ಹನುಮಸಾಗರ: ಹೈಟೆನ್ಶನ್ ವಿದ್ಯುತ್ ಕಂಬ ಅಳವಡಿಕೆ ಮಾಡಲು ಜಮೀನುಗಳಲ್ಲಿ ಕಟಾವು ಮಾಡುವ ಮರಗಳಿಗೆ ಎಷ್ಟು ಪರಿಹಾರ ನೀಡುತ್ತೀರಿ ಎಂಬುದನ್ನು ಮೊದಲೇ ತಿಳಿಸಬೇಕು ಎಂದು ರೈತರು ಒತ್ತಾಯಿಸಿದರು.
ಎಂ. ಪವರ್‌ಗ್ರಿಡ್ ಕೊಪ್ಪಳ ಗದಗ ಟ್ರಾನ್ಸ್‌ಮಿಷನ್ ಲಿಮಿಟೆಡ್‌ನ ಜನರಲ್ ಮ್ಯಾನೇಜರ್ ಹಾಗೂ ಎಂಜಿನಿಯರ್, ಕಂಬ ಅಳವಡಿಕೆ ಸ್ಥಳಕ್ಕೆ ಮಾತ್ರ ಎಷ್ಟು ಪರಿಹಾರ ನೀಡುತ್ತೇವೆ ಎಂದು ನಾವು ಈಗ ತಿಳಿಸಲು ಸಾಧ್ಯ. ಆದರೆ ಬೆಳೆಗಳಿಗೆ ಎಷ್ಟು ಪರಿಹಾರ ನೀಡುತ್ತೇವೆ ಎಂದು ಮೊದಲೇ ಹೇಳಲು ಆಗಲ್ಲ. ಏಕೆಂದರೆ ಕೆಲಸ ಮಾಡುವಾಗ ಈ ಹಿಂದೆ ಲೆಕ್ಕ ಹಾಕಿದ್ದಕ್ಕಿಂತ ಹೆಚ್ಚಿನ ಬೆಳೆ ನಾಶ ಆಗಬಹುದು. ಅದಕ್ಕಾಗಿ ಸಂಪೂರ್ಣ ಕೆಲಸ ಮುಗಿದ ಆನಂತರ ಎಷ್ಟು ಬೆಳೆ, ಯಾವ ಬೆಳೆ ಹಾನಿಯಾಗಿದೆ ಎಂದು ನಾವು ಲೆಕ್ಕಹಾಕಿ ಜಿಲ್ಲಾಧಿಕಾರಿಗೆ ಮಾಹಿತಿ ನೀಡುತ್ತೇವೆ. ಆಗ ಸರ್ಕಾರದಿಂದ ಡಿಸಿ ಕಚೇರಿ ಮೂಲಕ ರೈತರ ಖಾತೆಗೆ ಪರಿಹಾರ ಹಣ ಜಮಾ ಮಾಡಲಾಗುತ್ತದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ರೈತ ಮುಖಂಡರು, ಹಾನಿಯಾದ ಬೆಳೆಗಳಿಗೆ ನಂತರ ಪರಿಹಾರ ನೀಡುತ್ತೀರಿ ಸರಿ. ಆದರೆ, ಹೈಟೆನ್ಶನ್ ವೈರ್ ಹಾದು ಹೋಗುವ ಕೆಳಗಡೆ ಇರುವ ಮರಗಳನ್ನು ಕಡಿಯುವುದಕ್ಕೆ ಎಷ್ಟು ಪರಿಹಾರ ನೀಡುತ್ತೀರಿ ಎಂದು ಈಗಲೇ ದಾಖಲೆ ರೂಪದಲ್ಲಿ ನೀಡಬೇಕು ಎಂದು ಒತ್ತಾಯಿಸಿದರು.ಆನಂತರ ಎಂ. ಪವರ್‌ಗ್ರಿಡ್ ಕೊಪ್ಪಳ ಗದಗ ಟ್ರಾನ್ಸ್‌ಮಿಷನ್ ಲಿಮಿಟೆಡ್ ಕಂಪನಿ ಅಧಿಕಾರಿಗಳು ರೈತರೊಂದಿಗೆ ಸಭೆ ನಡೆಸಿ, ಹೈಟೆನ್ಶನ್ ವಿದ್ಯುತ್ ಕಂಬ ಅಳವಡಿಕೆ ಇರುವ ನಿಯಮಗಳ ಬಗ್ಗೆ ಮನವರಿಕೆ ಮಾಡಿದರು.