ವಿಮಾ ಪರಿಹಾರ ಹಣ ತಡೆ ಹಿಡಿದಿರುವುದಕ್ಕೆ ರೈತರ ಖಂಡನೆ

KannadaprabhaNewsNetwork |  
Published : Sep 04, 2024, 01:54 AM IST
3ಕೆಎಂಎನ್ ಡಿ19 | Kannada Prabha

ಸಾರಾಂಶ

ಕೆಆರ್‌ಎಸ್‌ ಮತ್ತು ಹೇಮಾವತಿ ಜಲಾಶಯ ಭರ್ತಿಯಾಗಿದ್ದರೂ ಸಹ ಮಾರ್ಕೋನಹಳ್ಳಿ ಜಲಾಶಯದ ಮೂಲಕ ಕೊಪ್ಪ ಭಾಗದ ಶಿಂಷಾ ಎಡದಂಡೆ ಮತ್ತು ಬಲದಂಡೆ ನಾಲೆಗಳ ಮೂಲಕ ನೀರು ಹರಿಸಿ ಬೆಳೆ ರಕ್ಷಣೆ ಮಾಡುವುದು ಸೇರಿ ವಿವಿಧ ಬೇಡಿಕೆಗಳ ಕುರಿತು ರೈತ ಮುಖಂಡರು ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ವಿಮಾ ಪರಿಹಾರದ ಹಣ ತಡೆಹಿಡಿದಿರುವ ಎಸ್ ಬಿಐ ವಿಮಾ ಕಂಪನಿ ವಿರುದ್ಧ ತಾಲೂಕಿನ ಕೊಪ್ಪ ಗ್ರಾಮದಲ್ಲಿ ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು.

ಗ್ರಾಮದ ಬಸ್ ನಿಲ್ದಾಣದಲ್ಲಿ ರೈತರು ರಸ್ತೆ ತಡೆ ನಡೆಸಿ ಧರಣಿ ನಡೆಸಿದರು. ಪ್ರತಿಭಟನೆಯಿಂದಾಗಿ ನಾಗಮಂಗಲ- ಮದ್ದೂರು ಮಾರ್ಗದಲ್ಲಿ ಕೆಲಕಾಲ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ರಾಜ್ಯ ಸರ್ಕಾರ, ಕೃಷಿ ಸಚಿವರು, ಕಂದಾಯ. ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ವಿಮಾ ಕಂಪನಿ ವಿರುದ್ಧ ರೈತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನ ಮಂತ್ರಿಗಳ ಫಸಲ್ ಭೀಮಾ ಯೋಜನೆಯಡಿ ಬೆಳೆ ನಷ್ಟಕೊಳಗಾಗಿರುವ ರೈತರಿಗೆ ನೀಡಬೇಕಾಗಿದ್ದ ಪರಿಹಾರ ಹಣವನ್ನು ತಡೆ ಹಿಡಿದಿರುವ ಎಸ್ ಬಿಐ ವಿಮಾ ಕಂಪನಿಯ ತಾರತಮ್ಯ ನೀತಿಯನ್ನು ಖಂಡಿಸಿದರು.

ಪ್ರಸಕ್ತ ಸಾಲಿನಲ್ಲಿ ಉಂಟಾದ ಬರಗಾಲದಿಂದ ನೀರಿನ ಅಭಾವ ಉಂಟಾಗಿ ಶೇ.40ರಷ್ಟು ಬೆಳೆ ನಷ್ಟವಾಗಿದೆ. ಅಲ್ಲದೆ ಬೆಳೆಗಾಗಿ ಹಾಕಿದ ಬಂಡವಾಳವೂ ಸಿಗದೇ ರೈತರು ಸಾಲ ಮಾಡಿ ಸುಸ್ತಿದಾರರಾಗಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ವಿಮಾ ಕಂಪನಿ ಆತಗೂರು ಹೋಬಳಿ ಹೊರತುಪಡಿಸಿ ಕೊಪ್ಪ, ಸಿ.ಎ. ಕೆರೆ ಹಾಗೂ ಕಸಬಾ ಹೋಬಳಿಗಳಲ್ಲಿ ವಿಮಾ ಪರಿಹಾರ ಹಣವನ್ನು ಬಿಡುಗಡೆ ಮಾಡಿಲ್ಲ ಎಂದು ಕಿಡಿಕಾರಿದರು.

ಕಂಪನಿ ಬಿಡುಗಡೆ ಮಾಡಿರುವ ಪರಿಹಾರದಲ್ಲಿ ಪ್ರತಿ ಎಕರೆ ಭತ್ತಕ್ಕೆ 39.556 ರು. ಬಿಡುಗಡೆ ಮಾಡಬೇಕಾಗಿತ್ತು. ಆದರೆ, ಕೇವಲ 9500 ರು. ವಿಮಾ ಪರಿಹಾರವನ್ನು ನೀಡಿ ಉಳಿದ ಹಣವನ್ನು ತಡೆಹಿಡಿದಿದೆ ಎಂದು ರೈತ ಮುಖಂಡ ಕೀಳಘಟ್ಟ ನಂಜುಂಡಯ್ಯ ಆರೋಪಿಸಿದರು.

ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಮುಂದಿನ ಒಂದು ವಾರದಲ್ಲಿ ರೈತರ ವಿಮಾ ಪರಿಹಾರವನ್ನು ಪಾವತಿ ಮಾಡಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಕೃಷಿ ಇಲಾಖೆ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ನಂತರ ಪ್ರತಿಭಟನಾಕಾರರು ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕೆಆರ್‌ಎಸ್‌ ಮತ್ತು ಹೇಮಾವತಿ ಜಲಾಶಯ ಭರ್ತಿಯಾಗಿದ್ದರೂ ಸಹ ಮಾರ್ಕೋನಹಳ್ಳಿ ಜಲಾಶಯದ ಮೂಲಕ ಕೊಪ್ಪ ಭಾಗದ ಶಿಂಷಾ ಎಡದಂಡೆ ಮತ್ತು ಬಲದಂಡೆ ನಾಲೆಗಳ ಮೂಲಕ ನೀರು ಹರಿಸಿ ಬೆಳೆ ರಕ್ಷಣೆ ಮಾಡುವುದು ಸೇರಿ ವಿವಿಧ ಬೇಡಿಕೆಗಳ ಕುರಿತು ರೈತ ಮುಖಂಡರು ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ನೆಲಮಾಕನಹಳ್ಳಿ ಜಗದೀಶ, ಉಮೇಶ, ರಾಮೇಗೌಡ, ಮಹೇಶ, ಪ್ರಭುಲಿಂಗ, ಗುಡಿಗೆರೆ ಶಿವಲಿಂಗ ಮತ್ತಿತರರು ಪಾಲ್ಗೊಂಡಿದ್ದರು.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''