ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಕ್ಕರೆ ಕಾರ್ಖಾನೆ ಮಾಲೀಕರ ಪರವಿದ್ದಾರೆ. ಕಬ್ಬು ಬೆಳೆದ ರೈತರಿಗೆ ವಂಚನೆ ಮಾಡುತ್ತಿವೆ ಎಂದು ಆರೋಪಿಸಿ ಸಕ್ಕರೆ ಕಾರ್ಖಾನೆಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಪ್ರತಿಟನ್ ಕಬ್ಬಿಗೆ ₹5500 ಬೆಲೆ ನಿಗಧಿ ಪಡಿಸುವಂತೆ ಆಗ್ರಹಿಸಿದರು.
ಈ ವೇಳೆ ನೂರಾರು ರೈತರು ಏಕಾಏಕಿ ಕಾರ್ಖಾನೆ ಒಳಗೆ ಪ್ರವೇಶಿಸಿ ಸಕ್ಕರೆ ಗೋದಾಮಿಗೆ ಬೀಗ ಹಾಕಿ ಮುಂಭಾಗದಲ್ಲೇ ಧರಣಿ ಕುಳಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಎಂಎಸ್ಪಿ ನಿಗದಿ ಆಗುವವರೆಗೂ ಬೀಗ ತೆಗೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.ಪ್ರತಿಭಟನೆ ವೇಳೆ ರೈತರು ಕಾರ್ಖಾನೆ ಒಳಗೆ ನುಗ್ಗಲು ಯತ್ನಿಸಿದಾಗ ರೈತ ಮುಖಂಡರು ಹಾಗೂ ಭದ್ರತೆಗೆ ನಿಯೋಜನೆಗೊಂಡಿದ್ದ ಕಿಕ್ಕೇರಿ ಪೊಲೀಸ್ ಇನ್ಸ್ ಪೆಕ್ಟರ್ ಜಯರಾಮ್ ನಡುವೆ ಕೆಲಕಾಲ ಮಾತಿನ ಚಕಮಕಿ, ವಾಗ್ವಾದ ನಡೆದು ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಕಳೆದ ಏಳೆಂಟು ವರ್ಷದಿಂದ ಎಂಎಸ್ಪಿ ಹೆಚ್ಚಳವಾಗದ ಕಾರಣ ಎಫ್ ಆರ್ ಪಿ ದರ ನ್ಯಾಯಯುತವಾಗಿ ನಿಗದಿಯಾಗುತ್ತಿಲ್ಲ. ಮಾರುಕಟ್ಟೆಯಲ್ಲಿ ಸಕ್ಕರೆ ₹60 ರಿಂದ ₹70ಕ್ಕೆ ಮಾರಾಟವಾಗುತ್ತಿದ್ದು, ರೈತರಿಗೆ ಅನ್ಯಾಯವಾಗುತ್ತಿದೆ. ರಾಜ್ಯದ ಶೇ. 80ರಷ್ಟು ಸಕ್ಕರೆ ಕಾರ್ಖಾನೆಗಳು ರೈತರ ಪರ ಇಲ್ಲ ಎಂದು ಆಕ್ರೋಶ ಹೊರ ಹಾಕಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಮಾತನಾಡಿ, ರೈತರು ಭಿಕ್ಷೆ ಕೇಳದೇ ತಮ್ಮ ಬೆಳೆಗೆ ನ್ಯಾಯಯುತ ಬೆಲೆ ಕೇಳುತ್ತಿದ್ದಾರೆ. ಕಾರ್ಖಾನೆ ಇರುವುದು ರೈತರ ಕಬ್ಬಿನಿಂದ. ಎಂಎಸ್ ಪಿ ಬೆಲೆ ನಿಗಧಿ ಮಾಡುವವರೆಗೆ ಯಾವುದೇ ಕಾರಣಕ್ಕೂ ಗೋದಾಮಿನ ಸಕ್ಕರೆ ಮಾರಾಟ ಮಾಡಬಾರದು ಎಂದು ಸ್ಥಳದಲ್ಲಿದ್ದ ಕಾರ್ಖಾನೆ ಉಪಾಧ್ಯಕ್ಷ ವರದರಾಜನ್ ಅವರಿಗೆ ಮನವಿ ಸಲ್ಲಿಸಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಕುಮಾರ್, ಉಪಾಧ್ಯಕ್ಷ ವಡಕಹಳ್ಳಿ ಮಂಜುನಾಥ್, ಮಾಕವಳ್ಳಿ ಎಂ.ಸಿ ರಾಮೇಗೌಡ, ಕಿಕ್ಕೇರಿ ಕಾಯಿ ಮಂಜೇಗೌಡ, ಬಲರಾಮು, ಕರೋಟಿ ತಮ್ಮಯ್ಯ, ಶಿವೇಗೌಡ, ಹೋರಿ ಕಾಂತರಾಜು, ಹಿರೀಕಳಲೆ ಬಸವರಾಜ್, ನಾರಾಯಣಸ್ವಾಮಿ, ಕಿಟ್ಟಿ, ಮಹೇಶ್ ಸೇರಿ ನೂರಾರು ರೈತರು ಭಾಗವಹಿಸಿದ್ದರು.