ನೀರಿಗಾಗಿ ಕಾಲುವೆ ಸ್ವಚ್ಛಗೊಳಿಸುತ್ತಿರುವ ರೈತರು

KannadaprabhaNewsNetwork |  
Published : Oct 12, 2026, 03:00 AM IST
ಸ್ವಚ್ಚತೆ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ನಾಲತವಾಡ: ಭೀಕರ ಬರಗಾಲದಿಂದ ಬೆಳೆಗಳು ಒಣಗುತ್ತಿರುವ ಹಿನ್ನೆಲೆಯಲ್ಲಿ, ಕೈಗೆ ಬಂದ ಬೆಳೆಯನ್ನು ಉಳಿಸಿಕೊಳ್ಳಲು ರೈತರೇ ಸ್ವತಃ ಕಾಲುವೆ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದ್ದಾರೆ.

ಕನ್ನಡಪ್ರಭ ವಾರ್ತೆ ನಾಲತವಾಡ: ಭೀಕರ ಬರಗಾಲದಿಂದ ಬೆಳೆಗಳು ಒಣಗುತ್ತಿರುವ ಹಿನ್ನೆಲೆಯಲ್ಲಿ, ಕೈಗೆ ಬಂದ ಬೆಳೆಯನ್ನು ಉಳಿಸಿಕೊಳ್ಳಲು ರೈತರೇ ಸ್ವತಃ ಕಾಲುವೆ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದ್ದಾರೆ.

ಚಿಮ್ಮಲಗಿ ಏತ ನೀರಾವರಿ ಯೋಜನೆಯ ಪಶ್ಚಿಮ ಭಾಗದ 13ಎ ಕಾಲುವೆಯಲ್ಲಿ ಹೂಳು ಹಾಗೂ ಗಿಡಗಂಟಿ ತುಂಬಿಕೊಂಡಿರುವುದರಿಂದ ನೀರು ಸರಾಗವಾಗಿ ಹರಿಯುತ್ತಿಲ್ಲ. ನಾಲತವಾಡ, ಅರಸನಾಳ, ನೆರಬಂಚಿ, ಜೈನಾಪುರ, ಮಾವಿನಭಾವಿ, ಕಿಲಾರಹಟ್ಟಿ ಹಾಗೂ ಆರೇಶಂಕರ ಗ್ರಾಮದ ಸುಮಾರು 30ಕ್ಕೂ ಹೆಚ್ಚು ರೈತರು ಭಾನುವಾರ ಬೆಳಗ್ಗೆ ಕಾಲುವೆಗೆ ಇಳಿದು ಸ್ವಚ್ಛತಾ ಕಾರ್ಯ ಕೈಗೊಂಡರು. ವಿಷಜಂತುಗಳ ಅಪಾಯವನ್ನೂ ಲೆಕ್ಕಿಸದೆ ಹೂಳು ಮತ್ತು ಗಿಡಕಂಟಿಗಳನ್ನು ತೆರವುಗೊಳಿಸಿ ನೀರಿನ ಹರಿವಿಗೆ ಅನುಕೂಲವಾಗುವಂತೆ ಅನುವು ಮಾಡಿದರು.

ಈ ಬಾರಿ ಮಳೆ ಕೈಕೊಟ್ಟಿರುವುದರಿಂದ ಬಿತ್ತನೆ ಮಾಡಿದ ಬೆಳೆಗಳು ಒಣಗುತ್ತಿದ್ದು, ರೈತರಿಗೆ ಕಾಲುವೆ ನೀರೇ ಆಸರೆಯಾಗಿದೆ. ಆದರೆ, ಕಾಲುವೆಗೆ ನೀರು ಹರಿಸಿ ಮೂರು ದಿನ ಕಳೆದರೂ ನಾಲತವಾಡ ಭಾಗಕ್ಕೆ ನೀರು ತಲುಪಿಲ್ಲ. ಇದರಿಂದ ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುವಂತಾಗಿದೆ.

14ವರ್ಷಗಳಿಂದ ಹೂಳು ತೆಗೆಸಿಲ್ಲ:

ಚಿಮ್ಮಲಗಿ ಏತ ನೀರಾವರಿ ಕಾಲುವೆ ನಿರ್ಮಾಣವಾಗಿ ಸುಮಾರು 14 ವರ್ಷಗಳಾಗಿವೆ. ರೈತರ ಪ್ರಕಾರ, ಈ ಅವಧಿಯಲ್ಲಿ ಕಾಲುವೆಯ ಹೂಳು ಸಮರ್ಪಕವಾಗಿ ತೆರವುಗೊಳಿಸಿಲ್ಲ. ಈ ಹಿಂದೆ ಕೂಡ ನೀರಿನ ಹರಿವಿಗೆ ಅಡ್ಡಿಯಾಗಿದ್ದ ಹೂಳನ್ನು ರೈತರೇ ಸ್ವಂತ ಹಣ ಖರ್ಚು ಮಾಡಿ ತೆಗೆಸಿದ್ದರು.

