ವಿದ್ಯುತ್ ಮೋಟಾರು ದುರಸ್ಥಿಗೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ರಿಂದ ₹50 ಲಕ್ಷ ನೆರವು । ತರಳಬಾಳು ಶ್ರೀಗಳ ಸಮ್ಮುಖದಲ್ಲಿ ಸಭೆಕನ್ನಡಪ್ರಭ ವಾರ್ತೆ ಸಿರಿಗೆರೆ
ರಾಜ್ಯ ಸರ್ಕಾರವು ಚಿತ್ರದುರ್ಗ–ದಾವಣಗೆರೆ ವ್ಯಾಪ್ತಿಯ ಕೆರೆಗಳನ್ನು ತುಂಬಿಸುವ ₹೯೪.೩ ಕೋಟಿ ಯೋಜನೆಗೆ ೨೦೦೭ರಲ್ಲಿ ಅನುಮತಿ ನೀಡಿತ್ತು. ಯೋಜನೆಯ ಕಾಮಗಾರಿಯ ಗುತ್ತಿಗೆಯನ್ನು ಎಲ್ ಅಂಡ್ ಟಿ ಸಂಸ್ಥೆಯು ಪಡೆದುಕೊಂಡಿತ್ತು. ಗುತ್ತಿಗೆದಾರರು ೨೦೧೪ರ ವರೆಗೆ ಕಾಮಗಾರಿ ನಡೆಸಿದರಾದರೂ ಯೋಜನೆ ವ್ಯಾಪ್ತಿಯ ಎಲ್ಲಾ ಕೆರೆಗಳಿಗೂ ನೀರು ಬರಲೇ ಇಲ್ಲ. ಇದರಿಂದ ಆ ಭಾಗದ ರೈತರು ನಿರಾಶರಾಗಿದ್ದರು.
ಪಕ್ಕದಲ್ಲಿಯೇ ಇರುವ ಭರಮಸಾಗರ ಮತ್ತು ಜಗಳೂರು ಏತ ನೀರಾವರಿ ಯೋಜನೆಗಳು ಅತ್ಯಂತ ಕಡಿಮೆ ಅವಧಿಯಲ್ಲಿ ಕಾಮಗಾರಿ ಮುಗಿಸಿ ಸುತ್ತಲಿನ ಕೆರೆಗಳನ್ನು ತುಂಬಿಸುತ್ತಿರುವುದನ್ನು ಕಣ್ಣಾರೆ ನೋಡುತ್ತಿದ್ದ ರೈತರಿಗೆ ತಮ್ಮ ಯೋಜನೆ ವಿಫಲವಾಗಿರುವುದು ಬೇಸರವನ್ನುಂಟು ಮಾಡಿತ್ತು. ಇದರ ವೈಫಲ್ಯವನ್ನು ಖಂಡಿಸಿ ಹೆಬ್ಬಾಳು ಟೋಲ್ ಬಳಿ ಪ್ರತಿಭಟನೆಗೆ ಮುಂದಾಗಿದ್ದ ರೈತರು ತರಳಬಾಳು ಜಗದ್ಗುರುಗಳ ನಿರ್ಧಾರದಿಂದ ಪ್ರತಿಭಟನೆ ಕೈಬಿಟ್ಟು ಮಠದ ಶಾಂತಿವನದಲ್ಲಿ ಶ್ರೀಗಳ ಸಮ್ಮುಖದಲ್ಲಿ ಸಭೆ ಸೇರಿ ೨೨ ಕೆರೆಗಳ ಏತ ನೀರಾವರಿಗೆ ಸಂಬಂಧಿಸಿದಂತೆ ಚರ್ಚೆ ನಡಿಸಿದ್ದಾರೆ.