ಕನ್ನಡಪ್ರಭ ವಾರ್ತೆ ಮದ್ದೂರು
ಒಂದೊಂದು ರಾಜ್ಯ ಮತ್ತು ಪ್ರಾಂತ್ಯದಲ್ಲಿ ಟನ್ ಕಬ್ಬಿಗೆ ಬೇರೆ ಬೇರೆ ದರ ನಿಗದಿ ಮಾಡಿ ಕೇಂದ್ರ ಸರ್ಕಾರ ರೈತರಿಗೆ ಮೋಸ ಮಾಡುತ್ತಿದೆ ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್ ಹಾಗೂ ಅಜ್ಜಹಳ್ಳಿ ರಾಮಕೃಷ್ಣ ದೂರಿದ್ದಾರೆ.ಈ ಕುರಿತು ಹೇಳಿಕೆ ನೀಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಮಿ ನಾಥನ್ ವರದಿ ಜಾರಿಗೆ ತಂದಿದ್ದರೆ ಟನ್ ಕಬ್ಬಿಗೆ 5 ಸಾವಿರ ಸಿಗುತ್ತಿತ್ತು. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನೆ ಮಾಡಲಿ ಎಂದು ಆಗ್ರಹಿಸಿದ್ದಾರೆ.
ಕಬ್ಬು ಹಾಗೂ ಇದರಿಂದ ತಯಾರಾಗುವ ಉತ್ಪನ್ನಗಳನ್ನು ಅಬಕಾರಿ ವ್ಯಾಪ್ತಿಯಿಂದ ಹೊರಗಿಟ್ಟರೆ ಟನ್ ಕಬ್ಬಿಗೆ ಗ್ರಾಂ ಚಿನ್ನದ ದರದಷ್ಟು ರೈತರಿಗೆ ಸಿಗಲಿದೆ. ಕಬ್ಬು ಮತ್ತು ಅದರ ಉತ್ಪನ್ನಗಳನ್ನು ಅಬಕಾರಿ ವ್ಯಾಪ್ತಿಯಿಂದ ವಿನಾಯಿತಿ ಮಾಡಲು ಕೇಂದ್ರ ಸರ್ಕಾರ ಮಾಡಬೇಕು. ಇಳುವರಿ ಆಧಾರದ ಮೇಲೆ ಕಬ್ಬಿನ ದರ ನಿಗದಿ ಮಾಡದೆ ಮೋಸದ ಮಾನದಂಡವನ್ನು ಕೇಂದ್ರ ಸರ್ಕಾರ ಪಾಲಿಸುತ್ತಾ ಬಂದಿದೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದ್ದಾರೆ.ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಲು ಕೇಂದ್ರ ಸರ್ಕಾರ ಅಡ್ಡಿಯಾಗಿದೆ. ಉತ್ಪಾದನ ವೆಚ್ಚ ಆದರಿಸಿ ಬೆಲೆ ನಿಗದಿ ಮಾಡಿಲ್ಲ. ಡಾ.ಸ್ವಾಮಿನಾಥನ್ ವರದಿ ಜಾರಿಗೆ ತಂದಿದ್ದರೆ ರೈತರಿಗೆ ಅನ್ಯಾಯವಾಗುತ್ತಿರಲಿಲ್ಲ. ಕೇಂದ್ರ ಸರ್ಕಾರ ಮಾತು ತಪ್ಪಿದೆ ಎಂದು ಆರೋಪಿಸಿದ್ದಾರೆ.
ಇಳುವರಿ ಆಧಾರದ ಮೇಲೆ ದರ ನಿಗದಿ ಮಾಡಿದರೆ ಎಲ್ಲಾ ಕಡೆ ಕಬ್ಬಿಗೆ ಏಕರೂಪ ದರ ಸಿಗಲಿದೆ. ಉತ್ತರ ಕರ್ನಾಟಕದಲ್ಲಿ ಕಬ್ಬು ಕಟಾವು, ಸಾಗಾಣಿಕಾ ವೆಚ್ಚ ಕಾರ್ಖಾನೆಗಳೇ ಭರಿಸುತ್ತವೆ. ದಕ್ಷಿಣ ಕರ್ನಾಟಕದಲ್ಲಿ ರೈತರೇ ಭರಿಸಬೇಕು ಎಂದು ಹೇಳಿದ್ದಾರೆ.ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರಿಗೆ ರೈತರೊಂದಿಗೆ ಚಳವಳಿ ಮಾಡುವಲು ಯಾವುದೇ ನೈತಿಕತೆ ಇಲ್ಲ. ಆರ್.ಅಶೋಕ್ ಗೆ ರೈತರ ಬಗ್ಗೆ ಕಾಳಜಿ ಇದ್ದರೆ ಉತ್ಪಾದನಾ ವೆಚ್ಚದ ಆಧಾರದ ಮೇಲೆ ದರ ನಿಗದಿ ಮಾಡಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲಿ ಎಂದು ಒತ್ತಾಯಿಸಿದ್ದಾರೆ.