ಬರದಿಂದ ಹಾನಿಯಾದ ಬೆಳೆಗೆ ಎಕರೆಗೆ ₹೨೫ ಸಾವಿರ ಪರಿಹಾರ ನೀಡಲು ಆಗ್ರಹ

KannadaprabhaNewsNetwork | Published : Oct 8, 2023 12:00 AM

ಸಾರಾಂಶ

ಬೆಳೆಹಾನಿಗೆ ಕನಿಷ್ಠ ಎಕರೆಗೆ ೨೫ ಸಾವಿರ ಪರಿಹಾರ ನೀಡುವಂತೆ ಆಗ್ರಹಿಸಿ ಹಾವೇರಿಯಲ್ಲಿ ರೈತ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ. ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದ್ದಾರೆ.

ಹಾವೇರಿ: ಕೇಂದ್ರದ ಬರ ಅಧ್ಯಯನ ತಂಡ ತಾಲೂಕಿನಲ್ಲಿ ಬರ ಅಧ್ಯಯನ ಮಾಡಿ ತಾಲೂಕನ್ನು ಬರಪೀಡಿತ ಎಂದು ಘೋಷಿಸಿ ರೈತರಿಗೆ ಎಕರೆಗೆ ₹೨೫ ಸಾವಿರ ಪರಿಹಾರ ನೀಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾವೇರಿ ತಾಲೂಕು ಘಟಕದಿಂದ ಶುಕ್ರವಾರ ನಗರದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ವೇಳೆ ರೈತ ಮುಖಂಡರು ಮಾತನಾಡಿ, ಬೆಳೆ ವಿಮೆ ಕಂಪನಿಯವರು ಶೇ. ೨೫ರಷ್ಟು ಮಧ್ಯಂತರ ಬೆಳೆ ವಿಮೆ ಕೊಡುತ್ತೇವೆ ಎಂದು ಹೇಳಿದ್ದು, ಇದುವರೆಗೂ ಯಾವ ರೈತರಿಗೂ ಪರಿಹಾರ ನೀಡಿಲ್ಲ. ಕೂಡಲೇ ವಿಮೆ ಹಣ ರೈತರ ಖಾತೆಗೆ ಜಮಾ ಮಾಡಬೇಕು. ಅರಬಗೊಂಡ ಗ್ರಾಮದಲ್ಲಿ ಹಾವೇರಿ ಹಾಲು ಒಕ್ಕೂಟದ ಮೆಗಾ ಡೈರಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಸ್ಥಳೀಯ ಕೂಲಿ ಕಾರ್ಮಿಕರಿಗೆ ಯಾವುದೇ ಕೆಲಸ ನೀಡುತ್ತಿಲ್ಲ. ತಕ್ಷಣ ತಾಲೂಕಿನ ಕೂಲಿ ಕಾರ್ಮಿಕರಿಗೆ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು.