ಬರಗಾಲದ ಹಿನ್ನೆಲೆಯಲ್ಲಿ ಚಿಮ್ಮಲಗಿ ಏತ ನೀರಾವರಿ ಕಾಲುವೆ ಮೂಲಕ ಕೆರೆಗಳನ್ನು ತುಂಬಿಸಲು ನೀರು ಹರಿಸುವಂತೆ ಶಾಸಕ ಸಿ.ಎಸ್.ನಾಡಗೌಡ ಅವರು ಸಚಿವರಿಗೆ ಮನವಿ ಮಾಡಿದ್ದರು. ಅದರಂತೆ ಕಾಲುವೆಗೆ ನೀರು ಹರಿಸಲಾಗಿದ್ದರೂ, ಹೂಳು ಹಾಗೂ ಗಿಡಗಂಟಿಗಳಿಂದಾಗಿ ನೀರು ನಾಲತವಾಡ ಭಾಗಕ್ಕೆ ತಲುಪದಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.ಈ ಹಿನ್ನಲೆಯಲ್ಲಿ ಮಳೆಯಿಲ್ಲದೆ ಬೆಳೆಗಳು ಒಣಗುತ್ತಿರುವ ಸಂದರ್ಭದಲ್ಲಿ ಕಾಲುವೆ ನೀರೂ ಹೊಲಗಳಿಗೆ ತಲುಪದಿರುವುದರಿಂದ ರೈತರೇ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದ್ದಾರೆ. ನೀರಾವರಿ ಇಲಾಖೆ ಅಧಿಕಾರಿಗಳು ಕಾಲುವೆಯ ಹೂಳು ಹಾಗೂ ಗಿಡಗಂಟಿಗಳನ್ನು ತೆರವುಗೊಳಿಸಿ, ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಕಾಲುವೆ ಪಕ್ಕದಲ್ಲೇ ನಮ್ಮ ಜಮೀನುಗಳಿರುವುದರಿಂದ ಕಾಲುವೆ ನೀರನ್ನಾದರೂ ಬಳಸಿ ಬೆಳೆ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ. ರೈತರ ಗೋಳು ಕೇಳುವವರೇ ಇಲ್ಲದಂತಾಗಿದೆ. ಕಾಲುವೆಯಲ್ಲಿ ಹೂಳು ಮತ್ತು ಗಿಡಗಂಟಿಗಳು ಬೆಳೆದು ಮುಂದಿನ ರೈತರಿಗೆ ನೀರು ಹರಿಯುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಜಮೀನಿನಲ್ಲಿ ಬೆಳೆಗಳು ಒಣಗುತ್ತಿವೆ. ಒಮ್ಮೆಯಾದರೂ ನೀರು ಹರಿದರೆ ಒಣಗುತ್ತಿರುವ ಬೆಳೆಗೆ ಮತ್ತೆ ಜೀವ ಬರುತ್ತದೆ ಎಂಬ ಆಶಯದಿಂದ ಈ ಸಾಹಸಕ್ಕೆ ಕೈಹಾಕಿದ್ದೇವೆ. ರೈತರೆಲ್ಲರೂ ಒಗ್ಗೂಡಿ ಗಿಡಕಂಟಿಗಳನ್ನು ತೆರವುಗೊಳಿಸುತ್ತಿದ್ದೇವೆ. ನೀರು ಹರಿಸಿ ಮೂರು ದಿನಗಳಾದರೂ ಮುಂದಿನ ಭಾಗಕ್ಕೆ ನೀರು ತಲುಪುತ್ತಿಲ್ಲ. ಅಧಿಕಾರಿಗಳಿದ್ದರೂ ಇಲ್ಲದಂತಾಗಿದೆ ಎಂದು ರೈತರಾದ ಸಂಗಣ್ಣ ಕುಳಗೇರಿ, ವೀರೇಶ ಅವೂಜಿ ಹಾಗೂ ಅಪ್ಪಣ್ಣ ಗಂಗನಗೌಡರ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್ಲೆಂದರಲ್ಲಿ ಧೂಮಪಾನ, ನಿಯಂತ್ರಣವೇ ಸವಾಲು!
ಸಮಾಜದ ಒಳಿತಿಗಾಗಿ ಸಮರ್ಪಿಸಿಕೊಳ್ಳುವುದೇ ಶಕ್ತಿ ಆರಾಧನೆ: ರಂಭಾಪುರಿ ಜಗದ್ಗುರು