ಕಾರಟಗಿ:
ತುಂಗಭದ್ರಾ ಎಡದಂಡೆ ಕಾಲುವೆಗೆ ಏ. ೨೦ರ ವರೆಗೆ ನೀರು ಹರಿಸಬೇಕೆಂದು ಒತ್ತಾಯಿಸಿ ಹೋರಾಟ ಮಾಡಲು ಕೊನೆ ಮತ್ತು ಕೆಳಭಾಗದ ರೈತರು ಶನಿವಾರ ರಾತ್ರಿ ಒಕ್ಕೊರಲಿನಿಂದ ತೀರ್ಮಾನಿಸಿದ್ದಾರೆ.ಕೆಳ ಭಾಗಕ್ಕೆ ಸಮರ್ಪಕ ನೀರು ಹರಿಸುವಂತೆ ಒತ್ತಾಯಿಸಿ ಮುಂಜಾಗ್ರತ ಕ್ರಮವಾಗಿ ಮಾ. ೧೯ರಂದು ಕಾರಟಗಿಯಲ್ಲಿ ಬೃಹತ್ ಪ್ರತಿಭಟನಾ ಕಾಲು ನಡೆಗೆ ಜಾಥಾ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆದು ಏ. ೨೦ರ ವರೆಗೆ ನೀರು ಹರಿಸಿಕೊಳ್ಳೋಣ ಎಂದು ತೀರ್ಮಾನಿಸಿದರು.
ತುಂಗಭದ್ರ ಎಡದಂಡೆ ನಾಲೆಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬೇಸಿಗೆ ಬೆಳೆಗಾಗಿ ರೈತರು ಭತ್ತ ಸೇರಿದಂತೆ ಇನ್ನಿತರ ಬೆಳೆ ಬೆಳೆದಿದ್ದಾರೆ. ಈ ಬೆಳೆ ರೈತರ ಕೈ ಸೇರಲು ಏ. ೨೦ರ ವರೆಗೂ ನೀರು ಹರಿಸಬೇಕು. ಈಗಾಗಲೇ ಅಣೆಕಟ್ಟೆಯಲ್ಲಿ ನೀರು ಸಂಗ್ರಹವಿದ್ದು, ೧೨ ಟಿಎಂಸಿ ನೀರು ನಮ್ಮ ಪಾಲಿನ ನೀರನ್ನು ಬಳಕೆ ಮಾಡಲು ಅನುಕೂಲ ಮಾಡಿಕೊಡಲು ಸರ್ಕಾರವನ್ನು ಒತ್ತಾಯಿಸಲು ತೀರ್ಮಾನಿಸಿದರು.ಎಡದಂಡೆ ನಾಲೆಗೆ ನಿತ್ಯ ೩೮೦೦ ಕ್ಯುಸೆಕ್ ಮತ್ತು ೩೧ ಮತ್ತು ೩೨ ವಿತರಣಾ ಕಾಲುವೆಗೆ ನಿತ್ಯ ೨೮೦ ಕ್ಯುಸೆಕ್ ನೀರು ಹರಿಸಿದರೆ ಮಾತ್ರ ಕೊನೆ ಮತ್ತು ಕೆಳಭಾಗಕ್ಕೆ ನೀರು ತಲುಪಸಲು ಸಾಧ್ಯ. ಆ ಪ್ರಕಾರವೇ ಕಾಲುವೆಯಲ್ಲಿ ನೀರು ಹರಿಸುವಂತೆ ಒತ್ತಾಯಿಸಿ ಕಾರಟಗಿಯ ನೀರಾವರಿ ಕಚೇರಿಯಿಂದ ತಹಸೀಲ್ದಾರ್ ಕಚೇರಿ ವರೆಗೆ ಕಾಲ್ನಡಿಗೆ ಜಾಥಾವನ್ನು ಶಾಂತಿಯುತವಾಗಿ ನಡೆಸುವ ಮೂಲಕ ರಾಜ್ಯ ಸರ್ಕಾರ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳ ಗಮನ ಹರಿಸುವಂತೆ ಚರ್ಚಿಸಲಾಯಿತು.
ನೀರು ಬಳಕೆದಾರರ ಸಂಘದ ಅಧ್ಯಕ್ಷ ಸಂಗಮೇಶ ಗೌಡ ಮಾತನಾಡಿ, ಭದ್ರ ಅಣೆಕಟ್ಟೆಯಿಂದ ರಾಜ್ಯ ಸರ್ಕಾರ ನೀರು ಬಿಡಿಸಿದರೆ ನಮಗೆ ಏ. ೨೦ರ ವರೆಗೆ ಸಾಕಾಗುವಷ್ಟು ನೀರು ಲಭ್ಯವಿದೆ. ಹೋರಾಟವನ್ನು ಶಾಂತಿಯುತವಾಗಿ ನಡೆಸಿ ಸರ್ಕಾರಕ್ಕೆ ನೀರಿನ ಅವಶ್ಯಕತೆಯ ಬಗ್ಗೆ ಮನವೋಲಿಸೋಣ ಎಂದರು.೩೧ನೇ ವಿತರಣಾ ವ್ಯಾಪ್ತಿಯ ಬೂದುಗುಂಪಾ, ತಿಮ್ಮಾಪುರ, ಹಾಲಸಮುದ್ರ, ಯರಡೋಣಾ, ರಾಜಾಕ್ಯಾಂಪ್, ಈಳಿಗನೂರು, ಈಳಿಗನೂರು ಕ್ಯಾಂಪ್, ಕಿಂದಿಕ್ಯಾಂಪ್, ಚೆನ್ನಳ್ಳಿ, ಮಾವಿನಮಡ್ಗು ಸೇರಿದಂತೆ ಇನ್ನಿತರ ಕ್ಯಾಂಪ್ ಮತ್ತು ಹಳ್ಳಿಗಳ ರೈತರು ಸಭೆಯಲ್ಲಿ ಪಾಲ್ಗೊಂಡಿದ್ದರು. ರೈತರಾದ ಬಸವರಾಜ ಕಡೇಮನಿ, ಅನೀಲ ಶೇಷಗಿರಿಕ್ಯಾಂಪ್, ಬಸವರಾಜ ಡಂಬಳ, ಸುರೇಶ ಬೆಳ್ಳಿತಟ್ಟಿ, ಅಂಬಣ್ಣ ಹರಿಜನ, ಭೀಮನಗೌಡ ಖಂಡ್ರಿ, ಸುರೇಶ ರಾಜಾಕ್ಯಾಂಪ್ ಇದ್ದರು.