ವಿಷಮುಕ್ತ ಬೇಸಾಯದಿಂದಲೇ ರೈತನಿಗೆ ಕೃಷಿಯಲ್ಲಿ ನೆಮ್ಮದಿ

KannadaprabhaNewsNetwork |  
Published : Jul 27, 2026, 02:15 AM IST
ಸ | Kannada Prabha

ಸಾರಾಂಶ

ಮ್ಯಾನೋರ್ ಫಾರ್ಮಗೆ ಭೇಟಿ ನೀಡಿದಾಗ ವಿಷಯ ಮಂಡಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಹಗರಿಬೊಮ್ಮನಹಳ್ಳಿ: ಕಳೆನಾಶಕ ಹಾಗೂ ರಾಸಾಯನಿಕಗಳನ್ನು ಬಳಸದೇ ಕೃಷಿ ಮಾಡಲು ಸಾಧ್ಯವಿದೆ. ವಿಷಮುಕ್ತ ಬೇಸಾಯದಿಂದಲೇ ರೈತನಿಗೆ ಕೃಷಿಯಲ್ಲಿ ನೆಮ್ಮದಿ ಸಿಗಲು ಸಾಧ್ಯ ಎಂದು ಮ್ಯಾನೋರ್ ಫಾರ್ಮನ ಸಾವಯವ ಕೃಷಿಕ ವಸಂತ್ ಮಾಲವಿ ಪ್ರತಿಪಾದಿಸಿದರು.

ಇತ್ತೀಚೆಗೆ ಕೊಟ್ಟೂರಿನ ಪ್ರತಿಷ್ಠಿತ ಇಂದು ಶಿಕ್ಷಣ ಸಂಸ್ಥೆಯ ೨೦ ಶಿಕ್ಷಕರ ಜೊತೆಗೆ ೩೦೦ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ನೆಮ್ಮದಿ ಕೃಷಿ ಅಭ್ಯಸಿಸಲು ಇವರ ಮ್ಯಾನೋರ್ ಫಾರ್ಮಗೆ ಭೇಟಿ ನೀಡಿದಾಗ ವಿಷಯ ಮಂಡಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಮಕ್ಕಳಿಗೆ ತೋಟ ಸುತ್ತಾಡಿಸಿ ಕಳೆದ ೮ ವರ್ಷಗಳಿಂದ ತಾವು ಬೆಳೆಸಿರುವ ಮರಗಳು ಮತ್ತು ಹಣ್ಣಿನ ಗಿಡಗಳನ್ನು ಪರಿಚಯಿಸಿದರು. ಸಾವಯವ ಕೃಷಿಯ ಲಾಭ ಕುರಿತು ಮಾಹಿತಿ ನೀಡುತ್ತಾ ನಡೆದರು.

ಕೃಷಿ ಸುಭಿಕ್ಷವಾಗಿದ್ದರೆ ಮಾತ್ರ ಬದುಕಿನಲ್ಲಿ ಖುಷಿಯಾಗಿರಲು ಸಾಧ್ಯ. ರೈತನ ವೆಚ್ಚಗಳು ತಗ್ಗಬೇಕು. ಅರಣ್ಯ ಕೃಷಿ ಸಹಿತ ಸಹಜ ಮತ್ತು ಸಾವಯವ ಕೃಷಿಗೆ ಪ್ರತಿ ರೈತರು ತೆರೆದುಕೊಳ್ಳಬೇಕು. ಬೆಳೆಯುವ ಮುನ್ನ ಸಜೀವ ಮಣ್ಣನ್ನು ಬೆಳೆಸಿ ಉಳಿಸಿಕೊಳ್ಳುವ ಬಗ್ಗೆ ಗಂಭೀರವಾಗಿ ಚಿಂತಿಸಬೇಕು. ಈ ನಿಟ್ಟಿನಲ್ಲಿ ರೈತರು ಕಾರ್ಯೋನ್ಮುಖರಾಗಬೇಕು ಎಂದು ವಿವರಿಸಿದರು.

