- ಚನ್ನಗಿರಿ ಪಟ್ಟಣದ ಸರ್ಕಾರಿ ಆಸ್ಪತ್ರೆ, ಕೆರೆಬಿಳಚಿ ಮೊರಾರ್ಜಿ ಶಾಲೆಗೆ ಭೇಟಿ

- ಅಮ್ಮನಗುಡ್ಡದ ದೇಗುಲ, ದೇವರಹಳ್ಳಿ ಲಕ್ಷ್ಮೀರಂಗನಾಥ ದೇಗುಲಕ್ಕೂ ಭೇಟಿ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ, ಕೆರೆಬಿಳಚಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಅಮ್ಮನಗುಡ್ಡದ ದೇವಾಲಯ, ದೇವರಹಳ್ಳಿ ಶ್ರೀ ಲಕ್ಷ್ಮೀರಂಗನಾಥ ಸ್ವಾಮಿ ದೇವಾಲಯಕ್ಕೆ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠಲ ರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಶುಕ್ರವಾರ ಬೆಳಗ್ಗೆ ಭೇಟಿ ನೀಡಿ, ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದರು.


ಚನ್ನಗಿರಿ ಸರ್ಕಾರಿ ಆಸ್ಪತ್ರೆಯ ಪ್ರತಿ ವಾರ್ಡ್‌ಗಳಿಗೆ ಡಿಸಿ ಅವರು ತೆರಳಿ ಆಡಳಿತಾಧಿಕಾರಿಗಳಿಂದ ಹೊರರೋಗಿಗಳ ಬಗ್ಗೆ ಮಾಹಿತಿ ಪಡೆದರು. ಹೆರಿಗೆ ವಿಭಾಗಕ್ಕೆ ಭೇಟಿ ನೀಡಿ ಪ್ರಸೂತಿ ವೈದ್ಯೆ ಡಾ.ಅಮೂಲ್ಯ ಅವರಿಂದ ಪ್ರತಿ ತಿಂಗಳು ಎಷ್ಟು ಹೆರಿಗೆ ಮಾಡಿಸುತ್ತೀರಿ ಎಂಬ ಬಗ್ಗೆ ಮಾಹಿತಿ ಪಡೆದು ಸಿಬ್ಬಂದಿ ಕೊರತೆ ಬಗ್ಗೆ ವಿಚಾರಿಸಿದರು. ಆಗ ಶಸ್ತ್ರಚಿಕಿತ್ಸೆ ಮಾಡಿ ಹೆರಿಗೆ ಮಾಡಿಸುವಾಗ ಗರ್ಭಿಣಿ ಸ್ತ್ರೀಯರಿಗೆ ಅನಸ್ತೇಷಿಯಾ ಚುಚ್ಚುಮದ್ದನ್ನು ನೀಡುವ ವೈದ್ಯರ ಕೊರತೆ ಇದೆ ಎಂದು ವೈದ್ಯರು ಮಾಹಿತಿ ನೀಡಿದರು. ಈ ಬಗ್ಗೆ ನಮ್ಮ ಕಚೇರಿಗೆ ಪತ್ರ ಬರೆಯಿರಿ ಎಂದು ಆಸ್ಪತ್ರೆ ಆಡಳಿತಾಧಿಕಾರಿ ಡಾ.ಚಂದ್ರಪ್ಪ ಅವರಿಗೆ ಸೂಚನೆ ನೀಡಿದರು. ಈ ಆಸ್ಪತ್ರೆಗೆ ಪ್ರತಿದಿನ 600ರಿಂದ 700 ಹೊರರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡಿರುವ ಬಗ್ಗೆ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದರು.

ಅಮ್ಮನಗುಡ್ಡದಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ. ಈ ಬಗ್ಗೆ ಜಿಲ್ಲಾ ಎಸ್‌ಪಿ ಜತೆ ಭೇಟಿ ನೀಡಿ ಟ್ರಾಫಿಕ್ ಕಿರಿಕಿರಿ ತಪ್ಪಿಸುವ ಜೊತೆಗೆ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾಗಳ ಅಳವಡಿಕೆ, ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಪೊಲೀಸ್ ಚೆಕ್ ಪೋಸ್ಟ್ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆಸಲಾಗಿದೆ ಎಂದರು.

ಸುಪ್ರೀಂ ಕೋರ್ಟ್ ಮತ್ತು ರಾಜ್ಯ ಸರ್ಕಾರದ ಆದೇಶದಂತೆ ಚನ್ನಗಿರಿ ಪಟ್ಟಣದಲ್ಲಿಯೂ ಪುಟ್ಪಾತ್‌ ಒತ್ತುವರಿ ತೆರವು ಕಾರ್ಯ ನಡೆಯಲಿದೆ. ಪುಟ್‌ಪಾತ್‌ ವ್ಯಾಪಾರಿಗಳು ವಾಹನಗಳು ಹಾಗೂ ಪಾದಚಾರಿಗಳ ಸುಗಮ ಸಂಚಾರಕ್ಕೆ ಸಹಕಾರ ನೀಡಬೇಕು. ಚನ್ನಗಿರಿ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲು ಸರ್ಕಾರದ ಹಲವಾರು ಮಾನದಂಡಗಳಿವೆ. ಈ ಬಗ್ಗೆ ಈಗಾಗಲೇ ಜಿಲ್ಲೆಯ ಎಲ್ಲ ತಹಸೀಲ್ದಾರ್‌ಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಮಾತನಾಡಿ, ನಲ್ಲೂರು ಗ್ರಾಮದಲ್ಲಿ ಪೊಲೀಸ್ ಠಾಣೆ ತೆರೆಯಲು ಕಳೆದ 10 ವರ್ಷಗಳಿಂದ ಬೇಡಿಕೆ ಇದೆ. ಹೊಸ ಪೊಲೀಸ್ ಠಾಣೆಯನ್ನು ತೆರೆಯಲು ಇರುವ ಮಾನದಂಡದಂತೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭ ತಹಶೀಲ್ದಾರ್ ಎನ್.ಜೆ. ನಾಗರಾಜ್, ಸಿಪಿಐ ರವೀಶ್, ತಾಪಂ ಕಾರ್ಯನಿರ್ವಾಹಕಾಧಿಕಾರಿ ಪ್ರಕಾಶ್, ರಾಜಸ್ವ ನಿರೀಕ್ಷಕ ಸಿದ್ದರಾಮೇಶ್, ಸೋಮಶೇಖರ್ ಮೊದಲಾದವರು ಹಾಜರಿದ್ದರು.

- - - (** ಈ ಫೋಟೋ-ಕ್ಯಾಪ್ಷನ್‌ ಪ್ಯಾನೆಲ್‌ಗೆ ಬಳಸಿ)

-24ಕೆಸಿಎನ್ಜಿ1,2:

ಚನ್ನಗಿರಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ, ಜಿಪಂ ಸಿಇಒ ಗಿತ್ತೆ ಮಾದವ ವಿಠಲ ರಾವ್, ಜಿಲ್ಲಾ ಎಸ್‌ಪಿ ಶೇಖರ್ ಭೇಟಿ ನೀಡಿ ವ್ಯಸವ್ಥೆಗಳ ಪರಿಶೀಲಿಸಿದರು. ಈ ವೇಳೆ ಸಿಪಿಐ ರವೀಶ್, ತಾಪಂ ಇಒ ಪ್ರಕಾಶ್, ರಾಜಸ್ವ ನಿರೀಕ್ಷಕ ಸಿದ್ದರಾಮೇಶ್, ಸೋಮಶೇಖರ್ ಮೊದಲಾದವರು ಇದ್ದರು.