ಹಾವೇರಿ ಹಾಲು ಒಕ್ಕೂಟದಲ್ಲಿ ಸ್ಥಳೀಯ ರೈತರ ಮಕ್ಕಳನ್ನು ಕಡೆಗಣಿಸಿ ತಮಗೆ ಅನುಕೂಲ ಆಗುವವರನ್ನು ನೇರ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಈ ನೇರ ನೇಮಕಾತಿಗೆ ಸಂಬಂಧಿಸಿ ಹಾಲು ಒಕ್ಕೂಟದಲ್ಲಿ ಲಂಚದ ಬೇಡಿಕೆ ಇಡುತ್ತಿರುವುದು ಬೆಳಕಿಗೆ ಬಂದಿದೆ. ಇದರ ಬಗ್ಗೆ ಸರ್ಕಾರ ತನಿಖೆ ಕೈಗೊಳ್ಳಬೇಕು. ಹಾವೇರಿ ತಾಲೂಕು ಜಂಗಮನಕೊಪ್ಪದಲ್ಲಿ ಹಾಲು ಪ್ಯಾಕಿಂಗ್ (ಯುಎಚ್‌ಟಿ) ಘಟಕದಲ್ಲಿ ಕೆಲಸಗಾರರಿಗೆ ಕಿರುಕುಳ ನೀಡುತ್ತಿದ್ದು, ಹೆಚ್ಚುವರಿ ಕೆಲಸ ಮಾಡಿಸಿಕೊಂಡು ಸರಿಯಾಗಿ ಸಂಬಳ ನೀಡುತ್ತಿಲ್ಲ. ಇದರ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ತಾಲೂಕಿನಲ್ಲಿ ಇರುವ ಎಲ್ಲ ಪಶು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದ್ದು, ಕೂಡಲೇ ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಹಾವೇರಿ ತಾಲೂಕಿನಲ್ಲಿ ಯಾವುದೇ ಬೆಳೆ ಬಾರದೆ ಇರುವುದರಿಂದ ಕೂಲಿ ಕಾರ್ಮಿಕರು ಗುಳೆ ಹೋಗುತ್ತಿದ್ದಾರೆ. ಕಾರಣ ನಮ್ಮ ಹೊಲ ನಮ್ಮ ದಾರಿ ಯೋಜನೆಗೆ ಆದ್ಯತೆ ನೀಡಿ ಎನ್‌ಆರ್‌ಐಜಿ, ಸ್ಥಳೀಯ ಶಾಸಕರು ಮತ್ತು ಸಂಸದರ ಅನುದಾನ ಬಳಸಿಕೊಂಡು ಕೂಲಿ ಕಾರ್ಮಿಕರಿಗೆ ೧೫೦ ದಿನ ಕೆಲಸ ನೀಡಬೇಕು. ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆ ಮಾಡಿ ೧೦-೧೫ ವರ್ಷ ಆದರೂ ಇನ್ನೂ ಪರಿಹಾರ ನೀಡಿಲ್ಲ. ಹೊಲಗಳಿಗೆ ನೀರು ಹಾಯಿಸಲು ಕಿರು ಕಾಲುವೆಗಳನ್ನು ಮಾಡಿಲ್ಲ ಕೂಡಲೇ ಪರಿಹಾರ ನೀಡಿ ಕಿರು ಕಾಲುವೆಗಳನ್ನು ನಿರ್ಮಿಸಬೇಕು. ಹೊಸ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಸುವ ಅಕ್ರಮ-ಸಕ್ರಮ ಯೋಜನೆ ಸ್ಥಗಿತಗೊಳಿಸಿ ರೈತರಿಗೆ ಅನ್ಯಾಯ ಮಾಡಿದ್ದು, ಕೂಡಲೇ ಅಕ್ರಮ-ಸಕ್ರಮ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ತಾಲೂಕಿನ ಕೆರೆಗಳ ಹೂಳು ತೆಗೆದು ತುಂಗಾ ಮೇಲ್ದಂಡೆ ಕಾಲುವೆ ಮೂಲಕ ನೀರು ತುಂಬಿಸುವ ಯೋಜನೆ ಶೀಘ್ರವಾಗಿ ಅನುಷ್ಠಾನಗೊಳಿಸಬೇಕು. ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ಹೊತ್ತಿನಲ್ಲಿ ೭ ತಾಸು ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಬೇಕು. ಬ್ಯಾಡಗಿ, ಹಾನಗಲ್ಲ, ಶಿಗ್ಗಾಂವಿ ತಾಲೂಕುಗಳನ್ನು ಬರಗಾಲ ಪೀಡಿತ ಎಂದು ಘೋಷಿಸಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಅಮೃತಗೌಡ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

ರೈತ ಸಂಘದ ತಾಲೂಕಾಧ್ಯಕ್ಷ ದಿಳ್ಳೆಪ್ಪ ಮಣ್ಣೂರ, ಶಿವಯೋಗಿ ಹೊಸಗೌಡ್ರ, ಶಿವಬಸಪ್ಪ ಗೋವಿ, ಸುರೇಶ್ ಚಲವಾದಿ, ರಘುನಾಥ ಹಿರೆಕ್ಕನವರ, ಬಸವರಾಜ ನಿವಾಳಕರ, ಎಂ.ಎಂ. ಮುಲ್ಲಾ, ಕರಿಬಸಪ್ಪ ನಾಗಮ್ಮನವರ, ವೀರನಗೌಡ ಪಾಟೀಲ, ಚಂದ್ರಶೇಖರ ಮೂಲಿಮನಿ, ಕೊಟ್ರೇಶ್ ಕರ್ಜಗಿ, ಮಂಜುನಾಥ ನೆಗಳೂರ, ಅಡಿವೆಪ್ಪ ಹಾವಕ್ಕನವರ ಇತರರು ಇದ್ದರು.

Share this article