ಹಾವೇರಿ: ಇತ್ತೀಚೆಗೆ ಹತ್ಯೆಗೀಡಾಗಿದ್ದ ಸ್ವಾತಿ ಬ್ಯಾಡಗಿ ಪ್ರಕರಣದಲ್ಲಿ ಪೊಲೀಸರಿಂದ ಲೋಪವಾಗಿದೆ. ಈ ಬಗ್ಗೆ ಸಂಪೂರ್ಣ ತನಿಖೆಯಿಂದ ಮಾತ್ರ ಸತ್ಯಾಂಶ ಹೊರಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವಿಶೇಷವಾಗಿ ಹೆಣ್ಣುಮಕ್ಕಳು ಮೃದು ಮನಸ್ಸಿನವರು ಇರುತ್ತಾರೆ. ಅವರು ಬಹಳ ನಿಷ್ಠೆಯಿಂದ ಇರುತ್ತಾರೆ. ಅವರ ಮಾತುಕತೆಯಲ್ಲಿ ವ್ಯತ್ಯಾಸವಾಗಿದೆ. ಅದನ್ನು ಊರಲ್ಲಿ ಹಿರಿಯರ ಗಮನಕ್ಕೆ ತಂದು ಬಗೆ ಹರಿಸಬಹುದಿತ್ತು. ಅದನ್ನು ಬಿಟ್ಟು ಅಮಾನೀಯವಾಗಿ, ಅಮಾನುಷವಾಗಿ ಹೆಣ್ಣು ಮಗಳನ್ನು ಕೊಲೆ ಮಾಡುವಂಥದ್ದು ಅತ್ಯಂತ ಹೀನ ಕೃತ್ಯ. ಇದನ್ನು ಯಾರೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಪೊಲೀಸರು ಮೂರು ದಿನಗಳ ನಂತರ ಶವ ಸಿಕ್ಕಿದೆ ಅಂತ ಹೇಳಿದ್ದಾರೆ. ಅವರ ತಾಯಿ ಫೋನ್ ನಂಬರ್ ಕೊಟ್ಟಾಗ ತನಿಖೆ ಚುರುಕುಗೊಳಿಸಿದ್ದಾರೆ. ಇದರಲ್ಲಿ ಪೊಲೀಸರಿಂದ ಲೋಪವಾಗಿದೆ. ಯಾರಾದರೂ ಕಾಣೆಯಾಗಿರುವ ಬಗ್ಗೆ ದೂರು ಕೊಟ್ಟಾಗ ಅದನ್ನು ಸುತ್ತಲಿನ ಪೊಲೀಸ್ ಸ್ಟೇಷನ್‌ಗಳಿಗೆ ಮಾಹಿತಿ ಕೊಡುತ್ತಾರೆ. ಆ ಬಗ್ಗೆ ಮಾಹಿತಿ ನೀಡದೇ ಸ್ವಾತಿಯ ಅಂತ್ಯಸಂಸ್ಕಾರ ಮಾಡಿದ್ದಾರೆ. ಹೀಗಾಗಿ ಹಲವಾರು ಸಂಶಯಗಳು ಹುಟ್ಟಿಕೊಳ್ಳುತ್ತವೆ ಎಂದು ಹೇಳಿದರು.ಇದರಲ್ಲಿ ಮೇಲ್ನೋಟಕ್ಕೆ ಲವ್ ಜಿಹಾದ್ ಅಂತ ಅನಿಸುತ್ತದೆ. ಇನ್ನೂ ಕೆಲವರು ಭಾಗವಹಿಸಿರುವುದನ್ನು ನೋಡಿದಾಗ ಸಂಪೂರ್ಣ ತನಿಖೆಯ ನಂತರ ಸತ್ಯಾಂಶ ಹೊರ ಬರಲಿದೆ. ಇದು ಮೇಲ್ನೋಟಕ್ಕೆ ಪ್ರೇಮ ಪ್ರಕರಣ ಅದರಲ್ಲಿ ಯಾವುದೇ ಅನುಮಾನವಿಲ್ಲ. ಅದೇ ಜಾಡು ಹಿಡಿದು ತನಿಖೆ ಮಾಡಬೇಕು. ಅಂದಾಗ ಮಾತ್ರ ಸತ್ಯ ಹೊರ ಬರಲಿದೆ ಎಂದರು.
ಕಾನೂನು ಸುವ್ಯವಸ್ಥೆಯ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎನ್ನುವುದು ಸಣ್ಣ ವಿಷಯ. ಕಾನೂನು ಸುವ್ಯವಸ್ಥೆಯೇ ಇಲ್ಲ. ಯಾರಿಗೂ ಕಾನೂನಿನ ಭಯವಿಲ್ಲ. ಪೊಲೀಸರ ಭಯವಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಈ ರೀತಿಯ ಪ್ರಕರಣಗಳೇ ಆಗುತ್ತಿರಲಿಲ್ಲ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಈ ರೀತಿಯ ಪ್ರಕರಣಗಳು ನಡೆಯುತ್ತವೆ. ಆದರೆ, ಗ್ರಾಮೀಣ ಪ್ರದೇಶದಲ್ಲಿಯೂ ಈ ರೀತಿಯ ಕೃತ್ಯಗಳು ನಡೆಯುತ್ತಿರುವುದು ಈ ರೀತಿಯ ಕೃತ್ಯ ಮಾಡುತ್ತಿರುವವರಿಗೆ ಯಾವುದೇ ಭಯವಿಲ್ಲದಂತಾಗಿದೆ ಎಂದು ಆರೋಪಿಸಿದರು.ಮಾಜಿ ಸಚಿವ ಬಿ.ಸಿ.ಪಾಟೀಲ್, ಪಾಲಾಕ್ಷಗೌಡ ಪಾಟೀಲ ಇತರರು ಇದ್ದರು.