್ ಮಾತನಾಡಿ, ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಪ್ರಮಾಣದ ಯೂರಿಯಾ ಗೊಬ್ಬರ ತರಿಸಿ, ತಾಲೂಕಿನ ರೈತರಿಗೆ ಪೂರೈಸಲಾಗಿದೆ. ಕೆಲವರು ಇಲ್ಲಿ ಖರೀದಿಸಿ ಬೇರೆ ಊರುಗಳಿಗೆ ಕಳುಹಿಸುತ್ತಿರುವ ಮಾತುಗಳು ಕೇಳಿ ಬರುತ್ತಿವೆ. ಅಂತಹ ಪ್ರಕರಣಗಳು ಕಂಡು ಬಂದಲ್ಲಿ ಅಧಿಕಾರಿಗಳ ಗಮನಕ್ಕೆ ತರಬೇಕು. ಅರ್ಹ ರೈತರಿಗೆ ಯೂರಿಯಾ ಗೊಬ್ಬರ ಸಿಗುವಂತಾಗಬೇಕು. ಮಂಗಳವಾರ ಮತ್ತು ಬುಧವಾರ ಯೂರಿಯಾ ಗೊಬ್ಬರವನ್ನು ತರಿಸಿ, ವಿತರಿಸಲಾಗುವುದು ಎಂದು ತಿಳಿಸಿದರು.

ಈ ಭರವಸೆಯ ಮೇಲೆ ರೈತರು ತಮ್ಮ ರಸ್ತೆ ತಡೆ ಪ್ರತಿಭಟನೆ ಸ್ಥಗಿತಗೊಳಿಸಿದರು.

ಈ ಬಾರಿ ಮಳೆ ಹಾಗೂ ಬೆಳೆ ಚೆನ್ನಾಗಿದೆ. ಆದರೆ, ಯೂರಿಯಾ ಗೊಬ್ಬರದ ಕೊರತೆ ಉಂಟಾಗಿದೆ. ಕೆಲವರು ಬೇರೆ ಊರುಗಳಿಗೆ ಹೋಗಿ ಹೆಚ್ಚಿನ ದರಕ್ಕೆ ಯೂರಿಯಾ ಖರೀದಿಸಿ ತರುತ್ತಿದ್ದಾರೆ. ಈ ಹಿಂದೆ ಸ್ಟೋರ್‌ಗಳಲ್ಲಿ ಸಕ್ಕರೆ ಕೊಳ್ಳಲು ಸರತಿ ಸಾಲಿನಲ್ಲಿ ನಿಂತು ಪಡೆಯಬೇಕಿತ್ತು. ಅದನ್ನು ಮುಕ್ತ ಮಾರುಕಟ್ಟೆಗೆ ಬಿಟ್ಟಿದ್ದರಿಂದ, ಅದರ ಸಮಸ್ಯೆ ನಿವಾರಣೆಯಾಯಿತು. ಅದೇ ರೀತಿಯಾಗಿ ಯೂರಿಯಾ ಗೊಬ್ಬರವನ್ನೂ ಮುಕ್ತ ಮಾರುಕಟ್ಟೆಗೆ ಬಿಡಬೇಕು. ಈ ಕುರಿತು ಸರ್ಕಾರ ಚಿಂತನೆ ನಡೆಸಿ, ಸೂಕ್ತ ಕ್ರಮಕೈಗೊಳ್ಳಬೇಕಿದೆ ಎನ್ನುತ್ತಾರೆ ಪ್ರಗತಿಪರ ರೈತ ರಾಜಶೇಖರ್ ಪಾಟೀಲ್.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು