ಹಳಿಯಾಳ: ಸ್ಥಳೀಯ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯವರು 2021- 22ಸಾಲಿನ ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚ ಹೆಚ್ಚುವರಿ ಕಡಿತ ಮಾಡಿದ ಬಗ್ಗೆ ತಜ್ಞರ ತನಿಖಾ ಸಮಿತಿ ನೀಡಿದ ವರದಿಯನ್ನು ಆಧರಿಸಿ ಸಕ್ಕರೆ ಕಬ್ಬು ಅಭಿವೃದ್ಧಿ ಆಯುಕ್ತರು ರೈತರಿಗೆ ಪ್ರತಿ ಟನ್‌ಗೆ ₹119 ಬಾಕಿ ಹಾಗೂ ಸರ್ಕಾರ ಆದೇಶಿಸಿದಂತೆ 2022- 23ನೇ ಸಾಲಿನಲ್ಲಿ ಕಬ್ಬಿನ ಉಪ ಉತ್ಪನ್ನಗಳ ಲಾಭ ಟನ್‌ಗೆ ₹256 ಪಾವತಿಸಿಯೇ ಪ್ರಸಕ್ತ ಸಾಲಿನ ಹಂಗಾಮನ್ನು ಆರಂಭಿಸಬೇಕು ಎಂದು ಕಬ್ಬು ಬೆಳೆಗಾರರು ಒಕ್ಕೊರಲಿನಿಂದ ತೀರ್ಮಾನಿಸಿದ್ದಾರೆ. ಭಾನುವಾರ ಪಟ್ಟಣದಲ್ಲಿ ನಡೆದ ಕಬ್ಬು ಬೆಳೆಗಾರರ ಸಮಾವೇಶದಲ್ಲಿ ಹಳಿಯಾಳ, ದಾಂಡೇಲಿ, ನೆರೆಯ ಧಾರವಾಡ ಜಿಲ್ಲೆ, ಅಳ್ನಾವರ, ಕಲಘಟಗಿ ಮತ್ತು ಮುಂಡಗೋಡ ತಾಲೂಕಿನ ಕಬ್ಬು ಬೆಳೆಗಾರರು ಈ ಮೇಲಿನಂತೆ ತೀರ್ಮಾನಿಸಿದರು. ಸಭೆಯಲ್ಲಿ ತೀರ್ಮಾನಿಸಿದ ಬೇಡಿಕೆಗಳ ಪ್ರತಿಯನ್ನು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಅವರು ಸಭಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಪ್ರವೀಣ ಹುಚ್ಚಣ್ಣನವರಿಗೆ ಸಲ್ಲಿಸಿದರು. ಕಳೆದ ವರ್ಷದ ಕಬ್ಬಿನ ಉಪ ಉತ್ಪನ್ನಗಳ ಲಾಭವನ್ನು ರೈತರಿಗೆ ಹಂಚಿಕೆ ಮಾಡಬೇಕು. 2022- 23ನೇ ಸಾಲಿನಲ್ಲಿ ಸರ್ಕಾರ ಆದೇಶ ಮಾಡಿದಂತೆ ಕಬ್ಬಿನ ಹೆಚ್ಚುವರಿ ದರ ಪ್ರತಿ ಟನ್‌ಗೆ ₹150 ರೈತರಿಗೆ ಕಾರ್ಖಾನೆಯವರು ಪಾವತಿಸಬೇಕು. ಸ್ಥಳೀಯ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಸರ್ಕಾರ ಜಾರಿ ಮಾಡಿರುವ ರೈತರೊಂದಿಗೆ ದ್ವಿಪಕ್ಷಿಯ ಒಪ್ಪಂದವನ್ನು ಪತ್ರವನ್ನು ಜಾರಿ ಮಾಡಬೇಕು. ಹಲವು ವರ್ಷಗಳಿಂದ ಸಕ್ಕರೆ ಇಳುವರಿ ಪ್ರಮಾಣವನ್ನು ಕಡಿಮೆಯಾಗಿ ತೋರಿಸಿ ರೈತರನ್ನು ವಂಚಿಸುತ್ತಿದ್ದ ಬಗ್ಗೆ ತನಿಖೆಯಾಗಬೇಕು. ಕಬ್ಬಿನ ತೂಕದಲ್ಲಿ ಮೋಸ ಮಾಡುವುದನ್ನು ತಪ್ಪಿಸಲು ಕಾರ್ಖಾನೆಯ ಮುಂದೆ ಎಪಿಎಂಸಿ ವತಿಯಿಂದ ತೂಕದ ಯಂತ್ರವನ್ನು ಅಳವಡಿಸಬೇಕು ಎಂದು ಆಗ್ರಹಿಸಲಾಯಿತು.