ಯಾದಗಿರಿ: ರಾಜ್ಯದಲ್ಲಿನ ರೈತರ ಜ್ವಲಂತ ಸಮಸ್ಯೆಗಳು ಹಾಗೂ ರೈತರ ಬೆಳೆಹಾನಿಗೆ ಪರಿಹಾರ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಚರ್ಚಿಸಲು ಕಲಬುರ್ಗಿಯಲ್ಲಿ ಬೃಹತ್ ರೈತರ ದಿನಾಚರಣೆಯ ಅಂಗವಾಗಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಸಂಚಾಲಕ ಕೊಟ್ರೇಶ ಚೌಧರಿ ತಿಳಿಸಿದರು.
ಉತ್ತರ ಕರ್ನಾಟಕ ಕಲ್ಯಾಣ ಕರ್ನಾಟಕ ಭಾಗದ ಅತಿವೃಷ್ಟಿ ಮಳೆಯಿಂದಾದ ಬೆಳೆ ನಷ್ಟ ಪರಿಹಾರ ಎಕರೆಗೆ 25 ಸಾವಿರ ರು., ನೀರಾವರಿ ಬೆಳೆ ನಾಶ ಎಕರೆಗೆ 40 ಸಾವಿರ ರು, ತೋಟಗಾರಿಕೆ ಬೆಳೆ ಹಾನಿಗೆ 60 ಸಾವಿರ ರು. ಕೂಡಲೇ ಪರಿಹಾರ ಬಿಡುಗಡೆ ಮಾಡಬೇಕು, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಯಾಗಬೇಕು, ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಬೇಕು ಎನ್ನುವುದು ಸೇರಿದಂತೆ ಹಲವು ವಿಷಯಗಳ ಕುರಿತು ಸರ್ಕಾರಕ್ಕೆ ಒತ್ತಾಯಿಸಲಾಗುವುದು. ಆದ್ದರಿಂದ ಈ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಭಾಗವಹಿಸುವಂತೆ ಮನವಿ ಮಾಡಿದರು.
ಒಕ್ಕೂಟದ ಜಿಲ್ಲಾ ಸಂಚಾಲಕ ಶಿವಶರಣಪ್ಪ ಹಯ್ಯಾಳ ಸೇರಿದಂತೆ ಅನೇಕರು ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಯಲ್ಲಪ್ಪ ಮಲ್ಲಿಬಾವಿ, ಮರಿಲಿಂಗಪ್ಪ ಅಡ್ಡೋಡಗಿ, ಸಿದ್ದಪ್ಪ ದೀವಳಗುಡ್ಡ, ರಾಮಚಂದ್ರಪ್ಪ ತಳವಾರಗೇರ, ದೇವಿಂದ್ರಪ್ಪ ಗೌಡ ಚಂದಲಾಪುರ, ಭೀಮನಗೌಡ ಚಂದಲಾಪುರ, ರಮೇಶ ವಾಗಣಗೇರಾ, ಹಣಮಂತ ಮಲ್ಲಿಬಾವಿ, ಮೌನೇಶ ಮಲ್ಲಿಬಾವಿ, ಲಕ್ಷ್ಮಣ ತಳವಾರಗೇರ, ವೆಂಕಟೇಶ ಕುಪ್ಪಗಲ್, ನಿಂಗಪ್ಪ ತಳವಾರಗೇರ, ಭೀಮೇಶ ತಳವಾರಗೇರಾ, ಹಣಮಂತ ಪೂಜಾರಿ, ಚಾಂದ ಹುಸೇನಿ ಚಂದಲಾಪುರ ಉಪಸ್ಥಿತರಿದ್ದರು.ಸಮಾವೇಶದ ಭಿತ್ತಿ ಪತ್ರಗಳನ್ನು ಈ ವೇಳೆ ಬಿಡುಗಡೆಗೊಳಿಸಲಾಯಿತು.