ತಮ್ಮ ತೋಟದಲ್ಲಿ ಬೆಳೆಸಲಾಗಿರುವ ಔಷಧೀಯ ಸಸ್ಯಗಳ ಜೊತೆಗೆ ಬೆಳೆಯುವ ಕಳೆ ಸಸ್ಯಗಳನ್ನು ತೋರಿಸುತ್ತಾ ಕಳೆ ಸಸ್ಯಗಳಿಂದಾಗುವ ಆರೋಗ್ಯಕರ ಲಾಭಗಳನ್ನು ವಿದ್ಯಾರ್ಥಿಗಳಲ್ಲಿ ಮನದಟ್ಟು ಮಾಡುವ ಜೊತೆಗೆ ವಿಷಮುಕ್ತ ಬೆಳೆಗಳ ಮೂಲಕ ವಿಷಮುಕ್ತ ಆಹಾರ ಮತ್ತು ಆರೋಗ್ಯ ಲಭಿಸುತ್ತದೆ ಎಂದರು.

ವಸಂತ್ ಮಾಲವಿ ವಿಷಯ ಮಂಡಿಸುತ್ತಿದ್ದಾಗ ಬಹುತೇಕ ಕೃಷಿಕರ ಮಕ್ಕಳೇ ಹೆಚ್ಚಾಗಿದ್ದ ವಿದ್ಯಾರ್ಥಿಗಳು ತಮ್ಮ ತಮ್ಮ ಪುಸ್ತಕಗಳಲ್ಲಿ ಟಿಪ್ಪಣಿ ಮಾಡುತ್ತಾ ನಡೆದರು. ಉಳುಮೆ ಇಲ್ಲದ ಪ್ರತಿ ಮರದ ಬುಡದಲ್ಲಿರುವ ತರಗೆಲೆಗಳನ್ನು ಸರಿಸಿ ಮಣ್ಣಿನ ಪರಿಮಳವನ್ನು ಆಘ್ರಾಣಿಸಿ ಅಚ್ಚರಿಗೊಳಗಾದರು. ಕೃಷಿ ಪಯಣದುದ್ದಕ್ಕೂ ವಿದ್ಯಾರ್ಥಿಗಳು ನೆಮ್ಮದಿ ಕೃಷಿ ಕುರಿತ ಕೇಳಿದ ಎಲ್ಲ ಪ್ರಶ್ನೆಗಳಿಗೆ ಮಾಲವಿ ದಂಪತಿಗಳು ಉತ್ತರಿಸಿದರು.

ಪ್ರಾಂಶುಪಾಲರಾದ ಚೇತನಕುಮಾರ್ ಮತ್ತು ಶಿಕ್ಷಕ ಜಗದೀಶ್ ಮತ್ತಿತರರು ಮ್ಯಾನೋರ್ ಫಾರ್ಮ ರಾಜ್ಯದ ಬಹುದೊಡ್ಡ ಮಾದರಿ ಕೃಷಿ ಕೇಂದ್ರವಾಗಿದೆ. ಕೃಷಿ ಕೈಗೊಳ್ಳುವರು ಇವರ ಜಮೀನನ್ನು ಒಮ್ಮೆ ಸುತ್ತಾಡಿದರೆ ಸಾಕು ಹೆಚ್ಚಿನ ಮಾಹಿತಿಯೊಂದಿಗೆ ಹೊರಬರುವ ವಿಶ್ವಾಸ ವ್ಯಕ್ತಪಡಿಸಿದರು. ಬಹುತೇಕ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಮತ್ತೆ ತೋಟಕ್ಕೆ ಭೇಟಿ ನೀಡುವ ಭರವಸೆ ನೀಡಿದಾಗ ಮ್ಯಾನೋರ್ ಫಾರ್ಮನ ಮಾಲವಿ ದಂಪತಿಗಳು ಹರ್ಷದಿಂದ ವಿದ್ಯಾರ್ಥಿಗಳನ್ನು ಬೀಳ್ಕೊಟ್ಟರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀಶೈಲೇಶ್ವರ ವಿದ್ಯಾಕೇಂದ್ರದಲ್ಲಿ ಕಾರ್ಗಿಲ್ ವಿಜಯ್ ದಿವಸ್
ಯುವಜನರಲ್ಲಿ ದೇಶಪ್ರೇಮ ಚಿಗುರಲಿ: ಪ್ರವೀಣ ಕರಾಂಡೆ