ಸಂಡೂರು: ಪಟ್ಟಣದ ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಕನ್ನಡ ಮಾಧ್ಯಮದ ಶಾಲೆಯಲ್ಲಿ ಭಾನುವಾರ ಕಾರ್ಗಿಲ್ ವಿಜಯ್ ದಿವಸವನ್ನು ಆಚರಿಸಲಾಯಿತು.

ಭಾರತೀಯ ಸೇನೆಯಲ್ಲಿ ೧೬ ವರ್ಷ ಸೇವೆ ಸಲ್ಲಿಸಿರುವ ಮಾಜಿ ಸೈನಿಕ ವಿನಾಯಕ ರಾವ್ ನಿಕ್ಕಂ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಭಾರತೀಯ ಸೇನೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಅವಕಾಶಗಳಿವೆ. ವಿದ್ಯಾರ್ಥಿಗಳು ತಮ್ಮ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಸಮವಸ್ತ್ರ ಧರಿಸಿದಾಗ ದೇಶಭಕ್ತಿಯ ಭಾವನೆ ಮತ್ತಷ್ಟು ಗಾಢವಾಗುತ್ತದೆ ಎಂದರು.

ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ವೀರೇಂದ್ರಕುಮಾರ್ ಮಾತನಾಡಿ, ಕುದಿಯದ ರಕ್ತ ರಕ್ತವೇ ಅಲ್ಲ. ದೇಶಕ್ಕಾಗಿ ಬಾರದ ಬದುಕು ಬದುಕೇ ಅಲ್ಲ ಎಂಬ ಕ್ರಾಂತಿಕಾರಿಗಳ ಸಂದೇಶವನ್ನು ಉಲ್ಲೇಖಿಸಿ, ವಿದ್ಯಾರ್ಥಿಗಳು ರಾಷ್ಟ್ರಪ್ರೇಮ ಮತ್ತು ದೇಶಸೇವೆಯ ಮನೋಭಾವ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.

ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರ ಯೋಧರಿಗೆ ಮೇಣದ ಬತ್ತಿಯನ್ನು ಬೆಳಗಿಸಿ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು. ೬ನೇ ತರಗತಿ ವಿದ್ಯಾರ್ಥಿನಿ ಸಾಕ್ಷಿ ಹೊರ್ತಿ ಹಾಗೂ ತಂಡದವರಿಂದ ದೇಶಭಕ್ತಿ ಗೀತ ಗಾಯನ ನಡೆಯಿತು. ವಿದ್ಯಾರ್ಥಿಗಳು ಪ್ರದರ್ಶಿಸಿದ ದೇಶಕ್ಕಾಗಿ ನಾವು ರೂಪಕವು ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ನರ್ಸರಿ ಮಕ್ಕಳ ವಂದೇ ಮಾತರಂ ನೃತ್ಯ ರೂಪಕ ಹಾಗೂ ೬ ಮತ್ತು ೭ನೇ ತರಗತಿಯ ವಿದ್ಯಾರ್ಥಿನಿಯರಾದ ಖುಷಿ ಮತ್ತು ಪ್ರೇಮ ತಂಡದಿಂದ ಪ್ರದರ್ಶಿಸಲ್ಪಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರನ್ನು ಆಕರ್ಷಿಸಿದರು.

ಬಸವನಗೌಡ ಟಿ.ಆರ್. ಸ್ವಾಗತಿಸಿದರು. ದೇವೇಂದ್ರಪ್ಪ ಸೊಬಟಿ ಕಾರ್ಯಕ್ರಮ ನಿರೂಪಿಸಿದರು. ಸುನಂದಾ ವಂದಿಸಿದರು. ಪ್ರೌಢ ಶಾಲೆಯ ಸಂಯೋಜಕಿ ರೂಪಾ ಸಿ.ಆರ್, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.


ಸಂಡೂರಿನ ಶ್ರೀಶೈಲೇಶ್ವರ ವಿದ್ಯಾಕೇಂದ್ರದಲ್ಲಿ ಭಾನುವಾರ ನಡೆದ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ವಿನಾಯಕ ರಾವ್ ನಿಕ್ಕಂ ಅವರನ್ನು ಸನ್ಮಾನಿಸಲಾಯಿತು.