ರೈತರ ಜೊತೆಗಿನ ಮಾತುಕತೆಯ ನಂತರ ಶ್ರೀಗಳು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರೊಡನೆ ಯೋಜನೆಯನ್ನು ಸರಿದಾರಿಗೆ ತರುವ ಕ್ರಮಗಳ ಕುರಿತು ಚರ್ಚಿಸಿದ್ದಾರೆ. ಒಡೆದು ಹೋಗುತ್ತಿರುವ ಪೈಪ್‌ಲೈನ್‌ಗಳನ್ನು ಈಗಿರುವ ₹೫೦ ಲಕ್ಷ ಅನುದಾನದಲ್ಲಿ ವಿಳಂಬಕ್ಕೆ ಅವಕಾಶ ಇಲ್ಲದಂತೆ ದುರಸ್ಥಿ ಕೆಲಸವನ್ನು ನೀರಾವರಿ ನಿಗಮದ ಅಧಿಕಾರಿಗಳು ಮಾಡಬೇಕು. ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಆಗುವ ಮುನ್ನವೇ ಕೆರೆಗಳಿಗೆ ನೀರು ತುಂಬಿಸುವ ಉದ್ದೇಶ ಇರುವುದರಿಂದ ಅಧಿಕಾರಿಗಳು ವಿಳಂಬ ಇಲ್ಲದಂತೆ ಕೆಲಸ ಮಾಡಬೇಕು ಎಂದು ಶ್ರೀಗಳು ಸೂಚಿಸಿದ್ದಾರೆ.
ಕೆರೆ ಯೋಜನೆಯ ಪೈಪುಗಳನ್ನು ಹೊಸದಾಗಿ ಅಳವಡಿಸಲು ಸರ್ಕಾರದಿಂದ ೭೪ ಕೋಟಿ ರು. ಅನುದಾನ ದೊರೆತಿದೆ. ಮುಂದಿನ ಮಳೆಗಾಲದ ಒಳಗೆ ಯೋಜನಾ ವ್ಯಾಪ್ತಿಯ ಪೈಪುಗಳನ್ನು ಬದಲಿಸಿ ಯೋಜನೆಯು ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕು ಎಂದು ಶ್ರೀಗಳು ಅಧಿಕಾರಿಗಳಿಗೆ ಸೂಚಿಸಿದರು.
ಬರುವ ಡಿಸೆಂಬರ್ ಒಳಗೆ ಸಾಧ್ಯವಾದಷ್ಟು ಹೆಚ್ಚು ಪ್ರಮಾಣದ ನೀರನ್ನು ಕೆರೆಗಳಿಗೆ ತುಂಬಿಸುವ ಉದ್ದೇಶದಿಂದ ಜಾಕ್‌ವೆಲ್ -೧ ಮತ್ತು ೨ ರ ಮಧ್ಯೆ ಪೈಪುಗಳನ್ನು ದುರಸ್ಥಿ ಮಾಡಿ ಪೋಲಾಗುತ್ತಿರುವ ನೀರನ್ನು ತಡೆಗಟ್ಟಬೇಕು.
ಮಲ್ಲಶೆಟ್ಟಿಹಳ್ಳಿ ಜಾಕ್‌ವೆಲ್‌ಗೆ ನೀರು ಬಂದ ಮೇಲೆ ಸದ್ಯಕ್ಕೆ ಒಂದು ಪಂಪನ್ನು ಆನ್ ಮಾಡಿ ಮೊದಲ 11 ಕೆರೆಗಳಿಗೆ ಕಬ್ಬಿಣದ ಬೀಗ ಮುದ್ರೆ ಅಳವಡಿಸುವವರೆಗೂ ನೀರು ಬಿಡುವುದು. ಬೀಗ ಮುದ್ರೆ ಅಳವಡಿಸಿದ ಮೇಲೆ ಈ 11 ಕೆರೆಗಳ ವಾಲ್ವಗಳನ್ನು ಬಂದ್ ಮಾಡಿ ಮುಂದಿನ ಕೆರೆಗಳಿಗೆ ನೀರು ಬಿಡಬೇಕು.