- ಕುಟುಂಬದೊಂದಿಗೆ ಗಾಡಿ, ಟ್ರ್ಯಾಕ್ಟರ್‌ಗಳಲ್ಲಿ ತೆರಳಿ, ಭೂಮಿ-ಫಸಲಿಗೆ ವಿಶೇಷ ಪೂಜೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ವಾರದಿಂದ ವಾಯುಭಾರ ಕುಸಿತದಿಂದ ತಾಲೂಕಿನಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಪರಿಣಾಮ ಈ ಬಾರಿ ರೈತರು ಭೂಮಿಪೂಜೆಯನ್ನು ಆಚರಿಸಲು ಕೊಂಚ ಸಂಕಷ್ಟ ಎದುರಾಯಿತು. ಆದರೂ, ಹಬ್ಬ ಆಚರಣೆ ವಿಶೇಷ ಸಂಪ್ರದಾಯ ಆಗಿದ್ದರಿಂದ ಕುಟುಂಬ ಸಮೇತರಾಗಿ ಭೂಮಿಪೂಜೆ ನೆರವೇರಿಸಿ, ಭೂತಾಯಿಯನ್ನು ನಮಿಸಿದರು.
ಗುರುವಾರ ಬೆಳಗ್ಗೆಯಿಂದ ಮಳೆರಾಯ ಸೀಗೆಹುಣ್ಣಿಮೆ ಆಚರಣೆಗೆ ಎಂಬಂತೆ ತುಸು ಬಿಡುವು ಕೊಟ್ಟಿದ್ದ. ಇದರಿಂದ ರೈತರು ಮುಂಜಾನೆಯಿಂದಲೇ ಹಬ್ಬದ ತಯಾರಿ ಮಾಡಿಕೊಂಡು, ಕುಟುಂಬ ಸಮೇತರಾಗಿ ತಮ್ಮ ಹೊಲ-ಗದ್ದೆ, ತೋಟಗಳಿಗೆ ತೆರಳಿದರು. ಸಕಲ ಐಶ್ವರ್ಯವನ್ನು ಕರುಣಿಸುವ ಭೂಮಿ ತಾಯಿಗೆ ನಮಿಸಿದರು. ಭತ್ತ, ಮೆಕ್ಕೆಜೋಳ, ಅಡಕೆ ಮರ, ತೆಂಗು ಹೀಗೆ ವಿವಿಧ ಬೆಳೆಗಳಿಗೆ ಸೀರೆಯುಡಿಸಿ, ಸಿಂಗರಿಸಿ,ಪೂಜಿಸಿದರು. ಚರಗ (ಖಾದ್ಯ) ಚೆಲ್ಲುವ ಮೂಲಕ ಭೂಮಿ ತಾಯಿಯನ್ನು ಸಂತಷ್ಟಪಡಿಸುವ ಆಚರಣೆ ನಡೆಸಿದರು.ಪ್ರತಿವರ್ಷ ಸೀಗೆ ಹುಣ್ಣಿಮೆ ದಿನ ರೈತರು ಗಾಡಿ ಹಾಗೂ ಟ್ರ್ಯಾಕ್ಟರ್‌ಗಳನ್ನು ಸಿಂಗರಿಸಿಕೊಂಡು, ಕುಟುಂಬದವರ ಸಮೇತ ಜಮೀನಿಗೆ ಬಂದು ಫಸಲಿಗೆ ಪೂಜೆ ಮಾಡಿ, ಅನಂತರ ತಾಯಿಗೆ ಉಡಿ ತುಂಬಿ ಭೂಮಿ ತಾಯಿಯನ್ನು ಶ್ರದ್ಧೆಯಿಂದ ಪೂಜಿಸಿ, ಪ್ರಾರ್ಥಿಸುವ ವಿಶೇಷ ಆಚರಣೆ ಸೀಗೆಹುಣ್ಣಿಮೆ. ಪ್ರತಿವರ್ಷ ಉತ್ತಮ ಮಳೆ-ಬೆಳೆ ಕೊಟ್ಟು, ಸಕಲ ಜೀವರಾಶಿಗಳನ್ನು ಕಾಪಾಡು ತಾಯಿ ಎಂದು ರೈತರು ಬೇಡಿಕೊಳ್ಳುವ ಆಚರಣೆಯಾಗಿದೆ. ತಾಲೂಕಿನಲ್ಲಿ ಈ ಹಬ್ಬ ರೈತರು ಸಂತಸದಿಂದ ಆಚರಿಸಿದರು.
- - - -17ಎಚ್.ಎಲ್.ಐ2: