- ೨೦ ವರ್ಷಗಳಿಂದ ನೆಮ್ಮದಿ ಇಲ್ಲದೇ ಅಲೆದಾಟ: ಆಂಜನೇಯ ಹೇಳಿಕೆ । ಜಮೀನು ಮರುಮಂಜೂರಿನಲ್ಲಿ ಅಕ್ರಮ: ಆರೋಪ
- - -ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಸರ್ಕಾರಿ ಇನಾಂ ಜೋಡಿ ಜಮೀನು ರೀಗ್ರಾಂಟ್ ಮಾಡಿದ್ದು ತಪ್ಪಾಗಿದೆ. ಆ ಕಾರಣಕ್ಕೆ ಜಮೀನಿನ ವಿಸ್ತೀರ್ಣವು ಸಹ ತಪ್ಪಾಗಿದ್ದು, ತಂಟೆ ತಕರಾರು, ವಾಗ್ವಾದಗಳು ನಡೆಯುತ್ತಿವೆ ಎಂದು ಕುಂಬಳೂರಿನ ರೈತ ಎ.ಕೆ. ಆಂಜನೇಯ ಆರೋಪಿಸಿದರು.ಪಟ್ಟಣದ ನೀರಾವರಿ ಇಲಾಖೆ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ೧೯೪೦ರಲ್ಲಿ ಸರ್ಕಾರ ಕುಂಬಳೂರು ರಿ.ಸರ್ವೆ ನಂಬರ್ ೧೭೯ ಮತ್ತು ೧೮೦ರಲ್ಲಿ ಕೆಲವರಿಗೆ ಈ ಜೋಡಿ ಜಮೀನನ್ನು ಮಂಜೂರು ಮಾಡಲಾಗಿದೆ. ೧೯೭೪ರಲ್ಲಿ ರೀಗ್ರಾಂಟ್ ಮಾಡಿದೆ. ಆದರೆ, ಕೆಲವರು ಅನುಭವಕ್ಕಿಂತ ಜಾಸ್ತಿ ಜಮೀನನ್ನು ರೀಗ್ರಾಂಟ್ ಮಾಡಿಸಿಕೊಂಡು ವಿಸ್ತೀರ್ಣದಲ್ಲೂ ವ್ಯತ್ಯಾಸವಾಗಿದೆ. ಜಮೀನು ಮಂಜೂರು ಮಾಡಿಕೊಂಡವರು ಬೇರೆಯವರಿಗೆ ಪರಭಾರೆ ಮಾಡಿದ್ದಾರೆ. ಜಮೀನಿನ ಮೂಲ ಮಂಜೂರುದಾರರು ಸ್ಥಳದಲ್ಲಿ ಇಲ್ಲ. ಕೆಲವು ಅನುಭವದಾರರಿಗೆ ರೀಗ್ರಾಂಟ್ ಮಂಜೂರು ಆಗಿಲ್ಲ. ಈ ಕಾರಣಕ್ಕೆ ಹಲವು ವರ್ಷಗಳಿಂದ ಎಕೆ ಜನರಲ್ಲಿ ತಕರಾರು ಉದ್ಭವವಾಗಿದೆ ಎಂದು ದೂರಿದರು.
ತಹಸೀಲ್ದಾರ್, ಭೂ ದಾಖಲೆಗಳ ಅಧಿಕಾರಿಗಳು ಹಾಗೂ ರಾಜಸ್ವ ನಿರೀಕ್ಷಕರು ಅನೇಕ ಬಾರಿ ಈ ಬಗ್ಗೆ ಕ್ಷೇತ್ರದ ಪರಿಶೀಲನೆ ಆಧಾರದ ಮೇಲೆ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಗ್ರಾಮದ ಕೆಲವರು ದಾಖಲೆ ಸೃಷ್ಠಿ ಮಾಡಿಕೊಂಡು ಅನುಭವದಾರರಲ್ಲದೇ ಇದ್ದರೂ ಇಲ್ಲ ಸಲ್ಲದ ಮನವಿ ಸಲ್ಲಿಸಿ ವಿನಾಕಾರಣ ಸಮಸ್ಯೆಗೆ ಕಾರಣವಾಗಿದ್ದು, ಈ ಆಸ್ತಿಯನ್ನು ಕಬಳಿಸಲು ಮತ್ತು ತೊಂದರೆ ನೀಡುವ ಸಲುವಾಗಿ ಸಂಚು ಮಾಡಿದ್ದಾರೆ. ಅಧಿಕಾರಿಗಳ ಜತೆ ಶಾಮೀಲಾಗಿ ಕುಮ್ಮಕ್ಕಿನಿಂದ ದಾಖಲೆ ತಿದ್ದಿ ಮೋಸ ಮಾಡಿದ್ದಾರೆ. ಅಂಥವರ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ್ದೇನೆ. ಅಂಥವರ ಅರ್ಜಿ ವಜಾ ಮಾಡಲು ತಹಸೀಲ್ದಾರ್ ಮತ್ತು ಉಪವಿಭಾಗಾಧಿಕಾರಿ ನ್ಯಾಯಾಲಯಗಳು ವಜಾ ಮಾಡಲು ಆದೇಶ ಮಾಡಿವೆ ಎಂದರು.
ಸದ್ಯದ ಪರಿಸ್ಥಿತಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಆಗುತ್ತಿದೆ. ಸದರಿ ಜಮೀನಿನ ಅಳತೆಯಾಗಲು ಅವಕಾಶವಿಲ್ಲ ಎಂದು ಕಂದಾಯ ಅಧಿಕಾರಿಗಳು ಹೇಳಿದ್ದಾರೆ. ನ್ಯಾಯಾಲಯದಲ್ಲಿರುವ ಜಮೀನು ಹೊರತುಪಡಿಸಿ, ೨೦ ವರ್ಷಗಳಿಂದ ನೆಮ್ಮದಿ ಇಲ್ಲದೇ ಅಲೆದಾಡಿದ್ದೇವೆ. ಇನ್ನು ವಿಳಂಬ ಮಾಡದೇ ಪ್ರಾಮಾಣಿಕ ಅಧಿಕಾರಿಗಳಿಂದ ಕುಂಬಳೂರು ಗ್ರಾಮದ ರಿ.ಸರ್ವೆ ನಂಬರ್ ೧೭೯ ಮತ್ತು ೧೮೦ರಲ್ಲಿನ ಜಮೀನನ್ನು ಅಳತೆ ಮಾಡಿಸಿ ದಾಖಲೆಗಳನ್ನು ಪರಿಶೀಲಿಸಿ ಅರ್ಹ ಅನುಭವದಾರರಿಗೆ ಪಹಣಿ ನೀಡಬೇಕಾಗಿ ಎಕೆ ಆಂಜನೇಯ ಕೋರಿದರು.
ಸುದ್ದಿಗೋಷ್ಠಿಯಲ್ಲಿ ಎಚ್.ಆಂಜನೇಯ ಇದ್ದರು.- - -
-ಚಿತ್ರ-೧: ಎಕೆ ಆಂಜನೇಯ, ಎಚ್. ಆಂಜನೇಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.